Advertisement
ಅಗತ್ಯತೆ ಏನು?:
Related Articles
Advertisement
ಪಾಕಿಸ್ಥಾನ ಮತ್ತು ಚೀನ ನಮ್ಮ ದೇಶದ ರಕ್ಷಣ ವ್ಯವಸ್ಥೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಲೆನೋವು ತರುವ ರಾಷ್ಟ್ರಗಳೇ. ಬಾಂಧವ್ಯ ವೃದ್ಧಿಗಾಗಿ ಕೇಂದ್ರದಲ್ಲಿ ಇರುವ ಸರಕಾರಗಳು ಎಷ್ಟೇ ಸ್ನೇಹಹಸ್ತ ಚಾಚಿದ್ದರೂ ಅಂತಿಮವಾಗಿ ಆ ಎರಡು ರಾಷ್ಟ್ರಗಳು ಯಾವ ರೀತಿ ಪ್ರತಿಕ್ರಿಯೆ ನೀಡಿವೆ ಎನ್ನುವುದು ಬಹಿರಂಗ ಸತ್ಯ. ಅದರಲ್ಲೂ ವಿಶೇಷವಾಗಿ ಗಾಲ್ವಾನ್ ಗಲಾಟೆ, ಡೋಕ್ಲಾಂ ಕಿಡಿಗೇಡಿತನದ ಬಳಿಕ ಚೀನ ವಿರುದ್ಧ ಸರ್ವ ಸನ್ನದ್ಧತೆಯನ್ನು ಹೊಂದಿರುವುದು ಅನಿವಾರ್ಯವೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ರಕ್ಷಣ ಖರೀದಿ ಮಂಡಳಿ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ 88,604 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ ನೀಡಿದೆ. ಆಮದು ನಿರ್ಣಯಕ್ಕಿಂತ ದೇಶೀಯವಾಗಿ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಆದ್ಯತೆ ಕೊಡಲಾಗಿದೆ ಎನ್ನುವುದು ಗಮನಾರ್ಹ.
ಯಾವಾಗ ಲಭ್ಯ? :
ರಕ್ಷಣ ಸಚಿವಾಲಯದ ಸದ್ಯದ ನಿರೀಕ್ಷೆಯ ಪ್ರಕಾರ ಇನ್ನು ನಾಲ್ಕು ವರ್ಷಗಳ ಬಳಿಕ ಸೇನೆಗೆ ಲಭ್ಯ.
ಸಿಗಲಿದೆ ಹೆಲಿನಾ ಶಕ್ತಿ:
ಹೆಲಿಕಾಪ್ಟರ್‌ನಿಂದ ಶತ್ರು ರಾಷ್ಟ್ರಗಳ ಯುದ್ಧ ಟ್ಯಾಂಕ್‌ಗಳನ್ನು ಉಡಾಯಿಸಲು ಸಾಧ್ಯವಿರುವ “ಹೆಲಿನಾ’ ಕ್ಷಿಪಣಿ ಶಕ್ತಿ ಭೂಸೇನೆಗೆ ಸಿಗಲಿದೆ. ಇದರ ಜತೆಗೆ ಸುಧಾರಿತ ಹಗುರ ಹೆಲಿಕಾಪ್ಟರ್ (ಎಎಲ್‌ಎಚ್) ಕೂಡ ಲಭ್ಯವಾಗಲಿದೆ. ಏಳು ಕಿಮೀ ದೂರದಲ್ಲಿ ಇರುವ ಯುದ್ಧ ಟ್ಯಾಂಕ್‌ಗಳನ್ನು ಸಮರ್ಥವಾಗಿ ಉಡಾಯಿಸುವ ಸಾಮರ್ಥ್ಯವನ್ನು ಅದು ಹೊಂದಿದೆ. 2022 ಎ.11ರಂದು ಕೇಂದ್ರ ಸರಕಾರ ನೀಡಿದ್ದ ಮಾಹಿತಿ ಪ್ರಕಾರ ರಾಜಸ್ಥಾನದ ಪೋಖಾÅಣ್‌ನಲ್ಲಿ ಅದರ ಯಶಸ್ವಿ ಪರೀಕ್ಷೆಯೂ ನಡೆದಿತ್ತು. ಡಿಆರ್‌ಡಿಒ ಹೈದರಾಬಾದ್ ಅದರ ಬಗ್ಗೆ ಸಂಶೋಧನೆ ಕೈಗೆತ್ತಿಕೊಂಡು ಅದನ್ನು ಅಭಿವೃದ್ಧಿಪಡಿಸಿದೆ.
ಇನ್ನೊಂದು ಹೆಸರು ಧ್ರುವಾಸ್ತ್ರ:
“ಹೆಲಿನಾ’ಕ್ಕೆ ಧ್ರುವಾಸ್ತ್ರ ಎಂಬ ಮತ್ತೂಂದು ಹೆಸರೂ ಇದೆ. ಸರ್ವ ಋತು ಬಳಕೆಗೆ ಯೋಗ್ಯವಾಗಿದೆ ಮತ್ತು ರಾತ್ರಿ ಅಥವಾ ಹಗಲು ಎಂಬ ಭೇದವಿಲ್ಲದೆ ಯುದ್ಧ ಸಂದರ್ಭದಲ್ಲಿ ಪ್ರಯೋಗಿಸಲು ಸಾಧ್ಯ. ಭೂಸೇನೆ ಮತ್ತು ವಾಯುಸೇನೆಯ ಬಳಕೆಗಾಗಿ ಅಭಿವೃದ್ಧಿಗೊಳಿಸಲಾಗಿದೆ.
ಬ್ರಹ್ಮೋಸ್ ಮಿಸೈಲ್ ಲಾಂಚರ್:
ಭಾರತೀಯ ನೌಕಾಪಡೆಗಾಗಿ ಬ್ರಹ್ಮೋಸ್ ಕ್ಷಿಪಣಿ ಉಡಾಯಿಸುವ ವ್ಯವಸ್ಥೆ ಲಭ್ಯವಾಗಲಿದೆ. ಜತೆಗೆ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಯೂ ಸಿಗಲಿದೆ. 2010ರ ಎಪ್ರಿಲ್‌ನಲ್ಲಿ ಸೇವೆಗೆ ಲಭ್ಯವಾಗಿರುವ ಶಿವಾಲಿಕ್ ಯುದ್ಧ ನೌಕೆಗಳ ಉಪಯೋಗಕ್ಕಾಗಿ ಆ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆ ಖರೀದಿಸಲಾಗಿದೆ.
ಇವೆಲ್ಲ ಯಾವಾಗ ಲಭ್ಯ?:
ಕೇಂದ್ರ ಸರಕಾರ ಅನುಮೋದನೆ ನೀಡಿದ್ದರೂ ಅದು ಸೇವೆಗೆ ಲಭ್ಯವಾಗಲು ಇನ್ನೂ ಆರು ವರ್ಷಗಳು ಬೇಕು.
ಒಂದು ತಿಂಗಳ ಅವಧಿಯಲ್ಲಿ 2ನೇ ಬಾರಿ :
2022 ಡಿ.26ರಂದು ಡಿಎಸಿ 84 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವುದರ ಬಗ್ಗೆ ಅನುಮೋದನೆ ನೀಡಿತ್ತು. ಭೂಸೇನೆಯ ಆರು, ಭಾರತೀಯ ವಾಯುಪಡೆಯ ಆರು, ಭಾರತೀಯ ನೌಕಾದಳದ ಹತ್ತು, ಭಾರತೀಯ ಕರಾವಳಿ ರಕ್ಷಣ ದಳದ ಎರಡು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿತ್ತು.
ಏನಿದು ರಕ್ಷಣ ಖರೀದಿ ಸಮಿತಿ?:
ದೇಶದ ರಕ್ಷಣ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವುದಿದ್ದರೆ ಈ ಸಮಿತಿಯೇ ನಿರ್ಧಾರ ಮಾಡುತ್ತದೆ. ಬಂಡವಾಳ ಹೂಡಿಕೆ, ಶಸ್ತ್ರಾಸ್ತ್ರ ಖರೀದಿ, ತಂತ್ರಜ್ಞಾನ ವರ್ಗಾವಣೆಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಈ ಸಮಿತಿ- ಡಿಎಸಿ ಡಿಫೆನ್ಸ್ ಎಕ್ವಿಸಿಶನ್ ಕಮಿಟಿ ಅಥವಾ ರಕ್ಷಣ ಖರೀದಿ ಸಮಿತಿ ಮಾಡುತ್ತದೆ. ರಕ್ಷಣ ಸಚಿವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ರಕ್ಷಣ ಖಾತೆ ಸಹಾಯಕ ಸಚಿವ, ಭೂಸೇನೆ, ನೌಕಾಪಡೆ, ಐಎಎಫ್ ಮುಖ್ಯಸ್ಥ, ರಕ್ಷಣ ಕಾರ್ಯದರ್ಶಿ, ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ರಕ್ಷಣ ಉತ್ಪಾದನೆ ವಿಭಾಗದ ಕಾರ್ಯದರ್ಶಿ, ಏಕೀಕೃತ ರಕ್ಷಣ ಪಡೆಗಳ ಪ್ರಧಾನ ಕಚೇರಿಯ (ಐಡಿಎಸ್) ಮುಖ್ಯಸ್ಥ, ಖರೀದಿ ವಿಭಾಗದ ಮಹಾನಿರ್ದೇಶಕ ಸದಸ್ಯರಾಗಿರುತ್ತಾರೆ. ಏಕೀಕೃತ ರಕ್ಷಣ ಪಡೆಗಳ ಉಪ ಮುಖ್ಯಸ್ಥರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಕಾರ್ಗಿಲ್ ಯುದ್ಧದ ಬಳಿಕ ರಕ್ಷಣ ಪಡೆಗಳ ಆಧುನೀಕರಣಕ್ಕೆ ಸಲಹೆ ಮಾಡಿದ್ದ ಸಮಿತಿಯ ಶಿಫಾರಸುಗಳಲ್ಲಿ ರಕ್ಷಣ ಖರೀದಿ ಸಮಿತಿ ರಚನೆಯೂ ಒಂದಾಗಿತ್ತು.
ಏನೇನು ಖರೀದಿ?:
ಭೂಸೇನೆಗಾಗಿ “ಫ್ಯೂಚರಿಸ್ಟಿಕ್ ಇನ್‌ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್- ಎಫ್ಐಸಿವಿ’ ಖರೀದಿ. ವಿಶೇಷವಾಗಿ ಚೀನ ಜತೆಗೆ ಉಂಟಾಗಿರುವ ಗಡಿ ತಕರಾರು ನಿಭಾಯಿಸುವ ನಿಟ್ಟಿನಲ್ಲಿ ಅದು ನೆರವಾಗಲಿದೆ. ಇದು ಹೊಸ ಮಾದರಿಯ ಯುದ್ಧ ಟ್ಯಾಂಕ್ ಆಗಿರಲಿದ್ದು, ದೇಶೀಯವಾಗಿ ಟಾಟಾ ಗ್ರೂಪ್ ಉತ್ಪಾದಿಸಲಿದೆ. ಮೌಂಟಿಂಗ್ ಗನ್ ಸಿಸ್ಟಮ್ ಕೂಡ ಲಭ್ಯವಾಗಲಿದೆ.
ಐಎಎಫ್ಗಾಗಿ ಹೊಸ ಮತ್ತು ಆಧುನಿಕ ತಂತ್ರಜ್ಞಾನದಿಂದ ಒಡಗೂಡಿದ ಕ್ಷಿಪಣಿ ವ್ಯವಸ್ಥೆ, ದೂರ ಸ್ಥಳದಲ್ಲಿ ಉಡಾಯಿಸಬಹುದಾದ ನಿಯಂತ್ರಿತ ಬಾಂಬ್ ವ್ಯವಸ್ಥೆ, ಸುಧಾರಿತ ನಿಗಾ ಏರ್ಪಾಡುಗಳು.
ಭಾರತೀಯ ನೌಕಾಪಡೆಗಾಗಿ ಅತ್ಯಾಧುನಿಕ ಹಾರ್ಡ್‌ವೇರ್ ವ್ಯವಸ್ಥೆ. ಶತ್ರು ರಾಷ್ಟ್ರಗಳ ಹಡಗುಗಳನ್ನು ಧ್ವಂಸಗೊಳಿಸಲು ಬೇಕಾಗಿರುವ ಕ್ಷಿಪಣಿಗಳು, ಬಹೂಪಯೋಗಿ ಹಡಗುಗಳು, ಸ್ವಯಂಚಾಲಿತವಾಗಿ ಚಲಿಸುವ ಮತ್ತು ಒಂದು ಹಂತದ ಆಘಾತ ಸಹಿಸಿ ಕಡಲು ಸಂರಕ್ಷಣೆಗೆ ಬೇಕಾಗುವ ನಾವೆಗಳ ಖರೀದಿ.
– ಸದಾಶಿವ ಕೆ.