ಕಲಬುರಗಿ: ಜಿಲ್ಲೆಯಲ್ಲಿ ಭೀಮಾ ನದಿಯ ಪ್ರವಾಹದಿಂದ ಜನರನ್ನು ರಕ್ಷಿಸಲು ಭಾರತೀಯ ಸೇನೆ ಶನಿವಾರ ಬಂದಿಳಿದೆ. ಸಿಖಂದರಾಬಾದ್ ನಿಂದ ಮೇಜರ್ ಮಾರ್ಟಿನ್ ಅರವಿಂದ ಅವರ ನೇತೃತ್ವದ 98 ಜನ ಯೋಧರ ತಂಡ ಆಗಮಿಸಿದೆ.
ಮಹಾರಾಷ್ಟ್ರದಿಂದ ದಾಖಲೆ ಪ್ರಮಾಣದಲ್ಲಿ ಭೀಮಾ ನದಿಗೆ ನೀರು ಹರಿಸಲಾಗುತ್ತಿದ್ದು, ಶನಿವಾರ ಬರೋಬ್ಬರಿ ಎಂಟು ಲಕ್ಷ ಕ್ಯೂಸೆಕ್ ಹರಿದು ಬಂದಿದೆ. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಬರುವ ಭಾರಿ ಪ್ರಮಾಣದ ನೀರನ್ನು ಅಷ್ಟೇ ಪ್ರಮಾಣದಲ್ಲಿ ನದಿಗೆ ಹರಿ ಬಿಡಲಾಗುತ್ತಿದ್ದು, ನದಿ ಪಾತ್ರದ 157 ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ.
ಭೀಕರ ಪ್ರವಾಹದಲ್ಲಿ ಸಿಲುಕಿ ಜನರು ಜೀವ ರಕ್ಷಣೆಗಾಗಿ ಪರದಾಡುತ್ತಿದ್ದಾರೆ. ಈಗಾಗಲೇ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮತ್ತು ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈಗ ಭಾರತೀಯ ಸೇನೆ ನೆರವಿಗೆ ಆಗಮಿಸಿದ್ದು, ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇನಾ ತುಕಡಿಯನ್ನು ಬರಮಾಡಿಕೊಂಡರು.
ಇದನ್ನೂ ಓದಿ:ಕೃಷಿ ಕ್ಷೇತ್ರದಲ್ಲಿ ಪರಿಸರಸ್ನೇಹಿ ಅವಿಷ್ಕಾರಗಳು ನಡೆಯುತ್ತಿರಬೇಕು : ಸಚಿವ ಸದಾನಂದ ಗೌಡ
ಶನಿವಾರ ರಾತ್ರಿಯಿಂದಲೇ ಸೇನಾ ಪಡೆ ರಕ್ಷಣಾ ಕಾರ್ಯಕ್ಕೆ ಧುಮುಕಲಿದೆ. 98 ಜನ ಯೋಧರು ಮೂರು ತಂಡಗಳಾಗಿ ಅಫಜಲಪೂರ, ಜೇವರ್ಗಿ ಹಾಗೂ ಶಹಾಬಾದ ತಾಲೂಕಿನಲ್ಲಿ ಜನರ ರಕ್ಷಣಾ ಕಾರ್ಯಾಚರಣೆಗೆ ಇಳಿಯಲಿದೆ.