ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ತಮಾನ್ ಅವರು ಸುಮಾರು ಆರು ತಿಂಗಳುಗಳ ವಿರಾಮದ ಬಳಿಕ ಸೆಪ್ಟಂಬರ್ ಮೂರರಂದು ಮೊದಲ ಬಾರಿಗೆ ಮಿಗ್ 21 ಯುದ್ಧ ವಿಮಾನವನ್ನು ಚಲಾಯಿಸಲಿದ್ದಾರೆ.
ಸೆಪ್ಟಂಬರ್ ಮೂರರಂದು ಪಠಾಣ್ ಕೋಟ್ ವಾಯುನೆಲೆಯಲ್ಲಿ ನಡೆಯಲಿರುವ ಬೋಯಿಂಗ್ ಎ.ಎಚ್.-64ಇ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಫ್ಟರ್ ವಾಯು ಸೇನೆಗೆ ಸೇರ್ಪಡೆಗೊಳಿಸುವ ಸಮಾರಂಭದಲ್ಲಿ ಅಭಿನಂದನ್ ಅವರು ಮಿಗ್ ಚಾಲನೆ ಮಾಡಲಿದ್ದಾರೆ.
ವಿಶ್ವದ ಪ್ರಬಲ ಮಾರಕ ಯುದ್ಧ ಹೆಲಿಕಾಫ್ಟರ್ ಗಳಲ್ಲಿ ಒಂದಾಗಿರುವ ಬೋಯಿಂಗ್ ಎ.ಹೆಚ್.-64 ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಫ್ಟರ್ ನ ಪ್ರಥಮ ಕಂತು ಜುಲೈ ತಿಂಗಳಿನಲ್ಲಿ ಗಾಝಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ಪ್ರಾಯೋಗಿಕ ಪರೀಕ್ಷೆಗಾಗಿ ಆಗಮಿಸಿತ್ತು. ಇವುಗಳ ಪ್ರಯೋಗಾರ್ಥ ಹಾರಾಟ ಪರೀಕ್ಷೆಗಳ ಬಳಿಕ ಅಲ್ಲಿಂದ ಅವುಗಳನ್ನು ಇದೀಗ ಪಠಾಣ್ ಕೋಟ್ ವಾಯುನೆಲೆಗೆ ರವಾನಿಸಲಾಗಿದ್ದು ಇಲ್ಲಿ ಈ ಹೆಲಿಕಾಫ್ಟರ್ ಗಳು ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳ್ಳಲಿವೆ.
ಪಾಕಿಸ್ಥಾನದಲ್ಲಿರುವ ಜೈಶ್ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದ ಬಳಿಕ ಭಾರತ ಪಾಕಿಸ್ಥಾನ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆ ಸಂದರ್ಭದಲ್ಲಿ ಎರಡೂ ದೇಶಗಳ ಯುದ್ಧ ವಿಮಾನಗಳ ಮೇಲಾಟದಲ್ಲಿ ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ತಾನು ಚಲಾಯಿಸುತ್ತಿದ್ದ ಮಿಗ್ ವಿಮಾನದ ಮೂಲಕ ಹೊಡೆದುರುಳಿಸಿದ್ದರು. ಆ ಬಳಿಕ ಅವರ ವಿಮಾನವೂ ಪತನಗೊಂಡು ಅಭಿನಂದನ್ ಪಾಕಿಸ್ಥಾನದ ಸೆರೆಯಾಳಾಗಿದ್ದರು.
ಆ ಬಳಿಕ 60 ಗಂಟೆಗಳ ಒಳಗಾಗಿ ಭಾರತ ಸರಕಾರ ಅಭಿನಂದನ್ ಅವರನ್ನು ಮರಳಿ ದೇಶಕ್ಕೆ ಸುರಕ್ಷಿತವಾಗಿ ಕರೆಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಅಂದಿನಿಂದ ಅಭಿನಂದನ್ ಅವರು ವಾಯುಪಡೆಯ ಸೇವೆಗೆ ಮರಳಿರಲಿಲ್ಲ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಭಿನಂದನ್ ಅವರಿಗೆ ವೀರ ಚಕ್ರ ಪುರಸ್ಕಾರ ನೀಡಿ ಭಾರತ ಸರಕಾರ ಗೌರವಿಸಿತ್ತು.