Advertisement

ನೇಪಥ್ಯಕ್ಕೆ ಮಿಗ್‌ 21 ವಿಮಾನ, ಸಕಾಲಿಕ ಕ್ರಮ

12:30 AM Jul 30, 2022 | Team Udayavani |

ಭಾರತದ ವಾಯುಪಡೆಗೆ ಸೇರ್ಪಡೆಯಾದಾಗಿನಿಂದಲೂ ಮಿಗ್‌ 21 ಯುದ್ಧ ವಿಮಾನಗಳ ಅಪಘಾತ ಸರಣಿ ನಿಂತಿಲ್ಲ. ವಿಪರ್ಯಾಸವೆಂದರೆ, ಈ ಯುದ್ಧ ವಿಮಾನಗಳನ್ನು ಶವದ ಹಾರುಪೆಟ್ಟಿಗೆಗಳು ಎಂದೇ ಕರೆಯಲಾಗುತ್ತಿತ್ತು. 1963ರಲ್ಲಿ ರಷ್ಯಾ ನಿರ್ಮಿತ ಯುದ್ಧವಿಮಾನವು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಒಟ್ಟಾರೆಯಾಗಿ 400 ಅಪಘಾತಗಳಾಗಿವೆ. ಸರಿಸುಮಾರು 200ಕ್ಕೂ ಅಧಿಕ ಪೈಲಟ್‌ಗಳು ಜೀವ ಕಳೆದುಕೊಂಡಿದ್ದಾರೆ.

Advertisement

ಗುರುವಾರ ರಾತ್ರಿಯಷ್ಟೇ ರಾಜಸ್ಥಾನದ ಬರ್ಮರ್‌ನಲ್ಲಿ ಮಿಗ್‌ 21 ಯುದ್ಧ ವಿಮಾನದ ಅಪಘಾತವಾಗಿದ್ದು, ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ. ಈ ಘಟನೆ ಬಳಿಕವೇ ರಕ್ಷಣ ಸಚಿವಾಲಯ ಈ ಬಗ್ಗೆ ಕಠಿನ ನಿರ್ಧಾರಕ್ಕೆ ಬಂದಿದ್ದು, 2025ರ ಸೆಪ್ಟಂಬರ್‌ ವೇಳೆಗೆ ಮಿಗ್‌ 21 ಯುದ್ಧ ವಿಮಾನಗಳಿಗೆ ನಿವೃತ್ತಿ ಹೇಳಲು ತೀರ್ಮಾನಿಸಿದೆ.

ಈ ಯುದ್ಧ ವಿಮಾನವನ್ನು ಖರೀದಿಸಿದಾಗಿನಿಂದಲೂ ಅಪಘಾತಕ್ಕೀಡಾಗುತ್ತಲೇ ಇದೆ. ಆದರೆ ದುರದೃಷ್ಟವಶಾತ್‌ ಭಾರತದ ಬತ್ತಳಿಕೆಯಲ್ಲಿ ಇದಕ್ಕೂ ಹೆಚ್ಚಿನ ಸಾಮರ್ಥ್ಯದ ಯುದ್ಧ ವಿಮಾನಗಳು ಇಲ್ಲದೇ ಹೋಗಿದ್ದುದು, ಅನಿವಾರ್ಯವಾಗಿ ಇವುಗಳನ್ನೇ ಉಪಯೋಗಿಸುವಂತೆ ಆಗಿತ್ತು. ಅಲ್ಲದೆ, ಮೊದಲೇ ಹೇಳಿದ ಹಾಗೆ, ಅಲ್ಲಿಂದ ಇಲ್ಲಿವರೆಗೆ 400ಕ್ಕೂ ಹೆಚ್ಚು ಅಪಘಾತಗಳೂ ನಡೆದು ಹೋಗಿರುವುದರಿಂದ ಇವುಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತದೆ ಬೇರೆ ಮಾರ್ಗವೇ ಇಲ್ಲದ ಸ್ಥಿತಿ ಉಂಟಾಗಿತ್ತು. ಜತೆಗೆ ವಾಯುಪಡೆಯಿಂದ ಇವುಗಳನ್ನು ವಾಪಸ್‌ ಪಡೆಯಬೇಕು ಎಂಬ ಒತ್ತಾಯವೂ ಈ ಹಿಂದೆಯೇ ಕೇಳಿಬಂದಿತ್ತು.

ಈಗ ವಾಯುಸೇನೆಯಿಂದ ಈ ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸುವ ನಿರ್ಧಾರದ ಹಿಂದೆ ರಫೇಲ್‌ ಯುದ್ಧ ವಿಮಾನಗಳ ಶಕ್ತಿಯೂ ಇದೆ. ಅಂದರೆ, ಮಿಗ್‌ 21ಕ್ಕಿಂತ ಹೆಚ್ಚಿನ ಸಾಮರ್ಥ್ಯ ಇರುವ ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನಗಳು ವಾಯುಸೇನೆಗೆ ಹೆಚ್ಚಿನ ಶಕ್ತಿ ತುಂಬಿವೆ. ಹೀಗಾಗಿ, ಮಿಗ್‌ 21ರ ನೆರವು ಇಲ್ಲದೇ, ಬಾಹ್ಯ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದು ಕೇಂದ್ರ ಸರಕಾರದ ಚಿಂತನೆಯೂ ಆಗಿದೆ.

ವಿಚಿತ್ರವೆಂದರೆ, ಈ ಯುದ್ಧ ವಿಮಾನಗಳು ಆಗಾಗ ಅಪಘಾತಕ್ಕೀಡಾಗುತ್ತವೆ ಎಂಬ ಆತಂಕ ಒಂದು ಕಡೆಯಾದರೆ, ಈ ಯುದ್ಧ ವಿಮಾನಗಳ ಶಕ್ತಿ ಬಗ್ಗೆ ಯಾರಲ್ಲೂ ಅನುಮಾನವಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ, 2019  ರಲ್ಲಿನ ಭಾರತ-ಪಾಕಿಸ್ಥಾನ ಘರ್ಷಣೆ ವೇಳೆ ಆಗಿನ ವಿಂಗ್‌ ಕಮಾಂ ಡರ್‌ ಅಭಿನಂದನ್‌ ವರ್ಧಮಾನ್‌ ಅವರು ಮಿಗ್‌ 21 ಯುದ್ಧ ವಿಮಾನವೇ, ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು.

Advertisement

ಇದರ ಜತೆಯಲ್ಲೇ, ಮಿಗ್‌ 21 ಯುದ್ಧ ವಿಮಾನಗಳು ಆಗಾಗ ದುರಂತಕ್ಕೀಡಾಗುತ್ತಿರುವುದಕ್ಕೆ ಕಾರಣವೇನು ಎಂಬ ಕುರಿತಂತೆಯೂ ಅಧ್ಯಯನ ನಡೆಸಲಾಗಿದೆ. ತಜ್ಞರ ಪ್ರಕಾರ, ಇದು ಸಿಂಗಲ್‌ ಎಂಜಿನ್‌ ಯುದ್ಧ ವಿಮಾನವಾಗಿರುವುದರಿಂದ ಹೆಚ್ಚಿನ ಅಪಘಾತಗಳಾಗುತ್ತಿವೆ. ಒಂದು ವೇಳೆ ಎಂಜಿನ್‌ ಆಫ್ ಆದರೆ, ಮತ್ತೆ ಇದನ್ನು ಸ್ಟಾರ್ಟ್‌ ಮಾಡಲು ಸಮಯ ಬೇಕು. ಇಂಥ ಸಂದರ್ಭದಲ್ಲಿಯೇ ಹೆಚ್ಚಾಗಿ ಅಪಘಾತಗಳು ನಡೆಯುತ್ತವೆ ಎಂದು ಹೇಳುತ್ತಾರೆ.

ಮಿಗ್‌ 21 ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈಗ ಆಧುನಿಕ ಕಾಲದಲ್ಲಿ ಮಿಗ್‌ 21ಗಿಂತ ಹೆಚ್ಚು ಸುಧಾರಿತ ಎಂಜಿನ್‌ನ ಯುದ್ಧ ವಿಮಾನಗಳು ಬರುತ್ತಿವೆ. ಹೀಗಾಗಿ, ಮಿಗ್‌ 21 ನೇಪಥ್ಯಕ್ಕೆ ಸರಿಯುವುದರಿಂದ ವಾಯುಪಡೆಗೆ ಅಷ್ಟೇನೂ ಸಮಸ್ಯೆಯಾಗದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next