Advertisement

ಯೂತ್‌ ಇಂಡಿಯಾ ಫೆಲೋಶಿಪ್‌

03:45 AM Feb 07, 2017 | |

ಗ್ರಾಮೀಣ ಪ್ರದೇಶದ ಮೂಲ ಸಮಸ್ಯೆಗಳ ನಿವಾರಣೆಗೆ ಕೆಲಸ ಮಾಡುವವರ ಸಂಖ್ಯೆ ಬಹಳ ಕಡಿಮೆ. ಯುವಕರು ಹೆಚ್ಚಾಗಿ ಕಾರ್ಪೊರೇಟ್‌ ಜಗತ್ತಿಗೆ ಆಕರ್ಷಿತರಾಗುತ್ತಾರೆ. ಅಲ್ಲದೆ, ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಅವರಿಗೆ ಇಚ್ಛೆಯಿದ್ದರೂ ಸಹ ಅವಕಾಶಗಳು ಮತ್ತು ಸೌಲಭ್ಯಗಳು ಸಿಗುವುದಿಲ್ಲ. 

Advertisement

ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆಂದು ಮೀಸಲಿರುವ ಕೆಲವು ಎನ್‌ಜಿಒಗಳಲ್ಲಿ ಎಷ್ಟೋ ಬಾರಿ ಅನುಭವಿ ವ್ಯಕ್ತಿಗಳ ಕೊರತೆಯಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸಂಸ್ಥೆಯು ಕೆಲವು ಎನ್‌ಜಿಒಗಳ ಜೊತೆಗೂಡಿ Youth for India ಫೆಲೋಶಿಪ್‌ ಕಾರ್ಯಕ್ರಮವನ್ನು ನಡೆಸುತ್ತಿದೆ. 

ಯುವಕರಲ್ಲಿ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗೆಗೆ ಅರಿವು ಮೂಡಿಸಿ, ಅವರು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಮುಂದಾಳತ್ವ ಸ್ವೀಕರಿಸುವಂತೆ ಮಾಡುವುದು ಈ ಫೆಲೋಶಿಪ್‌ನ ಮುಖ್ಯ ಉದ್ದೇಶ. ಸೇವಾ ಮಂದಿರ್‌, ಬೈಫ್ (BAIF), , ಬೇರ್‌ಫ‌ೂಟ್‌ ಕಾಲೇಜ್‌ (Barefoot college) ಚಿರಾಗ್‌ (Chirag), ಎ.ಕೆ.ಅರ್‌.ಎಸ್‌.ಪಿ (AKRSP), ಧಾನ್‌ ಫೌಂಡೇಶನ್‌ (Dhan Foundation),ಗ್ರಾಮ ವಿಕಾಸ ಇತ್ಯಾದಿ ಸರ್ಕಾರೇತರ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ತಮ್ಮ ಸಹಾಯ ಹಸ್ತ ನೀಡಿವೆ.  ಯಾವ ಯಾವ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶವಿದೆ? ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶವಿರುತ್ತದೆ. ಪ್ರಸ್ತುತ, ಅಭ್ಯರ್ಥಿಗಳು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಗ್ರಾಮೀಣ ಜೀವನೋದ್ದಾರ (Rural livelihoods),  ಸಾಂಪ್ರದಾಯಿಕ ಕರಕುಶಲ (Traditional Crafts), ಆಹಾರ ಭದ್ರತೆ, ಸಾಮಾಜಿಕ ಉದ್ಯಮಶೀಲತೆ (Social Entrepreneurship), ಮಹಿಳಾ ಸಶಕ್ತೀಕರಣ, ಸ್ವ-ಆಡಳಿತ (Self Governance) ಹೀಗೆ ನಾನಾ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.  
 
ಫೆಲೋಶಿಪ್‌ನ ರೂಪುರೇಷೆ ಫೆಲೋಶಿಪ್‌ನ ಅವಧಿ 13 ತಿಂಗಳುಗಳು. ಫೆಲೋಶಿಪ್‌ ಆಯ್ಕೆಗಾಗಿ ಅರ್ಜಿಗಳನ್ನು ಸಾಮಾನ್ಯವಾಗಿ ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಕರೆಯಲಾಗುತ್ತದೆ. 21ರಿಂದ 32 ವರ್ಷದೊಳಗಿನ ಯುವ ವೃತ್ತಿಪರರು (Young Professionals) ಅಥವಾ ಪದವೀಧರರು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಸಿದ್ಧಪಡಿಸಿ ಅವರೊಂದಿಗೆ ಆನ್‌ಲೈನ್‌ ಫೋರಮ್‌ಗಳ (Online Forum)  ಮುಖಾಂತರ ಚರ್ಚಿಸಲಾಗುತ್ತದೆ. ನಂತರ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡು ಗುಂಪುಗಳಲ್ಲಿ (Cohorts) ಕರೆಯಲಾಗುತ್ತದೆ. ಎರಡು ವಾರಗಳ ತರಬೇತಿಯ ನಂತರ ಅವರನ್ನು ಗ್ರಾಮೀಣ ಪ್ರದೇಶಗಳಿಗೆ ಕಳಿಸಲಾಗುತ್ತದೆ. ಫೆಲೋಶಿಪ್‌ನ ಸಂಪೂರ್ಣ ಅವಧಿಯನ್ನು ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲೇ ಕಳೆಯಬೇಕು. 

ಆಯ್ಕೆಯಾದ  ಪ್ರತಿ ಅಭ್ಯರ್ಥಿಗೆ ಮಾಸಿಕ ರೂ.15,000/- ವೇತನವನ್ನು ನೀಡಲಾಗುತ್ತದೆ. ಸ್ಥಳೀಯ ಓಡಾಟದ ಖರ್ಚಿಗೆಂದು ರೂ.1000/- ಮಾಸಿಕ ವೇತನ ನೀಡಲಾಗುತ್ತದೆ. ಇದರ ಜೊತೆಗೆ ಆರೋಗ್ಯ ವಿಮೆಯನ್ನು ಕೂಡ ನೀಡಲಾಗುತ್ತದೆ. 
 
ಫೆಲೋಶಿಪ್‌ ನಂತರ ಏನು? 
ಫೆಲೋಶಿಪ್‌ ನಂತರದಲ್ಲಿ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳ ಜೊತೆ ಕೆಲಸ ಮಾಡಬಹುದು. ಅಥವಾ ಇದೇ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಕೈಗೊಳ್ಳಬಹುದು. ಇಲ್ಲದಿದ್ದರೆ ಫೆಲೋಶಿಪ್‌ ಸಮಯದಲ್ಲಿ ಸಂಪಾದಿಸಿದ ಜಾnನವನ್ನು ಬಳಸಿಕೊಂಡು ಅಭಿವೃದ್ಧಿ ಕ್ಷೇತ್ರದಲ್ಲಿ ಸ್ವಂತ ಉದ್ಯೋಗ ಶುರು ಮಾಡಬಹುದು.  

Advertisement

ಫೆಲೋಶಿಪ್‌ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ-  www.youthforindia.org  

– ಪ್ರಶಾಂತ್‌ ಎಸ್‌. ಚಿನ್ನಪ್ಪನವರ್‌ 

Advertisement

Udayavani is now on Telegram. Click here to join our channel and stay updated with the latest news.

Next