ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನೂ ಗೆದ್ದ ಭಾರತ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದೆ. ಮಳೆಯಿಂದ ಅಡಚಣೆಗೆ ಒಳಗಾದ ಪಂದ್ಯದಲ್ಲಿ ಭಾರತ ತಂಡ 119 ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 36 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡಿಯಾಯಿತು. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 35 ಓವರ್ ಗಳಲ್ಲಿ 257 ರನ್ ಗಳಿಸಬೇಕಾದ ಗುರಿ ಪಡೆದ ವಿಂಡೀಸ್ ಕೇವಲ 137 ರನ್ ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಕ್ಕಿತು. ನಾಯಕ ಧವನ್ 58 ರನ್ ಗಳಿಸಿದರೆ, ಶುಭ್ಮನ್ ಗಿಲ್ ಅಜೇಯ 98 ರನ್ ಗಳಿಸಿದರು. ಚೊಚ್ಚಲ ಅಂತಾರಾಷ್ಟ್ರೀಯ ಶತಕದ ಕಾತರದಲ್ಲಿದ್ದ ಗಿಲ್ ಗೆ ಮಳೆ ನಿರಾಸೆ ಮೂಡಿಸಿತು. ಶ್ರೇಯಸ್ ಅಯ್ಯರ್ 44 ರನ್ ಗಳಿಸಿದರು.
ಇದನ್ನೂ ಓದಿ:ಸಾಲ ತೀರಿಸಲಾಗದೆ ಮನೆ ಮಾರಾಟಕ್ಕೆ ಸಿದ್ದವಾಗಿದ್ದ ಬಡವನಿಗೆ ಒಲಿದ ಲಾಟರಿ
ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಗೆ ನಾಯಕ ನಿಕೋಲಸ್ ಪೂರನ್ ಮತ್ತು ಬ್ರಾಂಡನ್ ಕಿಂಗ್ ಹೊರತುಪಡಿಸಿ ಉಳಿದ್ಯಾರು ಬ್ಯಾಟಿಂಗ್ ಬೆಂಬಲ ನೀಡಲಿಲ್ಲ. ಇವರಿಬ್ಬರೂ ತಲಾ 42 ರನ್ ಗಳಿಸಿದರು. ಭಾರತದ ಪರ ಚಾಹಲ್ ನಾಲ್ಕು ವಿಕೆಟ್ ಕಿತ್ತರೆ, ಸಿರಾಜ್ ಮತ್ತು ಠಾಕೂರ್ ತಲಾ ಎರಡು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳು ಶುಭ್ಮನ್ ಗಿಲ್ ಪಾಲಾಯಿತು.