Advertisement

ಬಾಂಗ್ಲಾಕ್ಕೆ ರೋ’ಹಿಟ್’: ನೂರನೇ ಪಂದ್ಯದಲ್ಲಿ ರೋಹಿತ್ 85 ; ಭಾರತಕ್ಕೆ 08 ವಿಕೆಟ್ ಗೆಲುವು

09:51 AM Nov 08, 2019 | Hari Prasad |

ರಾಜ್ ಕೋಟ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯವನ್ನು ಭಾರತ 08 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಅಂತಾರಾಷ್ಟ್ರೀಯ ಟಿ20 ಕೂಟದಲ್ಲಿ ನೂರನೇ ಪಂದ್ಯವನ್ನಾಡುತ್ತಿರುವ ಹಂಗಾಮಿ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಆಟದ ನೆರವಿನಿಂದ ಭಾರತ ಬಾಂಗ್ಲಾ ವಿರುದ್ಧ ಅಧಿಕಾರಯುತ ಗೆಲುವನ್ನು ಸಂಪಾದಿಸಿತು.

Advertisement

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 100 ಪಂದ್ಯಗಳನ್ನಾಡಿದ ದ್ವಿತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದ ರೋಹಿತ್ ಶರ್ಮಾ ಅವರು ಕೇವಲ 43 ಎಸೆತಗಳಲ್ಲಿ 85 ರನ್ ಗಳಿಸಿ ಬಾಂಗ್ಲಾ ಬೌಲರ್ ಗಳನ್ನು ಕಾಡಿದರು. ಶರ್ಮಾ ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 06 ಸಿಕ್ಸರ್ ಮತ್ತು 06 ಬೌಂಡರಿ ಒಳಗೊಂಡಿತ್ತು.

ರೋಹಿತ್ ಅಬ್ಬರದ ಮುಂದೆ ಧವನ್ ಆಟ ಮಂಕಾಯಿತು. ಧವನ್ ಅವರು 27 ಎಸೆತಗಳಲ್ಲಿ 31 ರನ್ ಗಳಿಸಿದರು. ಇವರಿಬ್ಬರು ಔಟಾದ ಬಳಿಕ ಕೆ.ಎಲ್. ರಾಹುಲ್ (ಔಟಾಗದೇ 08) ಮತ್ತು ಶ್ರೇಯಸ್ ಐಯರ್ ಅವರ ಅಜೇಯ ಸ್ಪೋಟಕ ಆಟ ಭಾರತವನ್ನು ಇನ್ನೂ 04 ಓವರುಗಳು ಬಾಕಿ ಇರುವಂತೆ ಗೆಲುವಿನ ಗುರಿ ಮುಟ್ಟಿಸಿತು.
ಕೇವಲ 12 ಎಸೆತಗಳಲ್ಲಿ 23 ರನ್ ಸಿಡಿಸಿದ ಶ್ರೇಯಸ್ ಐಯರ್ ಭಾರತದ ಗೆಲುವನ್ನು ಸರಾಗಗೊಳಿಸಿದರು.


ಭಾರತದ ಪರ ಬಿದ್ದ 2 ವಿಕೆಟ್ ಸ್ಪಿನ್ನರ್ ಅಮಿನುಲ್ ಇಸ್ಲಾಂ ಪಾಲಾಯಿತು.
ಸ್ಪೋಟಕ ಇನ್ನಿಂಗ್ಸ್ ಮೂಲಕ ತನ್ನ ನೂರನೇ ಪಂದ್ಯವನ್ನು ಸ್ಮರಣೀಯವಾಗಿಸಿದ ಮತ್ತು ಆ ಮೂಲಕ ತಂಡಕ್ಕೆ ಭರ್ಜರಿ ಜಯ ಲಭಿಸಲು ಕಾರಣರಾದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು.

ಪಾಕಿಸ್ಥಾನದ ಶೋಯಬ್ ಮಲಿಕ್ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ 110 ಪಂದ್ಯಗಳನ್ನು ಆಡಿ ಪ್ರಥಮ ಸ್ಥಾನದಲ್ಲಿದ್ದಾರೆ. 100 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ಥಾನದ ಶಾಹಿದ್ ಅಫ್ರಿದಿ ಅವರು 99 ಪಂದ್ಯಗಳನ್ನು ಆಡುವ ಮೂಲಕ ತೃತೀಯ ಸ್ಥಾನದಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜೀ ಕಪ್ತಾನ ಎಂ.ಎಸ್.ಧೋನಿ 98 ಪಂದ್ಯಗಳನ್ನು ಆಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರು ಇದುವರೆಗೆ 72 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.


ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಾಂಗ್ಲಾ ನಿಗದಿತ 20 ಓವರುಗಳಲ್ಲಿ 06 ವಿಕೆಟುಗಳನ್ನು ಕಳೆದುಕೊಂಡು 153 ರನ್ ಗಳಿಸಿತು. ಬಾಂಗ್ಲಾ ಆರಂಭಿಕರಾದ ಲಿಟನ್ ದಾಸ್ (29) ಮತ್ತು ಮುಹಮ್ಮದ್ ನಯೀಮ್ (36) ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದರು. ಮೊದಲ ವಿಕೆಟಿಗೆ ಈ ಜೋಡಿ 60 ರನ್ ಗಳ ಅಮೂಲ್ಯ ಭಾಗೀದಾರಿಕೆ ಒದಗಿಸಿದರು.

ಬಳಿಕ ಸೌಮ್ಯ ಸರ್ಕಾರ್ (30) ಬಿರುಸಿನ ಆಟಕ್ಕೆ ಇಳಿದಿದ್ದರಿಂದ ಬಾಂಗ್ಲಾ ಭಾರೀ ಮೊತ್ತ ಪೇರಿಸುವ ಸೂಚನೆ ಲಭಿಸಿತ್ತು. ಆದರೆ 20 ಎಸೆತಗಳಲ್ಲಿ 30 ರನ್ ಸಿಡಿಸಿದ್ದ ಸೌಮ್ಯ ಸರ್ಕಾರ್ ಔಟಾಗುವುದರೊಂದಿಗೆ ಬಾಂಗ್ಲಾ ರನ್ ಓಟಕ್ಕೆ ಕಡಿವಾಣ ಬಿತ್ತು. ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಇನ್ನೊಬ್ಬ ಬ್ಯಾಟ್ಸ್ ಮನ್ ಕಪ್ತಾನ ಮುಹಮದುಲ್ಲಾ 30 ರನ್ ಗಳಿಸಿದರು.

Advertisement

ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು 02 ವಿಕೆಟ್ ಗಳಿಸಿದರು. ದೀಪಕ್ ಚಾಹರ್, ಖಲೀಲ್ ಅಹಮ್ಮದ್, ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.




Advertisement

Udayavani is now on Telegram. Click here to join our channel and stay updated with the latest news.

Next