Advertisement

ರೋಹಿತ್‌ ಆರ್ಭಟ; ಭಾರತ ಜಯಭೇರಿ

10:58 AM Jun 17, 2019 | Team Udayavani |

ಮ್ಯಾಂಚೆಸ್ಟರ್‌: ಇಡೀ ಕ್ರೀಡಾ ಜಗತ್ತೇ ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ವಿಶ್ವಕಪ್‌ ಕೂಟದ ಮ್ಯಾಂಚೆಸ್ಟರ್‌ ಮುಖಾಮುಖೀಯಲ್ಲಿ ಭಾರತ ತನ್ನ ಎದುರಾಳಿ ಪಾಕಿಸ್ಥಾನವನ್ನು 89 ರನ್ನುಗಳಿಂದ ನೆಲಕ್ಕೆ ಕೆಡವಿದೆ. ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ತಾನು ಅಜೇಯ ಎಂದು ಟೀಮ್‌ ಇಂಡಿಯಾ ಸತತ 7ನೇ ಸಲ ಸಾರಿದೆ.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಭಾರತ, ರೋಹಿತ್‌ ಶರ್ಮ ಅವರ ಮಾಸ್ಟರ್‌ಕ್ಲಾಸ್‌ ಬ್ಯಾಟಿಂಗ್‌ ಮೂಲಕ ಪಾಕ್‌ ಮೇಲೆ ಸವಾರಿ ಮಾಡತೊಡಗಿತು. 5 ವಿಕೆಟಿಗೆ 336 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದರಲ್ಲಿ ರೋಹಿತ್‌ ಪಾಲು 140 ರನ್‌.

ಗೆಲ್ಲಲು 337 ರನ್‌ ಗಳಿಸುವ ಗುರಿ ಪಡೆದ ಪಾಕಿಸ್ಥಾನ ಯಾದವ್‌ ಮತ್ತು ಪಾಂಡ್ಯ ದಾಳಿಗೆ ಕುಸಿದು 35 ಓವರ್‌ಗಳಲ್ಲಿ 6 ವಿಕೆಟಿಗೆ 166 ರನ್‌ ತಲುಪಿದಾಗ ಮಳೆ ಸುರಿಯಿತು. ಆಬಳಿಕ ಈ ಪಂದ್ಯವನ್ನು 40 ಓವರ್‌ಗಳಿಗೆ ಇಳಿಸಲಾಯಿತು. ಆಗ ಡಿ- ಎಲ್‌ ನಿಯಮದಂತೆ ಪಾಕಿಸ್ಥಾನಕ್ಕೆ 302ರನ್‌ ಗುರಿಯನ್ನು ಮರು ನಿಗದಿಗೊಳಿಸಲಾಯಿತು.ಅಂದರೆ ಮುಂದಿನ 5 ಓವರ್‌ಗಳಲ್ಲಿ 136 ರನ್‌ ತೆಗೆಯಬೇಕಾದ ಕಠಿನ ಸವಾಲು ಎದುರಿತ್ತು. ಆದರೆ ಪಾಕಿಸ್ಥಾನ 40 ಓವರ್‌ಗಳಲ್ಲಿ 6 ವಿಕೆಟ್‌ಗೆ 212ರನ್‌ಗಳಿಸಲಷ್ಟೆ ಶಕ್ತವಾಗಿ ಭಾರತಕ್ಕೆ ಶರಣಾಯಿತು.

ಫ‌ಕಾರ್‌ ಜಮಾನ್‌ ಮತ್ತು ಬಾಬರ್‌ ಆಜಂ ದ್ವಿತೀಯ ವಿಕೆಟಿಗೆ ಕ್ರೀಸ್‌ ಆಕ್ರಮಿಸಿಕೊಂಡಾಗ ಪಾಕ್‌ ಬ್ಯಾಟಿಂಗ್‌ ಹೋರಾಟ ನಡೆಸುವ ಸೂಚನೆ ಲಭಿಸಿತ್ತು. ಆದರೆ ಕುಲದೀಪ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಮಿಂಚಿತ ದಾಳಿಗೆ ಪಾಕಿಸ್ಥಾನದ 4 ವಿಕೆಟ್‌ ಪಟಪಟನೆ ಬಿತ್ತು. ಭಾರತದ ಗೆಲುವು ಖಾತ್ರಿಯಾಯಿತು.

ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಮತ್ತು ಪ್ರತಿಕೂಲ ಹವಾಮಾ ನದ ನಿಮಿತ್ತ ಬೌಲಿಂಗ್‌ ಲಾಭ ಎತ್ತಬಹುದು ಎಂಬುದು ಪಾಕ್‌ ನಾಯಕ ಸಫ‌ìರಾಜ್‌ ಅವರ ಲೆಕ್ಕಾಚಾರವಾಗಿತ್ತು. ಆದರೆ ಇದನ್ನು ರೋಹಿತ್‌-ರಾಹುಲ್‌ ಸೇರಿಕೊಂಡು ಸಂಪೂರ್ಣವಾಗಿ ತಲೆ ಕೆಳಗಾಗಿಸಿದರು. 23.5 ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿ ಮೊದಲ ವಿಕೆಟಿಗೆ 136 ರನ್‌ ಪೇರಿಸಿ ಮೆರೆದರು.

Advertisement

ಪಾಕ್‌ ವಿರುದ್ಧ ಗರಿಷ್ಠ ರನ್‌
ರೋಹಿತ್‌ ಶರ್ಮ ಪ್ರಸಕ್ತ ವಿಶ್ವಕಪ್‌ನಲ್ಲಿ 2ನೇ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಚೇಸಿಂಗ್‌ ವೇಳೆ ಅಜೇಯ 122 ರನ್‌ ಹೊಡೆದಿದ್ದರು. ಇದರೊಂದಿಗೆ ರೋಹಿತ್‌ ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಗರಿಷ್ಠ ವೈಯಕ್ತಿಕ ರನ್‌ ಬಾರಿಸಿದ ಭಾರತದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಶಿಖರ್‌ ಧವನ್‌ ಗೈರಲ್ಲಿ ಬ್ಯಾಟಿಂಗ್‌ ಆರಂಭಿಸಲು ಇಳಿದ ರಾಹುಲ್‌ ನಿಧಾನವಾಗಿ ಆಟ ಆರಂಭಿಸಿ, 78 ಎಸೆತಗಳಿಂದ 57 ರನ್‌ ಮಾಡಿ ರೋಹಿತ್‌ಗೆ ಉತ್ತಮ ಸಾಥ್‌ ನೀಡಿದರು. ಈ ಜವಾಬ್ದಾರಿಯುತ ಇನ್ನಿಂಗ್ಸ್‌ ನಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು.

ಅನಂತರ ಜತೆಗೂಡಿದ ರೋಹಿತ್‌-ಕೊಹ್ಲಿ ಪಾಕ್‌ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. ದ್ವಿತೀಯ ವಿಕೆಟಿಗೆ 98 ರನ್‌ ಒಟ್ಟುಗೂಡಿತು. ಸ್ಕೋರ್‌ 39ನೇ ಓವರ್‌ನಲ್ಲಿ 234ಕ್ಕೆ ಏರಿದಾಗ ರೋಹಿತ್‌ ವಿಕೆಟ್‌ ಬಿತ್ತು. ಕೊಹ್ಲಿ ಕಪ್ತಾನನ ಆಟವಾಡುತ್ತ ಭಾರತದ ಇನ್ನಿಂಗ್ಸ್‌ ಬೆಳೆಸತೊಡಗಿದರು. ಬಡ್ತಿ ಪಡೆದು ಬಂದ ಹಾರ್ದಿಕ್‌ ಪಾಂಡ್ಯ ಕೂಡ ಮಿಂಚಿನ ಆಟವಾಡಿದರು.

ಪಾಕ್‌ ವೇಗಿ ಆಮಿರ್‌ಗೆ 2 ಬಾರಿ ಎಚ್ಚರಿಕೆ
ಪಾಕಿಸ್ಥಾನ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಅವರಿಗೆ ಅಂಪಾಯರ್‌ ಬ್ರೂಸ್‌ ಆಕ್ಸೆನ್‌ಫೋರ್ಡ್‌ 2 ಬಾರಿ ಅಧಿಕೃತ ಎಚ್ಚರಿಕೆ ನೀಡಿದರು. ಅಂಕಣದ ಮೇಲೆ ಅವರು ಓಡಿದ ಹಿನ್ನೆಲೆಯಲ್ಲಿ ಯಾವುದೇ ಔಪಚಾರಿಕ ಸೂಚನೆ ನೀಡದೆ ನೇರ ಎಚ್ಚರಿಕೆ ನೀಡಿದರು. ಇದರ ಗಂಭೀರತೆ ಅರಿತ ಪಾಕ್‌ ನಾಯಕ ಸಫ‌ìರಾಜ್‌ ಅಹ್ಮದ್‌ ಕೂಡಲೇ ಮಧ್ಯಪ್ರವೇಶಿಸಿ ಅಂಪಾಯರ್‌ ಜತೆ ಮಾತುಕತೆ ನಡೆಸಿದರು.

ಕೊಹ್ಲಿ: ಕಡಿಮೆ
ಇನ್ನಿಂಗ್ಸ್‌ಗಳಲ್ಲಿ 11 ಸಾವಿರ ರನ್‌
ವಿರಾಟ್‌ ಕೊಹ್ಲಿ ಏಕದಿನದಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ಗಳಿಂದ 11 ಸಾವಿರ ರನ್‌ ಗಳಿಸಿದ ದಾಖಲೆ ಬರೆದರು. ಇದು ಅವರ 222ನೇ ಇನ್ನಿಂಗ್ಸ್‌ ಆಗಿತ್ತು. ಇದರೊಂದಿಗೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ನೆಲಸಮ ಮಾಡಿದರು. ತೆಂಡುಲ್ಕರ್‌ ಇದಕ್ಕೆ 276 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಪಂದ್ಯಕ್ಕೂ ಮುನ್ನ 10,943 ರನ್‌ ಗಳಿಸಿದ್ದ ಅವರಿಗೆ ಈ ದಾಖಲೆ ನಿರ್ಮಿಸಲು ಕೇವಲ 57 ರನ್‌ ಅಗತ್ಯವಿತ್ತು.

ಗರಿಷ್ಠ ರನ್‌:
ವಿರಾಟ್‌ ಕೊಹ್ಲಿಗೆ 9ನೇ ಸ್ಥಾನ
ಏಕದಿನದಲ್ಲಿ ಗರಿಷ್ಠ ರನ್‌ ಗಳಿಸಿದ ಆಟಗಾರರ ಯಾದಿಯಲ್ಲಿ ವಿರಾಟ್‌ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಗಳಿಕೆ 11,020 ರನ್‌. 18,426 ರನ್‌ ಗಳಿಸಿದ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಸಾಧಕರಲ್ಲಿ ಕೊಹ್ಲಿಗೆ 3ನೇ ಸ್ಥಾನ. 11,363 ರನ್‌ ಗಳಿಸಿರುವ ಗಂಗೂಲಿ 2ನೇ ಸ್ಥಾನದಲ್ಲಿದ್ದಾರೆ.

ಮೊದಲ ವಿಕೆಟಿಗೆ
ಮೊದಲ ಶತಕದ ಜತೆಯಾಟ
ರೋಹಿತ್‌ ಶರ್ಮ-ಕೆ.ಎಲ್‌. ರಾಹುಲ್‌ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಮೊದಲ ವಿಕೆಟಿಗೆ ಶತಕದ ಜತೆಯಾಟ ನಡೆಸಿದ ಭಾರತದ ಮೊದಲ ಜೋಡಿ ಎನಿಸಿತು. ಇವರಿಬ್ಬರು 23.5 ಓವರ್‌ಗಳಿಂದ 136 ರನ್‌ ಪೇರಿಸಿದರು. ಇದಕ್ಕೂ ಮುನ್ನ 1996ರ ಬೆಂಗಳೂರು ಪಂದ್ಯದಲ್ಲಿ ತೆಂಡುಲ್ಕರ್‌-ಸಿಧು 90 ರನ್‌ ಗಳಿಸಿದ್ದು ದಾಖಲೆಯಾಗಿತ್ತು. ಒಟ್ಟಾರೆಯಾಗಿ ಇದು ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಆರಂಭಿಕ ವಿಕೆಟಿಗೆ ದಾಖಲಾದ 6ನೇ ಶತಕದ ಜತೆಯಾಟ. 1992ರ ಮೆಲ್ಬರ್ನ್ ಪಂದ್ಯದಲ್ಲಿ ಡೆಸ್ಮಂಡ್‌ ಹೇನ್ಸ್‌-ಬ್ರಿಯಾನ್‌ ಲಾರಾ 175 ರನ್‌ ಬಾರಿಸಿದ್ದು ದಾಖಲೆ.

ರೋಹಿತ್‌: 5 ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್‌ ರನ್‌
ರೋಹಿತ್‌ ಶರ್ಮ ಸತತ 5 ಏಕದಿನ ಇನ್ನಿಂಗ್ಸ್‌ ಗಳಲ್ಲಿ 50 ಪ್ಲಸ್‌ ರನ್‌ ಬಾರಿಸಿ ಮೆರೆದರು. ಇದರಲ್ಲಿ 3 ಇನ್ನಿಂಗ್ಸ್‌ಗಳ ಸಾಧನೆ ವಿಶ್ವಕಪ್‌ನಲ್ಲೇ ದಾಖಲಾಗಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್‌ ಕ್ರಮವಾಗಿ 95, 56, ಅಜೇಯ 122 ಹಾಗೂ 57 ರನ್‌ ಹೊಡೆದಿದ್ದರು.

ಕೊಹ್ಲಿ ಸಾಲಿಗೆ
ಏರಿದ ರೋಹಿತ್‌ ಶರ್ಮ
ರೋಹಿತ್‌ ಶರ್ಮ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಶತಕ ಬಾರಿಸಿದ ಭಾರತದ ಕೇವಲ 2ನೇ ಬ್ಯಾಟ್ಸ್‌ಮನ್‌ ಎನಿಸಿದರು. ಇದಕ್ಕೂ ಮುನ್ನ ವಿರಾಟ್‌ ಕೊಹ್ಲಿ 2015ರ ಅಡಿಲೇಡ್‌ ಪಂದ್ಯದಲ್ಲಿ 107 ರನ್‌ ಹೊಡೆದಿದ್ದರು. ರೋಹಿತ್‌ 140 ರನ್‌ ಬಾರಿಸಿ ಈ ದಾಖಲೆ ಮುರಿದರು. ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ರೋಹಿತ್‌ ದಾಖಲಿಸಿದ 2ನೇ ಶತಕ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 122 ರನ್‌ ಹೊಡೆದಿದ್ದರು. ಇದು 209ನೇ ಏಕದಿನದಲ್ಲಿ ರೋಹಿತ್‌ ಬಾರಿಸಿದ 24ನೇ ಶತಕ.

ಪಾಕ್‌ ವಿರುದ್ಧ
ಸರ್ವಾಧಿಕ ರನ್‌ ಜತೆಯಾಟ
ರೋಹಿತ್‌ ಶರ್ಮ-ಕೆ.ಎಲ್‌. ರಾಹುಲ್‌ ಪಾಕಿಸ್ಥಾನ ವಿರುದ್ಧ ವಿಶ್ವಕಪ್‌ನಲ್ಲಿ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಅತ್ಯಧಿಕ ರನ್‌ ಜತೆಯಾಟದ ಭಾರತೀಯ ದಾಖಲೆ ಬರೆದರು (134 ರನ್‌). ಇದಕ್ಕೂ ಮೊದಲು 2015ರ ಅಡಿಲೇಡ್‌ ಪಂದ್ಯದಲ್ಲಿ ಶಿಖರ್‌ ಧವನ್‌-ವಿರಾಟ್‌ ಕೊಹ್ಲಿ 2ನೇ ವಿಕೆಟಿಗೆ 129 ರನ್‌ ಹೊಡೆದದ್ದು ದಾಖಲೆಯಾಗಿತ್ತು.

ರೋಹಿತ್‌
ಸಿಕ್ಸರ್‌ ದಾಖಲೆ
ಈ ಪಂದ್ಯದಲ್ಲಿ ಶತಕ ಬಾರಿಸಿದ ರೋಹಿತ್‌ ಶರ್ಮ ನಡುವೆ ದಾಖಲೆಯೊಂದನ್ನು ನಿರ್ಮಿಸಿದರು. ಅವರೀಗ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಆಟಗಾರ. ಇದುವರೆಗೆ ಆ ದಾಖಲೆ ಮಹೇಂದ್ರ ಸಿಂಗ್‌ ಧೋನಿ ಹೆಸರಿನಲ್ಲಿತ್ತು. ಟಿ20, ಏಕದಿನ, ಟೆಸ್ಟ್‌ ಸೇರಿ ಅವರು 355 ಸಿಕ್ಸರ್‌ ಬಾರಿಸಿದ್ದರು. ಪಂದ್ಯಕ್ಕೂ ಮುನ್ನ ಇಷ್ಟೇ ಸಿಕ್ಸರ್‌ ಬಾರಿಸಿದ್ದ ರೋಹಿತ್‌ಸಿಕ್ಸರ್‌ಗಳ ಸಂಖ್ಯೆ ಈಗ 358ಕ್ಕೆ ಏರಿದೆ.

ಕುದುರೆಯೇರಿ
ಬಂದ ಪಾಕ್‌ ಅಭಿಮಾನಿ!
ಮ್ಯಾಂಚೆಸ್ಟರ್‌, ಜೂ. 16: ಭಾರತ-ಪಾಕಿಸ್ಥಾನ ಪಂದ್ಯವೆಂದರೆ ಅಲ್ಲಿ ಹಲವಾರು ಭಿನ್ನ ಸಂಗತಿಗಳು ಗಮನ ಸೆಳೆಯುತ್ತವೆ. ಆಟದ ಜತೆಗೆ ಇತರೆ ನೋಟಗಳೂ ಇರುತ್ತವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿರುತ್ತಾರೆ. ರವಿವಾರದ ಪಂದ್ಯದ ವೇಳೆ ಪಾಕಿಸ್ಥಾನದ ಅಭಿಮಾನಿಯೊಬ್ಬ ಮ್ಯಾಂಚೆಸ್ಟರ್‌ನ ಓಲ್ಡ್‌ಟ್ರಾಫ‌ರ್ಡ್‌ ಮೈದಾನಕ್ಕೆ ಕುದುರೆಯೇರಿ ಬಂದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದಾನೆ!

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಸಿ ಆಜಂ ಬಿ ರಿಯಾಜ್‌ 57
ರೋಹಿತ್‌ ಶರ್ಮ ಸಿ ರಿಯಾಜ್‌ ಬಿ ಅಲಿ 140
ವಿರಾಟ್‌ ಕೊಹ್ಲಿ ಸಿ ಸಫ‌ìರಾಜ್‌ ಬಿ ಆಮಿರ್‌ 77
ಹಾರ್ದಿಕ್‌ ಪಾಂಡ್ಯ ಸಿ ಆಜಂ ಬಿ ಆಮಿರ್‌ 26
ಎಂ.ಎಸ್‌. ಧೋನಿ ಸಿ ಸಫ‌ìರಾಜ್‌ ಬಿ ಆಮಿರ್‌ 1
ವಿಜಯ್‌ ಶಂಕರ್‌ ಔಟಾಗದೆ 15
ಕೇದಾರ್‌ ಜಾಧವ್‌ ಔಟಾಗದೆ 9
ಇತರ 11
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 336
ವಿಕೆಟ್‌ ಪತನ: 1-136, 2-234, 3-285, 4-298, 5-314.
ಬೌಲಿಂಗ್‌:
ಮೊಹಮ್ಮದ್‌ ಆಮಿರ್‌ 10-1-47-3
ಹಸನ್‌ ಅಲಿ 9-0-84-1
ವಹಾಬ್‌ ರಿಯಾಜ್‌ 10-0-71-1
ಇಮಾದ್‌ ವಾಸಿಮ್‌ 10-0-49-0
ಶಾಬಾದ್‌ ಖಾನ್‌ 9-0-61-0
ಶೋಯಿಬ್‌ ಮಲಿಕ್‌ 1-0-11-0
ಮೊಹಮ್ಮದ್‌ ಹಫೀಜ್‌ 1-0-11-0
ಗುರಿ: (40 ಓವರ್‌ಗಳಲ್ಲಿ 302)
ಪಾಕಿಸ್ಥಾನ
ಇಮಾಮ್‌ ಉಲ್‌ ಹಕ್‌ ಎಲ್‌ಬಿಡಬ್ಲ್ಯು ಶಂಕರ್‌ 7
ಫ‌ಕಾರ್‌ ಜಮಾನ್‌ ಸಿ ಚಹಲ್‌ ಬಿ ಕುಲದೀಪ್‌ 62
ಬಾಬರ್‌ ಆಜಂ ಬಿ ಕುಲದೀಪ್‌ 48
ಮೊಹಮ್ಮದ್‌ ಹಫೀಜ್‌ ಸಿ ಶಂಕರ್‌ ಬಿ ಪಾಂಡ್ಯ 9
ಸಫ‌ìರಾಜ್‌ ಅಹ್ಮದ್‌ ಬಿ ಶಂಕರ್‌ 12
ಶೋಯಿಬ್‌ ಮಲಿಕ್‌ ಬಿ ಪಾಂಡ್ಯ 0
ಇಮಾದ್‌ ವಾಸಿಮ್‌ ಔಟಾಗದೆ 46
ಶಾದಾಬ್‌ ಖಾನ್‌ ಔಟಾಗದೆ 20
ಇತರ 8 ಒಟ್ಟು (40 ಓವರ್‌ಗಳಲ್ಲಿ 6 ವಿಕೆಟಿಗೆ) 212
ವಿಕೆಟ್‌ ಪತನ: 1-13, 2-117, 3-126, 4-129, 5-129, 6-165.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 2.4-0-8-0
ಜಸ್‌ಪ್ರೀತ್‌ ಬುಮ್ರಾ 8-0-52-0
ವಿಜಯ್‌ ಶಂಕರ್‌ 5.2-0-22-2
ಹಾರ್ದಿಕ್‌ ಪಾಂಡ್ಯ 8-0-44-2
ಕುಲದೀಪ್‌ ಯಾದವ್‌ 9-1-32-2
ಯಜುವೇಂದ್ರ ಚಾಹಲ್‌ 7-0-53-0

ರೋಹಿತ್‌ ಶರ್ಮ ಪಂದ್ಯಶ್ರೇಷ್ಠ

Advertisement

Udayavani is now on Telegram. Click here to join our channel and stay updated with the latest news.

Next