ರಾಂಚಿ : ಶ್ರೇಯಸ್ ಅಯ್ಯರ್ ಅಮೋಘ ಶತಕ ಮತ್ತು ಇಶಾನ್ ಕಿಶನ್ ಅಮೋಘ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾದ ವಿರುದ್ಧ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ತಂಡದ ಪರ ಮೊಹಮ್ಮದ್ ಸಿರಾಜ್ ಅವರು ಅನನುಭವಿ ಭಾರತೀಯ ಬೌಲಿಂಗ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್ ಗೆ 278 ರನ್ ಗಳಿಗೆ ನಿರ್ಬಂಧಿಸಿದರು.
ಗುರಿ ಬೆನ್ನಟ್ಟಿದ ಭಾರತ ಶ್ರೇಯಸ್ ಅಯ್ಯರ್ ಅವರ ಔಟಾಗದೆ 113 ರನ್(111 ಎಸೆತ) ಅಮೋಘ ಶತಕ ಮತ್ತು ಇಶಾನ್ ಕಿಶನ್ ಅವರ 93 ರನ್ (84) ಗೆಲುವಿಗೆ ದೊಡ್ಡ ಕೊಡುಗೆಯಾಯಿತು. 45.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ಅಮೋಘ ಜಯ ಸಾಧಿಸಿತು.
ನಾಯಕ ಶಿಖರ್ ಧವನ್ 13 ರನ್ ಗಳಿಗೆ ಔಟಾದರು. ಶುಭಮನ್ ಗಿಲ್ 28 ರನ್ ಗಳಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ ಅಜೇಯ 30 ರನ್ ಗಳಿಸಿದರು.
ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಸಿರಾಜ್ 10 ಓವರ್ ಗಳಲ್ಲಿ 1 ಮೇಡನ್ ಓವರ್ ಸೇರಿ 38 ರನ್ ನೀಡಿ 3 ವಿಕೆಟ್ ಪಡೆದು ಗಮನ ಸೆಳೆದರು. ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮೂರು ಪಂದ್ಯಗಳ ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಉಭಯ ತಂಡಗಳು ಮಂಗಳವಾರ ದೆಹಲಿಯಲ್ಲಿ ಸರಣಿ ನಿರ್ಣಾಯಕ ಪಂದ್ಯವನ್ನು ಆಡಲಿವೆ.