ಮುಂಬೈ: ಕಳೆದ ವಾರವಷ್ಟೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ವಿಕ್ರಮ ಸಾಧಿಸಿದ್ದ ಭಾರತದ ವನಿತೆಯರು ಇದೀಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೂ ಟೆಸ್ಟ್ ಪಂದ್ಯ ಗೆದ್ದು ಬೀಗಿದ್ದಾರೆ. ಮುಂಬೈನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಹರ್ಮನ್ ಬಳಗ ಎಂಟು ವಿಕೆಟ್ ಅಂತರದಿಂದ ಗೆದ್ದು ಬೀಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಭಾರತ ವನಿತಾ ತಂಡ ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿತು.
ಐದು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಮುಂದುವರಿಸಿದ ಆಸೀಸ್ ಇಂದು ಸತತ ವಿಕೆಟ್ ಕಳೆದುಕೊಂಡಿತು. ಕೇವಲ 261 ರನ್ ಗಳಿಗೆ ಆಲೌಟಾಯಿತು. ಭಾರತದ ಗೆಲುವಿಗೆ 75 ರನ್ ಗುರಿ ನೀಡಿತು.
ಗುರಿ ಬೆನ್ನತ್ತಿದ್ದ ಭಾರತ ಮೊದಲ ಓವರ್ ನಲ್ಲಿಯೇ ಶಫಾಲಿ ವಿಕೆಟ್ ಕಳೆದುಕೊಂಡಿತು. ಆದರೆ ಗಟ್ಟಿಯಾಗಿ ನಿಂತ ಉಪ ನಾಯಕಿ ಸ್ಮೃತಿ ಮಂಧನಾ ಅಜೇಯ 38 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ರಿಚಾ 13 ರನ್ ಮತ್ತು ಜೆಮಿಮಾ ಅಜೇಯ 12 ರನ್ ಮಾಡಿದರು.
ಇದನ್ನೂ ಓದಿ:ಸಿಎಂ ಕಾರ್ಯಾಲಯ ತಲುಪಿದ `ಕೊರತೆಗಳ ರೋಗ ಪೀಡಿತ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ’ ವರದಿ
ಅದಕ್ಕೂ ಮೊದಲು ಎರಡನೇ ಇನ್ನಿಂಗ್ಸ್ ನಲ್ಲಿ ಸ್ನೇಹ್ ರಾಣಾ ಆಸೀಸ್ ಬ್ಯಾಟರ್ ಗಳನ್ನು ಕಾಡಿದರು. ರಾಣಾ ನಾಲ್ಕು ವಿಕೆಟ್ ಕಿತ್ತರೆ, ರಾಜೇಶ್ವರಿ ಮತ್ತು ನಾಯಕಿ ಹರ್ಮನ್ ತಲಾ ಎರಡು ವಿಕೆಟ್ ಕಿತ್ತಿದ್ದರು.
ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 219 ರನ್ ಗಳಿಸಿದ್ದರೆ, ಭಾರತ 406 ರನ್ ಮಾಡಿತ್ತು. ಆಸೀಸ್ ಎರಡನೇ ಇನ್ನಿಂಗ್ಸ್ ನಲ್ಲಿ 261 ರನ್ ಮಾಡಿದರೆ, ಭಾರತ ಎರಡು ವಿಕೆಟ್ ನಷ್ಟಕ್ಕೆ 75 ರನ್ ಮಾಡಿತು.