ಹೊಸದಿಲ್ಲಿ: ದೇಶದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅದನ್ನು ಗಮನದಲ್ಲಿಟ್ಟುಕೊಂಡೇ, ರಷ್ಯಾದಿಂದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಸ್-400 ಟ್ರೈಂಫ್ ಅನ್ನು ಖರೀದಿಸುತ್ತಿರುವುದಾಗಿ ಭಾರತ ಅಮೆರಿಕಕ್ಕೆ ಬುಧವಾರ ಖಡಕ್ ಆಗಿ ಹೇಳಿದೆ. ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ಸರಕಾರದ ಅಭಿಪ್ರಾಯ ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರಕಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ- ಭಾರತ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಿದೆ. ಪರಸ್ಪರ ಗುಪ್ತಚರ ಮಾಹಿತಿ ಹಂಚಿಕೆ, ಭಯೋತ್ಪಾದನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒಪ್ಪಿಕೊಳ್ಳಲಾಗಿದೆ. ಇರಾನ್ ವಿರುದ್ಧ ಹೇರಲಾಗಿರುವ ದಿಗ್ಬಂಧನ ಕುರಿತು ಜೈಶಂಕರ್-ಪೊಂಪ್ಯೋ ನಡುವೆ ಚರ್ಚೆ ನಡೆದಿದೆ.
ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್ ‘ಇರಾನ್ ವಿಚಾರದಲ್ಲಿ 2 ರಾಷ್ಟ್ರಗಳಿಗೂ ಒಂದೇ ವಿಚಾರಧಾರೆ ಇದೆ. ಇರಾನ್ ಬಗ್ಗೆ ಅಮೆರಿಕ ಹೊಂದಿರುವ ಕೆಲವು ಕಳವಳಗಳನ್ನು ಪೊಂಪ್ಯೋ ವಿವರಿಸಿದ್ದಾರೆ’ ಎಂದರು. ಇರಾನ್‌ನಿಂದ ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ನಡೆಯುತ್ತಿದೆ ಎಂದು ಅಮೆರಿಕ ಸಚಿವ ಆರೋಪಿಸಿದ್ದಾರೆ.
ಆದರೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ವಿಚಾರದಲ್ಲಿನ ಕೆಲ ಅಂಶಗಳು ಸಚಿವರ ಮಟ್ಟದಲ್ಲಿ ಇತ್ಯರ್ಥವಾಗಿಲ್ಲ. ಜಪಾನ್‌ನ ಒಸಾಕಾದಲ್ಲಿ 28, 29ರಂದು ನಡೆಯಲಿರುವ ಜಿ.20 ರಾಷ್ಟ್ರಗಳ ಸಮಾವೇಶದಲ್ಲಿ ಟ್ರಂಪ್ – ಮೋದಿ ನಡುವಿನ ಭೇಟಿಯಲ್ಲಿ ಈ ವಿಚಾರಗಳು ಇತ್ಯರ್ಥವಾಗಲಿವೆ ಎಂದು ಹೇಳಲಾಗಿದೆ.
ಪ್ರಧಾನಿ ಜತೆಗೆ ಭೇಟಿ: ಅಮೆರಿಕ ವಿದೇಶಾಂಗ ಸಚಿವ ಪ್ರಧಾನಿ ನರೇಂದ್ರ ಮೋದಿ ಜತೆಗೆ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ರಕ್ಷಣೆ, ವಾಣಿಜ್ಯ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.
ಟ್ರಂಪ್-ಮೋದಿ ದಿಟ್ಟ ನಾಯಕರು: ಯಾವುದೇ ವಿಚಾರಗಳ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳುವ ಇಬ್ಬರು ನಾಯಕರೆಂದರೆ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ. ಅವರು ಸವಾಲುಗಳನ್ನು ಗಮನಿಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಮೈಕ್ ಪೊಂಪ್ಯೋ ಕೊಂಡಾಡಿದ್ದಾರೆ. ಇಬ್ಬರೂ ಸವಾಲುಗಳನ್ನು ಹೊಸ ದೃಷ್ಟಿಕೋನದಿಂದ ನೋಡಲಿದ್ದಾರೆ ಎಂದಿದ್ದಾರೆ.