ನವದೆಹಲಿ: ಒಂದು ವೇಳೆ ನೆರೆ ದೇಶದಿಂದ ಭಾರತದ ಗಡಿಯೊಳಗೆ ನುಗ್ಗಿ ಶಾಂತಿ ಕದಡಲು ಯತ್ನಿಸುವ ಉಗ್ರರನ್ನು ಅವರ ದೇಶದೊಳಗೆ (ಪಾಕಿಸ್ತಾನ) ನುಗ್ಗಿ ತಕ್ಕ ಪಾಠ ಕಲಿಸಲು ಸಿದ್ಧ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಠಿನ ಸಂದೇಶವನ್ನು ರವಾನಿಸಿದ್ದಾರೆ.
ಇದನ್ನೂ ಓದಿ:Mysore; ಮತ್ತೆ ಒಂದಾದ ಹಳೇಜೋಡಿ: ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ ಹಳ್ಳಿಹಕ್ಕಿ ವಿಶ್ವನಾಥ್
ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ನಂತರ ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಿರುವ ಉಗ್ರರ ಮೇಲೆ ಭಾರತ ಕಣ್ಗಾವಲಿಟ್ಟಿದೆ ಎಂದು ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.
“ಆಂಗ್ಲ ಮಾಧ್ಯಮ ದಿ ಗಾರ್ಡಿಯನ್ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ನಮ್ಮ ಗುಪ್ತಚರ ಇಲಾಖೆ 20 ಉಗ್ರರನ್ನು ಕೊಂದಿರುವುದಾಗಿ ಹೇಳಿದಿರಿ? ಒಂದು ವೇಳೆ ಪಾಕಿಸ್ತಾನದ ಯಾವುದೇ ಭಯೋತ್ಪಾದಕ ಭಾರತಕ್ಕೆ ತೊಂದರೆ ನೀಡಲು ಪ್ರಯತ್ನಿಸಿದರೆ ಅಥವಾ ಇಲ್ಲಿ ಭಯೋತ್ಪಾದಕ ಕೃತ್ಯ ಎಸಗಿದರೆ ನಾವು ತಕ್ಕ ಉತ್ತರ ಕೊಡಲು ಸಿದ್ಧ. ಭಾರತದಲ್ಲಿ ಕೃತ್ಯ ಎಸಗಿ ಪಾಕಿಸ್ತಾನಕ್ಕೆ ಓಡಿಹೋದರೂ ಕೂಡಾ ನಾವು ಅಲ್ಲಿಗೆ ನುಗ್ಗಿ ಕೊಲ್ಲುತ್ತೇವೆ” ಎಂದು ರಾಜನಾಥ್ ಸಿಂಗ್ ಅವರು ಖಾಸಗಿ ಮಾಧ್ಯಮದ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಭಯೋತ್ಪಾದನೆ ನೀತಿ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ಸಿಂಗ್ ಹೇಳಿದರು. ಯಾರೇ ಆಗಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಭಾರತ ಯಾವುದೇ ಅಳುಕು ಹೊಂದಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದರು.
2019ರಲ್ಲಿ ಕಾಶ್ಮೀರದಲ್ಲಿ ಪುಲ್ವಾಮಾ ದಾಳಿ ನಡೆದ ನಂತರ ಭಾರತ ಮತ್ತು ಪಾಕಿಸ್ತಾನ್ ನಡುವೆ ಸಂಘರ್ಷ ಮುಂದುವರಿದಿದೆ. ದಾಳಿಯ ನಂತರ ಭಾರತ ಪಾಕ್ ಮೂಲದ ಉಗ್ರರನ್ನು ಬೇಟೆಯಾಡತೊಡಗಿದ್ದು, ಇದರ ಪರಿಣಾಮ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು.