Advertisement

ಜಾಧವ್‌ರನ್ನು ಬಿಡುಗಡೆ ಮಾಡಿ

09:25 AM Jul 20, 2019 | mahesh |

ನವದೆಹಲಿ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿಚಾರದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೆ ಪಾಕಿಸ್ತಾನ ತಲೆಬಾಗಲೇಬೇಕು. ಜಾಧವ್‌ ಪ್ರಕರಣದಲ್ಲಿ ತಾನು ಎಸಗಿರುವ ತಪ್ಪುಗಳನ್ನು ಮನಗಂಡು ಆದಷ್ಟು ಬೇಗ ಅವರನ್ನು ಬಿಡುಗಡೆ ಮಾಡಬೇಕು ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಗುರುವಾರ ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.

Advertisement

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್‌, ”ಕುಲಭೂಷಣ್‌ ಜಾಧವ್‌ ಅವರ ವಿರುದ್ಧ ಮಾಡಲಾದ ಆಪಾದನೆಗಳಿಗೂ, ಅವರಿಗೂ ಸಂಬಂಧವಿಲ್ಲ. ಅವರು ತಪ್ಪೊಪ್ಪಿಕೊಂಡಿರುವಂತೆ ಚಿತ್ರೀಕರಿಸಲಾಗಿರುವ ವಿಡಿಯೋಗಳು ಪಾಕಿಸ್ತಾನದ ಒತ್ತಾಯದಿಂದ ಮೂಡಿಬಂದಿರುವಂಥದ್ದು. ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಸತ್ಯಾಂಶ ಏನೆಂಬುದು ಹೊರಬರಲಿದೆ” ಎಂದಿದ್ದಾರೆ.

ಜಾಧವ್‌ ಪ್ರಕರಣದಲ್ಲಿ ಬುಧವಾರ ತೀರ್ಪು ಪ್ರಕಟಿಸಿದ ಐಸಿಜೆ, ಜಾಧವ್‌ ಅವರ ಪ್ರಕರಣವನ್ನು ಪಾಕಿಸ್ತಾನ ಪುನರ್‌ ಪರಿಶೀಲಿಸಬೇಕು. ಅವರಿಗೆ ನೀಡಲಾಗಿರುವ ಮರಣ ದಂಡನೆ ಶಿಕ್ಷೆಯನ್ನು ಮತ್ತೂಮ್ಮೆ ಪರಾಮರ್ಶಿಸಬೇಕು ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಸಚಿವರು ಹೀಗೆ ಆಗ್ರಹಿಸಿದ್ದಾರೆ.

ಭಾರತದ ವಾದಕ್ಕೆ ಪುಷ್ಟಿ: ರವೀಶ್‌ ಕುಮಾರ್‌: ಕುಲಭೂಷಣ್‌ ಜಾಧವ್‌ ವಿಚಾರದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು, ಜಾಧವ್‌ ಪರವಾಗಿ ಭಾರತ ಮಂಡಿಸಿರುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. ”ಅಲ್ಲಿನ ಸರ್ಕಾರದ ಮೇಲೆ ಕೆಲವಾರು ಒತ್ತಡಗಳಿರುವುದರಿಂದ ಜನರ ಮುಂದೆ ಹಾಗೆ ಸುಳ್ಳು ಹೇಳುವ ಅನಿವಾರ್ಯತೆಗೆ ಆ ದೇಶ ಸಿಲುಕಿದೆ” ಎಂದಿದ್ದಾರೆ.

ಉಗ್ರನ ಬಂಧನವೂ ನಾಟಕ: ಇದೇ ವೇಳೆ, ಉಗ್ರ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನ ಬಂಧಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ರವೀಶ್‌ ಕುಮಾರ್‌, ‘2001ರಿಂದ ಸುಮಾರು 8 ಬಾರಿ ಇಂಥ ನಾಟಕಗಳು ನಡೆದಿವೆ. ಭಾರತದ ವಿರುದ್ಧ ಆತ ಉಗ್ರ ಕೃತ್ಯ ಎಸಗಿದಾಗಲೆಲ್ಲ ಆತನನ್ನು ಬಂಧಿಸಿ ದಂತೆ ನಾಟಕವಾಡಿ, ನಂತರ ಏನೋ ನೆಪ ಹೇಳಿ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿಯಾದರೂ ಆತನನ್ನು ವಿಚಾರಣೆ ನಡೆಸಿ, ಆತನಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಲಿ ಎಂದು ಬಯಸುತ್ತೇನೆ’ ಎಂದಿದ್ದಾರೆ.

Advertisement

ಕಾನೂನಿನ ಚೌಕಟ್ಟಿನಲ್ಲೇ ವಿಚಾರಣೆ: ಕುಲಭೂಷಣ್‌ ಜಾಧವ್‌ ಪ್ರಕರಣವನ್ನು ಕಾನೂನಿನ ಚೌಕಟ್ಟಿನಲ್ಲೇ ನಿರ್ವಹಿಸಲಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ. ”ಜಾಧವ್‌ರನ್ನು ಬಿಡುಗಡೆಗೊಳಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಐಸಿಜೆ ತಳ್ಳಿಹಾಕಿರುವುದು ಸ್ವಾಗತಾರ್ಹ. ಆದರೆ, ಪಾಕಿಸ್ತಾನದಲ್ಲಿ ಕಾನೂನಿನ ಚೌಕಟ್ಟಿನಲ್ಲೇ ಆತನ ಪ್ರಕರಣವನ್ನು ನಿರ್ವಹಿಸಲಾಗುತ್ತದೆ” ಎಂದಿರುವ ಅವರು, ”ಭಾರತವು ಮುಂದೆಯೂ ಜಾಧವ್‌ ಬಿಡುಗಡೆಗೆ ಪ್ರಯತ್ನಿಸಲಿದ್ದು, ಆ ಪ್ರಯತ್ನಗಳಿಗೆ ಶುಭವಾಗಲಿ” ಎಂದಿದ್ದಾರೆ.

ಗೆಲುವು ಎಂದ ಜೇಟ್ಲಿ: ಜಾಧವ್‌ ಪ್ರಕರಣದಲ್ಲಿ ಐಸಿಜೆ ನೀಡಿವ ತೀರ್ಪು, ಭಾರತಕ್ಕೆ ಸಂದ ಸಮಗ್ರ ಗೆಲುವು ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಇದೇ ವೇಳೆ, ಐಸಿಜೆಯಲ್ಲಿ ತಮಗೇ ಗೆಲುವು ಸಿಕ್ಕಿದೆ ಎಂದು ಹೇಳಿರುವ ಪಾಕಿಸ್ತಾನದ ಹೇಳಿಕೆಯು ಹಾಸ್ಯಾಸ್ಪದ ಎಂದೂ ಅವರು ಟೀಕಿಸಿದ್ದಾರೆ.

1 ರೂ. 20 ಕೋಟಿ ರೂ.!

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್‌ ಜಾಧವ್‌ ಪ್ರಕರಣದ ವಕೀಲಿಕೆ ವಹಿಸಿದ್ದ ಹರೀಶ್‌ ಸಾಳ್ವೆ, ಭಾರತ ಸರ್ಕಾರದಿಂದ ಕೇವಲ 1 ರೂ. ಶುಲ್ಕ ಪಡೆದು ಪ್ರಕರಣ ನಿಭಾಯಿಸಿದ್ದರೆ, ಅತ್ತ ಪಾಕಿಸ್ತಾನ ಇದೇ ಪ್ರಕ ರಣದ ವಿಚಾರಣೆಗಾಗಿ 20 ಕೋಟಿ ರೂ. ಖರ್ಚು ಮಾಡಿದೆ! ಪಾಕಿಸ್ತಾನ ಸರ್ಕಾರ ಸಲ್ಲಿಸಿದ ಬಜೆಟ್ ಪ್ರತಿಯಲ್ಲಿ ಈ ವಿಚಾರ ಉಲ್ಲೇಖವಾಗಿದ್ದು, ಐಸಿಜೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿರುವ ಯು.ಕೆ.ಯ ವಕೀಲ ಖಾವರ್‌ ಖುರೇಷಿಯವರಿಗೆ 20 ಕೋಟಿ ರೂ. ನೀಡ ಲಾಗಿದೆ ಎಂದು ಹೇಳಲಾಗಿದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅದು 46 ಕೋಟಿ ರೂ. ಆಗಲಿದೆ.

ಭಾರತದ ಎಚ್ಚರಿಕೆ

ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಭಾರತ, ಜಾಧವ್‌ ವಿಚಾರದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವಲ್ಲಿ ಪಾಕಿಸ್ತಾನ ಕೈಗೊಳ್ಳುವ ಪ್ರತಿಯೊಂದು ನಡೆಯೂ ಭಾರತದ ಅವಗಾಹನೆಯಲ್ಲಿರುತ್ತದೆ. ತೀರ್ಪಿನ ಅನುಷ್ಠಾನದಲ್ಲಿ ಆಕ್ಷೇಪಾರ್ಹ ಹೆಜ್ಜೆಗಳು ಕಂಡುಬಂದಲ್ಲಿ ಅದನ್ನು ಪುನಃ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅಥವಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕೊಂಡೊಯ್ಯಲಾಗುತ್ತದೆ ಎಂದು ಎಚ್ಚರಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next