Advertisement

ದೇಶಕ್ಕೆ ಸಿಗಲಿದೆ ವಿಮಾನ ಬಲ; ಸಿ-295 ವಿಮಾನ ಉತ್ಪಾದನಾ ಘಟಕಕ್ಕೆ ಶಂಕು

10:18 PM Oct 30, 2022 | Team Udayavani |

ವಡೋದರಾ: ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ಭಾರತ ಸರಕು ಸಾಗಣೆಯ ವಿಮಾನಗಳ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರವಾಗಲಿದೆ.

Advertisement

ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಟಾಟಾ ಗ್ರೂಪ್‌ ಮತ್ತು ಏರ್‌ಬಸ್‌ ಸಹಭಾಗಿತ್ವದಲ್ಲಿ ಸಿ-295 ಸರಕು ಸಾಗಣೆಯ ವಿಮಾನಗಳ ನಿರ್ಮಾಣ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಸ್ಥಿರ, ಮುಂದಿನ ದಿನಗಳನ್ನು ಕೇಂದ್ರೀಕರಿಸಿ ಮತ್ತು ದೃಢವಾಗಿರುವ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಹೀಗಾಗಿಯೇ ದೇಶದಲ್ಲಿ ಆರ್ಥಿಕ ಸುಧಾರಣೆಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲಾಗುತ್ತಿದೆ. ಜತೆಗೆ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಇತ್ತೀಚಿನ ವರ್ಷಗಳಲ್ಲಿ ಭಾರತ ಹೊಸ ಮನಸ್ಥಿತಿ, ಹೊಸ ರೀತಿಯಲ್ಲಿ ಕೆಲಸ ಮಾಡುವ ಮನೋಭಾವದಲ್ಲಿ ಇದೆ. ಇದೇ ಕಾರಣದಿಂದಾಗಿ ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ಸರಕು ಸಾಗಣೆ ವಿಮಾನ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರವಾಗಿ ಪರಿವರ್ತನೆಯಾಗಲಿದೆ. ಜತೆಗೆ ಈ ನಿರ್ಧಾರ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಿಕ ವಿಮಾನಗಳನ್ನು ಉತ್ಪಾದನೆ ಮಾಡಲೂ ಅವಕಾಶ ಸಿಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ಜಗತ್ತೇ ಗುರಿ:
ಮೇಕ್‌ ಇನ್‌ ಇಂಡಿಯಾ ಎಂಬ ಧ್ಯೇಯವಾಕ್ಯದ ಅಡಿ ಜಗತ್ತನ್ನೇ ಗುರಿಯಾಗಿಸಿ ಇಲ್ಲಿ ವಿವಿಧ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದುವೇ ದೇಶಕ್ಕೆ ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ಹೆಸರು ತಂದುಕೊಡಲಿದೆ ಎಂದರು ಪ್ರಧಾನಿ ಮೋದಿ. ಭಾರತೀಯ ವಾಯುಪಡೆಗಾಗಿ ವಡೋದರಾ ಘಟಕದಲ್ಲಿ ಸರಕು ಸಾಗಣೆಯ ವಿಮಾನಗಳನ್ನು ಉತ್ಪಾದನೆ ಮಾಡುವ ಅಂಶ ದೇಶದ ಸೇನಾ ವ್ಯವಸ್ಥೆಗೆ ಹೆಚ್ಚಿನ ಬಲತಂದು ಕೊಡಲಿದೆ. ಇದರಿಂದಾಗಿ ವೈಮಾನಿತ ಉತ್ಪಾದನಾ ಕ್ಷೇತ್ರದಲ್ಲಿ ದೇಶಕ್ಕೆ ಪ್ರಸಿದ್ಧಿಯನ್ನೂ ತಂದುಕೊಡಲಿದೆ ಎಂದು ಹೇಳಿದ್ದಾರೆ.
“ಮುಂದಿನ ವರ್ಷಗಳಲ್ಲಿ ರಕ್ಷಣೆ ಮತ್ತು ವೈಮಾನಿತ ಉತ್ಪಾದನಾ ಕ್ಷೇತ್ರಗಳೆರಡೂ ದೇಶಕ್ಕೆ ಪ್ರಮುಖವಾಗಲಿದೆ. 2025ರ ವೇಳೆಗೆ ದೇಶದ ರಕ್ಷಣಾ ಉತ್ಪಾದನೆಯ ಮೌಲ್ಯ 25 ಬಿಲಿಯನ್‌ ಡಾಲರ್‌ ಮೊತ್ತವನ್ನು ದಾಟಲಿದೆ. ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಕೂಡ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದರು.

Advertisement

ಯೋಜನೆಯ ಹೈಲೈಟ್‌ ಏನು?
21, 935 ಕೋಟಿ- ಒಪ್ಪಂದ ಮೊತ್ತ

ಏನು ಉತ್ಪಾದನೆ
ಏರ್‌ಬಸ್‌ನ ಸಿ-295 ಸರಕು ಸಾಗಣೆ ವಿಮಾನ
56- ಒಟ್ಟು ವಿಮಾನಗಳು
16- ಏರ್‌ಬಸ್‌ನಿಂದ ಸಿಗಲಿರುವ ಅವೇ ಹಂತದಲ್ಲಿ ಸಿಗಲಿರುವ ವಿಮಾನ
39- ಆಗಸ್ಟ್‌ 2031ರ ಒಳಗೆ ವಡೋದರಾದಲ್ಲಿ ಉತ್ಪಾದನೆಯಾಗಲಿರುವ ವಿಮಾನಗಳು

ಸಹಭಾಗಿತ್ವ ಯಾರದ್ದು?
ಏರ್‌ಬಸ್‌ ಮತ್ತು ಟಾಟಾ ಗ್ರೂಪ್‌

ಹೆಗ್ಗಳಿಕೆ ಏನು?
– ದೇಶದ ಮಿಲಿಟರಿ ಉಪಯೋಗಕ್ಕಾಗಿ ಖಾಸಗಿ ಸಂಸ್ಥೆಯಿಂದ ಸರಕು ಸಾಗಣೆ ವಿಮಾನ ನಿರ್ಮಾಣ.
– 2026 ಸೆಪ್ಟೆಂಬರ್‌ ವೇಳೆಗೆ ದೇಶದಲ್ಲಿ ಸಿದ್ಧಗೊಳಿಸಿದ ಸಿ-296 ವಿಮಾನ ಸೇವೆಗೆ ಲಭ್ಯ.
– ಐರೋಪ್ಯ ಒಕ್ಕೂಟದಿಂದ ಹೊರಭಾಗದಲ್ಲಿ ಮೊದಲ ಬಾರಿಗೆ ಈ ವಿಮಾನ ಉತ್ಪಾದನೆ.
– 05ರಿಂದ 09 ಟನ್‌ ಭಾರ ಹೊರುವ ಸಾಮರ್ಥ್ಯ
– ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮತ್ತು ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ನ‌ ಉತ್ಪನ್ನಗಳ ಬಳಕೆ
– ಹೊಸ ವಿಮಾನಗಳಿಂದ ಸರಕು ಸಾಗಣೆ ಮಾಡುವ ಐಎಎಫ್ ಸಾಮರ್ಥ್ಯ ವೃದ್ಧಿಸಲಿದೆ.

ಯಾವುದರ ಬದಲು?
– ಐಎಎಫ್ ಈಗ ಆ್ಯವ್ರೋ748 ವಿಮಾನಗಳನ್ನು ಸರಕು ಸಾಗಣೆಗೆ ಬಳಸುತ್ತದೆ. ಉತ್ಪಾದನೆಯಾಗಲಿರುವ ಹೊಸ ವಿಮಾನಗಳು ಆ್ಯವ್ರೋ ಜಾಗವನ್ನು ತುಂಬಲಿವೆ.
35- ಜಗತ್ತಿನಲ್ಲಿ ಹೊಸ ವಿಮಾನ ಬಳಕೆ ಮಾಡಲಿರುವ ದೇಶ ಭಾರತ

ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಮನೋಭಾವನೆ ಹೊಂದಿರುವ ದೇಶಕ್ಕೆ ಈ ಹೊತ್ತು ಅಮೋಘವಾದದ್ದು.
-ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next