ನವದೆಹಲಿ:ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ವಸಾಹತು ಶಾಹಿ ವಿರುದ್ಧ ಹೋರಾಡಿದ ಅಸಾಮಾನ್ಯ, ಅಪ್ರತಿಮ ಸಮರ ಸೇನಾನಿಯ ಕೊಡುಗೆಯನ್ನು ದೇಶ ಯಾವತ್ತೂ ಮರೆಯಲು ಸಾಧ್ಯವಿಲ್ಲ. ದೇಶದ ಜನತೆ ಸದಾ ಕೃತಜ್ಞರಾಗಿರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 123ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಗೌರವ ಸಲ್ಲಿಸಿ ಮಾತನಾಡಿದರು.
ಭಾರತ ಯಾವಾಗಲೂ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ತ್ಯಾಗ, ಧೈರ್ಯವನ್ನು ಸದಾ ಸ್ಮರಿಸುತ್ತದೆ. ಇಂದು ಅಪ್ರತಿಮ ದೇಶಭಕ್ತನ ಜನ್ಮ ಜಯಂತಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನೇತಾಜಿ ತಂದೆ ಜಾನಕಿನಾಥ್ ಬೋಸ್ ಅವರನ್ನು ಮೋದಿ ನೆನಪಿಸಿಕೊಂಡಿದ್ದು, 1897 ಜನವರಿ 23ರಂದು ಅವರು ತಮ್ಮ ಡೈರಿಯಲ್ಲಿ ಈ ರೀತಿ ಬರೆದಿದ್ದರು…ನನ್ನ ಮಗ ಮಧ್ಯರಾತ್ರಿಯಲ್ಲಿ ಜನಿಸಿದ್ದಾನೆ. ಈ ಮಗು ಮುಂದೆ ಹೆದರಿಕೆಯೇ ಇಲ್ಲದ ಸ್ವಾತಂತ್ರ್ಯ ಹೋರಾಟಗಾರನಾಗುತ್ತಾನೆ ಮತ್ತು ಆತನ ಸ್ವಾತಂತ್ರ್ಯ ಹೋರಾಟದ ಜೀವನವನ್ನು ಎಲ್ಲರೂ ಪೂಜಿಸಲಿದ್ದಾರೆ ಎಂದು ಉಲ್ಲೇಖಿಸಿದ್ದರಂತೆ!
ನೀವು ನನಗೆ ರಕ್ತ ಕೊಟ್ಟರೆ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂಬ ಘೋಷಣೆ ಜನವರಿ 23ರಂದು ಪ್ರತಿ ಬಾರಿ ದೇಶದ ಜನರು ನೆನಪಿಸಿಕೊಳ್ಳುತ್ತಾರೆ. ಇಡೀ ದೇಶಾದ್ಯಂತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಅವರ ಗುಣಗಾನ ನಡೆಯುತ್ತದೆ. ಇವರೊಬ್ಬ ಧೀಮಂತ ದೇಶಭಕ್ತ ಎಂದು ವರದಿ ತಿಳಿಸಿದೆ.