Advertisement

ಭಾರತ-ವಿಂಡೀಸ್‌ ಟೆಸ್ಟ್‌ ಕದನ

01:56 AM Aug 22, 2019 | Team Udayavani |

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ಕೆರಿಬಿಯನ್‌ ನಾಡಿನಲ್ಲಿ ತನ್ನ ಕ್ರಿಕೆಟ್‌ ಪ್ರವಾಸವನ್ನು ಯಶಸ್ವಿಗೊಳಿಸುತ್ತಲೇ ಸಾಗುತ್ತಿರುವ ಟೀಮ್‌ ಇಂಡಿಯಾ ಈಗ “ಟೆಸ್ಟ್‌ ಚಾಂಪಿಯನ್‌ಶಿಪ್‌’ಗೆ ಅಣಿಯಾಗಿದೆ. ಗುರುವಾರದಿಂದ ಇಲ್ಲಿನ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ಕೊಹ್ಲಿ ಪಡೆ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸನ್ನು ಎದುರಿಸಲಿದ್ದು, ಇದು ಎರಡೂ ತಂಡಗಳ ಪಾಲಿಗೆ ಮೊದಲ ಟೆಸ್ಟ್‌ ವಿಶ್ವಕಪ್‌ ಪಂದ್ಯವಾಗಿದೆ.

Advertisement

ಈವರೆಗೆ ಟಿ20 ಮತ್ತು ಏಕದಿನ ಸರಣಿಗಳನ್ನು ಅಜೇಯ ಸಾಧನೆಯೊಂದಿಗೆ ವಶಪಡಿಸಿ ಕೊಂಡಿರುವ ಟೀಮ್‌ ಇಂಡಿಯಾ, ರೆಡ್‌ ಬಾಲ್‌ ಸವಾಲನ್ನೂ ಯಶಸ್ವಿಯಾಗಿ ನಿಭಾಯಿಸುವ ಉಮೇದಿನಲ್ಲಿದೆ. ಇದನ್ನೂ ಗೆದ್ದರೆ ವಿಂಡೀಸ್‌ ನೆಲದಲ್ಲಿ ಮೊದಲ ಬಾರಿಗೆ ಮೂರೂ ಪ್ರಕಾರಗಳ ಕ್ರಿಕೆಟ್‌ನಲ್ಲಿ ಭಾರತ ಸರಣಿ ವಶಪಡಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಹೇಗಿದ್ದೀತು ಹನ್ನೊಂದರ ಬಳಗ?
ಭಾರತದ ಸದ್ಯದ ಸಮಸ್ಯೆಯೆಂದರೆ, ಆಡುವ ಬಳಗವನ್ನು ಅಂತಿಮಗೊಳಿಸುವುದು. ಹೆಚ್ಚು ಅಪಾಯಕಾರಿಯಾಗಿರುವ ವೆಸ್ಟ್‌ ಇಂಡೀಸಿನ “ಲೈವಿÉ ಟ್ರ್ಯಾಕ್‌’ಗಳಲ್ಲಿ ಬ್ಯಾಟಿಂಗ್‌ ನಡೆಸುವುದು ಸುಲಭವಲ್ಲ. ನಾರ್ತ್‌ ಸೌಂಡ್‌ ಸೇರಿದಂತೆ ಇಲ್ಲಿ ಹೆಚ್ಚಿನೆಲ್ಲ ಪಿಚ್‌ಗಳೂ ಸೀಮ್‌ ಬೌಲಿಂಗಿಗೆ ಭರಪೂರ ನೆರವು ನೀಡುತ್ತಿವೆ. ಮಳೆ ಬಂದರಂತೂ ಬ್ಯಾಟಿಂಗ್‌ ಇನ್ನಷ್ಟು ಕಠಿನವಾಗಿ ಪರಿಣಮಿಸಬಹುದು. ವರ್ಷಾರಂಭದಲ್ಲಿ ಇಂಗ್ಲೆಂಡ್‌ ಇಲ್ಲಿ ಭಾರೀ ಒದ್ದಾಟ ನಡೆಸಿ ಸರಣಿಯನ್ನು 2-1ರಿಂದ ಕಳೆದುಕೊಂಡಿತ್ತು. ಇದೇ ಅಂಗಳದಲ್ಲಿ ನಡೆದ ಕೊನೆಯ ಟೆಸ್ಟ್‌ ವೇಳೆ ಆಂಗ್ಲರ ಪಡೆ 187 ಮತ್ತು 132ಕ್ಕೆ ಕುಸಿದಿದ್ದನ್ನು ಒಮ್ಮೆ ನೆನಪಿಸಿಕೊಳ್ಳುವುದು ಕ್ಷೇಮ.

ಭಾರತಕ್ಕೆ ತುರ್ತಾಗಿ ಬೇಕಿರುವುದು ನಿಂತು ಆಡುವವರ ಬ್ಯಾಟಿಂಗ್‌ ಲೈನ್‌ಅಪ್‌. ಆರಂಭಿಕರಾಗಿ ರಾಹುಲ್‌-ಅಗರ್ವಾಲ್‌ ಇಳಿಯಬಹುದಾದರೂ ಅಗರ್ವಾಲ್‌ ಜತೆ ಹನುಮ ವಿಹಾರಿ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬಳಿಕ ಪೂಜಾರ, ಕೊಹ್ಲಿ ಇದ್ದಾರೆ. ಮುಂದಿನ ಆಯ್ಕೆ ಬಹಳ ಜಟಿಲ. ರಹಾನೆ-ರೋಹಿತ್‌, ಅಶ್ವಿ‌ನ್‌-ರೋಹಿತ್‌, ಅಶ್ವಿ‌ನ್‌-ಕುಲದೀಪ್‌, ಪಂತ್‌-ಸಾಹಾ ನಡುವೆ ಪೈಪೋಟಿ ಇದೆ. ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ರಹಾನೆ, ರೋಹಿತ್‌ ಇಬ್ಬರೂ ಅವಕಾಶ ಪಡೆಯಲಿದ್ದಾರೆ ಎಂಬುದೊಂದು ಲೆಕ್ಕಾಚಾರ.

ಆಲ್‌ರೌಂಡರ್‌ ಜಡೇಜ ಸ್ಥಾನ ಖಾತ್ರಿ ಎನ್ನಲಡ್ಡಿ ಯಿಲ್ಲ. ವೇಗದ ವಿಭಾಗದಲ್ಲಿ ಇಶಾಂತ್‌, ಶಮಿ, ಬುಮ್ರಾ ದಾಳಿಗೆ ಇಳಿಯುವುದು ಖಚಿತ. 5 ಸ್ಪೆಷಲಿಸ್ಟ್‌ ಬೌಲರ್‌ಗಳ ಕಾಂಬಿನೇಶನ್‌ ಅನುಮಾನ.

Advertisement

2002ರ ಬಳಿಕ ಭಾರತ ಸೋತಿಲ್ಲ
ಕಳೆದ 17 ವರ್ಷಗಳಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸುತ್ತ ಬಂದಿದೆ. 2002ರ ಬಳಿಕ ವಿಂಡೀಸ್‌ ವಿರುದ್ಧ ಸೋಲನ್ನೇ ಕಾಣದಿರುವುದು ಭಾರತದ ಹೆಗ್ಗಳಿಕೆ.

ಅಂದಿನ ಕಿಂಗ್‌ಸ್ಟನ್‌ ಟೆಸ್ಟ್‌ ಪಂದ್ಯವನ್ನು ಸೌರವ್‌ಗಂಗೂಲಿ ನಾಯಕತ್ವದ ಭಾರತ 155 ರನ್ನುಗಳಿಂದ ಸೋತಿತ್ತು. ಕಾರ್ಲ್ ಹೂಪರ್‌ ವಿಂಡೀಸ್‌ ನಾಯಕರಾಗಿದ್ದರು. ಅನಂತರ ಇತ್ತಂಡಗಳು 21 ಟೆಸ್ಟ್‌ ಗಳಲ್ಲಿ ಮುಖಾಮುಖೀಯಾಗಿದ್ದವು. 12ರಲ್ಲಿ ಭಾರತ ಜಯಿಸಿದರೆ, 9 ಟೆಸ್ಟ್‌ಗಳು ಡ್ರಾಗೊಂಡಿದ್ದವು.

ನೂತನ ಕ್ರಿಕೆಟ್‌ ಜೆರ್ಸಿ ಬಿಡುಗಡೆ
ಟೆಸ್ಟ್‌ ವಿಶ್ವಕಪ್‌ಗಾಗಿ ಕ್ರಿಕೆಟಿಗರ ಹೆಸರು ಮತ್ತು ನಂಬರ್‌ ಇರುವ ಟೀಮ್‌ ಇಂಡಿಯಾದ ನೂತನ ಬಿಳಿ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಇದು ಟೆಸ್ಟ್‌ ಚಾಂಪಿಯನ್‌ಶಿಪ್‌ ಲಾಂಛನವನ್ನೂ ಹೊಂದಿದೆ. ಮಂಗಳವಾರ ಈ ಜೆರ್ಸಿ ಧರಿಸಿದ ಕೊಹ್ಲಿ ಪಡೆಯ ಫೋಟೋ ಶೂಟ್‌ ಕಾರ್ಯಕ್ರಮ ನಡೆಯಿತು.

ಭಾರತದ ಕೆಲವು ಆಟಗಾರರ ಹೆಸರು ಮತ್ತು ನಂಬರ್‌ ಈ ರೀತಿಯಾಗಿದೆ: ವಿರಾಟ್‌-18, ಅಜಿಂಕ್ಯ-3, ವಿಹಾರಿ-44, ಅಶ್ವಿ‌ನ್‌-99, ರೋಹಿತ್‌-45, ಮಾಯಾಂಕ್‌-14, ಶರ್ಮ (ಇಶಾಂತ್‌)-97, ರಿಷಭ್‌-17, ಜಡೇಜ-8, ಪೂಜಾರ-25, ಕುಲದೀಪ್‌-23, ಶಮಿ-11.

ದಾಖಲೆಗಳತ್ತ ಕೊಹ್ಲಿ…
ನಂ.1 ಟೆಸ್ಟ್‌ ಬ್ಯಾಟ್ಸ್‌ ಮನ್‌ ವಿರಾಟ್‌ ಕೊಹ್ಲಿ ವಿಂಡೀಸ್‌ ಎದುರಿನ 2 ಪಂದ್ಯಗಳ ಕಿರು ಸರಣಿಯಲ್ಲಿ ಕೆಲವು ದಾಖಲೆಗಳನ್ನು ಸ್ಥಾಪಿಸುವ ಹಾದಿಯಲ್ಲಿದ್ದಾರೆ. ಇನ್ನೊಂದು ಶತಕ ಹೊಡೆದರೆ ನಾಯಕನಾಗಿ ಅತ್ಯಧಿಕ ಶತಕ ಹೊಡೆದಿರುವ ಯಾದಿಯಲ್ಲಿ ರಿಕಿ ಪಾಂಟಿಂಗ್‌ ಜತೆ ಜಂಟಿ 2ನೇ ಸ್ಥಾನ ಅಲಂಕರಿಸುವರು (19). ದಾಖಲೆ ಗ್ರೇಮ್‌ ಸ್ಮಿತ್‌ ಹೆಸರಲ್ಲಿದೆ (25).

ಇನ್ನೊಂದು ಟೆಸ್ಟ್‌ ಪಂದ್ಯ ಗೆದ್ದರೆ ಧೋನಿ ಅವರ ಭಾರತೀಯ ದಾಖಲೆಯನ್ನು ಸರಿದೂಗಿಸಲಿದ್ದಾರೆ (27 ಗೆಲುವು). ಕೊಹ್ಲಿ 46 ಟೆಸ್ಟ್‌ ಗಳಿಂದ 26ರಲ್ಲಿ ಜಯ ಸಾಧಿಸಿದ್ದಾರೆ.ಧೋನಿ 60 ಪಂದ್ಯಗಳಿಂದ 27 ಗೆಲುವು ದಾಖಲಿಸಿದ್ದಾರೆ.

ವಿಂಡೀಸಿಗೆ ಅನುಭವದ ಕೊರತೆ
ಆತಿಥೇಯ ವೆಸ್ಟ್‌ ಇಂಡೀಸ್‌ ತಂಡಕ್ಕೆ ಕಾಡುತ್ತಿರುವುದು ಅನುಭವಿಗಳ ಕೊರತೆ. ಕ್ಯಾಂಬೆಲ್‌, ಹೋಪ್‌, ಹೆಟ್‌ಮೈರ್‌-ಈ ಮೂವರು ಯುವ ಆಟಗಾರರ ಮೇಲೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಭಾರ ಇದೆ. 52 ಟೆಸ್ಟ್‌ ಆಡಿರುವ ಡ್ಯಾರನ್‌ ಬ್ರಾವೊ ಒಬ್ಬರೇ ಅನುಭವಿ ಬ್ಯಾಟ್ಸ್‌ ಮನ್‌.

ಆಲ್‌ರೌಂಡರ್‌ ರೋಸ್ಟನ್‌ ಚೇಸ್‌, ನಾಯಕ ಜಾಸನ್‌ ಹೋಲ್ಡರ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಜಾಗತಿಕ ಕ್ರಿಕೆಟಿನ ಹೊಸ ದೈತ್ಯ, 140 ಕೆಜಿ ತೂಕದ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ರಖೀಮ್‌ ಕಾರ್ನ್ವಾಲ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡುವರೇ ಎಂಬುದೊಂದು ಕುತೂಹಲ.

ಸಂಭಾವ್ಯ ತಂಡಗಳು
ಭಾರತ: ಹನುಮ ವಿಹಾರಿ, ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ/ಆರ್‌. ಅಶ್ವಿ‌ನ್‌, ರಿಷಭ್‌ ಪಂತ್‌, ಜಡೇಜ, ಇಶಾಂತ್‌, ಶಮಿ, ಬುಮ್ರಾ.

ವೆಸ್ಟ್‌ ಇಂಡೀಸ್‌:ಕ್ರೆಗ್‌ ಬ್ರಾತ್‌ವೇಟ್‌, ಜಾನ್‌ ಕ್ಯಾಂಬೆಲ್‌, ಶೈ ಹೋಪ್‌, ಡ್ಯಾರನ್‌ ಬ್ರಾವೊ, ಹೆಟ್‌ಮೈರ್‌, ರೋಸ್ಟನ್‌ ಚೇಸ್‌, ಶೇನ್‌ ಡೌರಿಚ್‌, ಜಾಸನ್‌ ಹೋಲ್ಡರ್‌ (ನಾಯಕ), ರಖೀಂ ಕಾರ್ನ್ವಾಲ್‌, ಶಾನನ್‌ ಗ್ಯಾಬ್ರಿಯಲ್‌, ಕೆಮರ್‌ ರೋಚ್‌.

Advertisement

Udayavani is now on Telegram. Click here to join our channel and stay updated with the latest news.

Next