Advertisement

ಇನ್ನು ಭಾರತ-ವೆಸ್ಟ್‌ ಇಂಡೀಸ್‌ ಏಕದಿನ ಕದನ

10:13 AM Dec 16, 2019 | Sriram |

ಚೆನ್ನೈ: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿಯನ್ನು ವಶಪಡಿಸಿಕೊಂಡ ಖುಷಿಯಲ್ಲಿರುವ ಭಾರತವಿನ್ನು ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ. ಮೊದಲ ಪಂದ್ಯ ರವಿವಾರ ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ಇಲ್ಲಿ ಉತ್ತಮ ದಾಖಲೆ ಹೊಂದಿರುವ ಟೀಮ್‌ ಇಂಡಿಯಾ ಇದನ್ನು ಕಾಯ್ದುಕೊಳ್ಳುವ ಗುರಿಯೊಂದಿಗೆ ಹೋರಾಟಕ್ಕೆ ಇಳಿಯಲಿದೆ.

Advertisement

ಆದರೆ ಚೆನ್ನೈಯಲ್ಲೀಗ ಮಳೆ ಹಾಗೂ ಮೋಡದ ವಾತಾವರಣವಿದ್ದು, ಪಂದ್ಯಕ್ಕೆ ಅಡಚಣೆಯೊಡ್ಡಲೂಬಹುದು. ರಾತ್ರಿ ಸುರಿದ ಮಳೆಯಿಂದಾಗಿ ಶನಿವಾರ ಬೆಳಗಿನ ಅವಧಿಯ ಭಾರತದ ಅಭ್ಯಾಸ ರದ್ದುಗೊಂಡಿದೆ.

ಗಾಯಾಳುಗಳಿಂದ ಸಮಸ್ಯೆ ಇಲ್ಲ
ಸರಣಿಯ ಆರಂಭಕ್ಕೂ ಮೊದಲೇ ಭಾರತ ಇಬ್ಬರು ಆಟಗಾರರ ಸೇವೆಯನ್ನು ಕಳೆದುಕೊಂಡಿದೆ. ಎಡಗೈ ಆರಂಭಕಾರ ಶಿಖರ್‌ ಧವನ್‌ ಮತ್ತು ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ಗಾಯಾಳಾಗಿ ಹೊರಬಿದ್ದಿದ್ದಾರೆ. ಆದರೆ ಇದರಿಂದ ಕೊಹ್ಲಿ ಪಡೆ ಆತಂಕಪಡುವ ಅಗತ್ಯವೇನೂ ಇಲ್ಲ. ಇವರಿಬ್ಬರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರರು ತಂಡದಲ್ಲಿದ್ದಾರೆ. ಅಲ್ಲದೇ ಧವನ್‌ ಮತ್ತು ಭುವನೇಶ್ವರ್‌ ಅವರ ಇತ್ತೀಚಿನ ಫಾರ್ಮ್ ಕೂಡ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದು ಗಮನಾರ್ಹ.

ಬ್ಯಾಟ್ಸ್‌ಮನ್‌ಗಳ ಮೆರೆದಾಟ?
ಟಿ20 ಸರಣಿಯುದ್ದಕ್ಕೂ ಎರಡೂ ತಂಡಗಳ ಬ್ಯಾಟ್ಸ್‌ ಮನ್‌ಗಳೇ ಮೆರೆದಿದ್ದರು. ಭಾರತದಲ್ಲಿ ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಶಿವಂ ದುಬೆ ಅಮೋಘ ಪ್ರದರ್ಶನ ನೀಡಿದ್ದರು. ವಿಂಡೀಸ್‌ ಕಡೆಯಿಂದ ಪೊಲಾರ್ಡ್‌, ಹೆಟ್‌ಮೈರ್‌ ಮೊದಲಾದವರು ಮಿಂಚಿನ ಆಟವಾಡಿದ್ದರು. ಕೊನೆಯ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದ್ದನ್ನು ಹೊರತುಪಡಿಸಿದರೆ ಬೇರೆಲ್ಲೂ ಬೌಲಿಂಗ್‌ ಜಾದೂ ನಡೆದಿರಲಿಲ್ಲ.

ಇದನ್ನು ಗಮನಿಸುವಾಗ ಏಕದಿನ ಸರಣಿಯಲ್ಲೂ ರನ್‌ ಸುರಿಮಳೆ ಆದೀತೆಂಬ ನಿರೀಕ್ಷೆ ಇದೆ. ಆದರೆ ಇಲ್ಲಿ ನಿಂತು ಆಡಬೇಕಾದ್ದರಿಂದ ಬೌಲರ್‌ಗಳಿಗೂ ಸೂಕ್ತ ತಂತ್ರಗಾರಿಕೆ ರೂಪಿಸಲು ಸಮಯ ಸಿಗುತ್ತದೆ ಎಂಬುದನ್ನು ಮರೆಯುವಂತಿಲ್ಲ.

Advertisement

ಬೌಲಿಂಗ್‌ ಆಯ್ಕೆಯ ಗೊಂದಲ
ಸದ್ಯ ಭಾರತದ ಬ್ಯಾಟಿಂಗ್‌ ವಿಭಾಗದಲ್ಲಿ ಆಯ್ಕೆಯ ಗೊಂದಲವಿಲ್ಲ. ಅಗರ್ವಾಲ್‌ ಬಂದರೂ ಅವರಿಗೆ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂದೇ ಹೇಳಬಹುದು. ರೋಹಿತ್‌ ಜತೆ ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಬಳಿಕ ಕೊಹ್ಲಿ, ಅಯ್ಯರ್‌, ಪಂತ್‌, ಜಾಧವ್‌ ಬ್ಯಾಟಿಂಗ್‌ ಸರದಿಯನ್ನು ಮುಂದುವರಿಸಲಿದ್ದಾರೆ.

ಆದರೆ ಬೌಲಿಂಗ್‌ ಆಯ್ಕೆಯ ವೇಳೆ ಒಂದಿಷ್ಟು ಯೋಚಿಸಬೇಕಾಗುತ್ತದೆ. ಅನುಭವಿ ಶಮಿ ಮತ್ತು ಭರವಸೆಯ ದೀಪಕ ಚಹರ್‌ ವೇಗದ ಬೌಲಿಂಗ್‌ ವಿಭಾಗದ ಪ್ರಮುಖರು. “ಚಿಪಾಕ್‌ ಅಂಗಳ’ ನಿಧಾನ ಗತಿಯ ಬೌಲರ್‌ಗಳಿಗೆ ನೆರವು ನೀಡುವ ನಿರೀಕ್ಷೆಯಿದ್ದು, ಯಜುವೇಂದ್ರ ಚಹಲ್‌-ಕುಲದೀಪ್‌ ಯಾದವ್‌ ಅವರ ಅವಳಿ ಸ್ಪಿನ್‌ ದಾಳಿ ನಡೆದೀತು. ಆಗ ಇವರಿಬ್ಬರೂ ವಿಶ್ವಕಪ್‌ ಬಳಿಕ ಒಟ್ಟಿಗೇ ಆಡುವ ಅವಕಾಶ ಪಡೆದಂತಾಗುತ್ತದೆ. ಅಕಸ್ಮಾತ್‌ ಇವರಿಬ್ಬರಲ್ಲೊಬ್ಬರು ಆಡದೇ ಹೋದರೆ ಈ ಸ್ಥಾನ ಶಿವಂ ದುಬೆ ಪಾಲಾಗಬಹುದು. ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ಗಳಾದ ಕೇದಾರ್‌ ಜಾಧವ್‌ ಮತ್ತು ರವೀಂದ್ರ ಜಡೇಜ ನಡುವೆಯೂ ಪೈಪೋಟಿ ಇದೆ.

ವಿಂಡೀಸ್‌ ಬಲಾಡ್ಯ ಪಡೆ
ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ವೆಸ್ಟ್‌ ಇಂಡೀಸ್‌ ಬಲಾಡ್ಯ ಪಡೆಯನ್ನೇ ಹೊಂದಿದೆ. ಲೆವಿಸ್‌, ಆ್ಯಂಬ್ರಿಸ್‌, ಹೋಪ್‌, ಹೆಟ್‌ಮೈರ್‌, ಚೇಸ್‌, ಪೂರಣ್‌, ಹೋಲ್ಡರ್‌… ಹೀಗೆ ಸಾಗುತ್ತದೆ ಬ್ಯಾಟಿಂಗ್‌ ಸರದಿ. ಇವರಲ್ಲಿ ಇಬ್ಬರು ಸಿಡಿದು ನಿಂತರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.

ಆದರೆ ವಿಂಡೀಸ್‌ ಬೌಲಿಂಗ್‌ ಘಾತಕವಲ್ಲ, ಇದರಲ್ಲಿ ವೆರೈಟಿ ಕೂಡ ಇಲ್ಲ. ಕಾಟ್ರೆಲ್‌, ವಾಲ್ಶ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಯಾವ ಮಾದರಿಗೂ ಹೊಂದಿಕೊಳ್ಳಬಲ್ಲೆ: ಅಗರ್ವಾಲ್‌
ಟೆಸ್ಟ್‌ ಕ್ರಿಕೆಟಿನ ಆರಂಭಿಕನಾಗಿ ಕ್ಲಿಕ್‌ ಆದ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಈಗ ಏಕದಿನಕ್ಕೆ ಕರೆ ಪಡೆದಿದ್ದಾರೆ. ಟೆಸ್ಟ್‌ ಸ್ಪೆಷಲಿಸ್ಟ್‌ ಆಗಿ ಗುರುತಿಸಲ್ಪಡುವ ಹಾದಿಯಲ್ಲಿರುವ ಅವರು ಏಕದಿನಕ್ಕೆ ಹೊಂದಿಕೊಳ್ಳಬಲ್ಲರೇ ಎಂಬುದೊಂದು ಪ್ರಶ್ನೆ. ಸಹ ಆಟಗಾರ ಯಜುವೇಂದ್ರ ಚಹಲ್‌ ನಡೆಸಿದ ವೀಡಿಯೋ ಸಂದರ್ಶನದಲ್ಲಿ ಅಗರ್ವಾಲ್‌ ಈ ಪ್ರಶ್ನೆಯನ್ನು ಎದುರಿಸಿದ್ದು, “ಒಂದು ಮಾದರಿಯಿಂದ ಇನ್ನೊಂದು ಮಾದರಿಗೆ ಹೊಂದಿಕೊಳ್ಳುವುದು ನನಗೆ ಸಮಸ್ಯೆಯಾಗೇನೂ ಕಾಡದು’ ಎಂದಿದ್ದಾರೆ.

“ಇವೆಲ್ಲ ಕೇವಲ ಮನಃಸ್ಥಿತಿಯ ಪ್ರಶ್ನೆ. ನಿಮ್ಮ ಗೇಮ್‌ ಪ್ಲ್ರಾನ್‌ ಸ್ಪಷ್ಟವಾಗಿದ್ದರೆ, ನೀವು ಪಂದ್ಯದ ಬಗ್ಗೆ ಕೂಲಂಕಷವಾಗಿ ಅರಿತುಕೊಂಡಿದ್ದರೆ ಒಂದು ಮಾದರಿಯಿಂದ ಇನ್ನೊಂದು ಮಾದರಿಗೆ ಹೊಂದಿಕೊಳ್ಳುವುದು ಸಮಸ್ಯೆಯಾಗದು’ ಎಂದು ಅಗರ್ವಾಲ್‌ ಹೇಳಿದರು.

“ಬ್ಯಾಟಿಂಗ್‌ ವೇಳೆ ಸಾಧ್ಯವಾದಷ್ಟು ಹೆಚ್ಚು ರನ್‌ ಬಾರಿಸಿ ತಂಡದ ನೆರವಿಗೆ ನಿಲ್ಲುವುದೇ ನನ್ನ ಗುರಿ. ಅಕಸ್ಮಾತ್‌ ಇದು ಸಾಧ್ಯವಾಗದೇ ಹೋದಾಗ ಫೀಲ್ಡಿಂಗ್‌ನಲ್ಲಿ ಈ ಕೊರತೆಯನ್ನು ನೀಗಿಸಿಕೊಳ್ಳಬೇಕು’ ಎಂದರು.

ಅಗರ್ವಾಲ್‌ಗೆ ಅವಕಾಶ ಇದೆಯೇ?
ಮಾಯಾಂಕ್‌ ಅಗರ್ವಾಲ್‌ ಬದಲಿ ಆಟಗಾರನಾಗಿ ಭಾರತದ ಏಕದಿನ ತಂಡವನ್ನು ಪ್ರವೇಶಿಸುತ್ತಿರುವುದು ಇದು 2ನೇ ಸಲ. ಕಳೆದ ವಿಶ್ವಕಪ್‌ ವೇಳೆ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಗಾಯಾಳಾಗಿ ಹೊರಬಿದ್ದಾಗ ಅಗರ್ವಾಲ್‌ ಅವರನ್ನು ಕರೆಸಿಕೊಳ್ಳಲಾಗಿತ್ತು. ಆದರೆ ಆಡುವ ಅವಕಾಶ ಲಭಿಸಿರಲಿಲ್ಲ.

ಈಗ ಶಿಖರ್‌ ಧವನ್‌ ಗಾಯಾಳಾದ ಕಾರಣ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ರೋಹಿತ್‌ ಶರ್ಮ ಜತೆ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಲಭಿಸೀತೇ ಎಂಬುದೊಂದು ಪ್ರಶ್ನೆ. ವಿಂಡೀಸ್‌ ಎದುರಿನ ಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿರುವ ಕೆ.ಎಲ್‌. ರಾಹುಲ್‌ ಆರಂಭಿಕನಾಗಿ ಇಳಿಯುವುದು ಬಹುತೇಕ ಖಚಿತ. ಆಗ ಅಗರ್ವಾಲ್‌ ಹೊರಗುಳಿಯುವುದು ಅನಿವಾರ್ಯವಾಗುತ್ತದೆ.

ತಂಡಗಳು
ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಮಾಯಾಂಕ್‌ ಅಗರ್ವಾಲ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ಶಿವಂ ದುಬೆ, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ದೀಪಕ್‌ ಚಹರ್‌, ಮೊಹಮ್ಮದ್‌ ಶಮಿ, ಶಾದೂìಲ್‌ ಠಾಕೂರ್‌.

ವೆಸ್ಟ್‌ ಇಂಡೀಸ್‌: ಕೈರನ್‌ ಪೊಲಾರ್ಡ್‌ (ನಾಯಕ), ಎವಿನ್‌ ಲೆವಿಸ್‌, ಸುನೀಲ್‌ ಆ್ಯಂಬ್ರಿಸ್‌, ಶೈ ಹೋಪ್‌, ನಿಕೋಲಸ್‌ ಪೂರಣ್‌, ಶಿಮ್ರನ್‌ ಹೆಟ್‌ಮೈರ್‌, ರೋಸ್ಟನ್‌ ಚೇಸ್‌, ಜಾಸನ್‌ ಹೋಲ್ಡರ್‌, ಅಲ್ಜಾರಿ ಜೋಸೆಫ್, ಶೆಲ್ಡನ್‌ ಕಾಟ್ರೆಲ್‌, ಬ್ರ್ಯಾಂಡನ್‌ ಕಿಂಗ್‌, ಖಾರಿ ಪಿಯರೆ, ರೊಮಾರಿಯೊ ಶೆಫ‌ರ್ಡ್‌, ಕೀಮೊ ಪೌಲ್‌, ಹೇಡನ್‌ ವಾಲ್ಶ್ ಜೂನಿಯರ್‌.
ಆರಂಭ: ಅಪರಾಹ್ನ 1.30
ಪ್ರಸಾರ ಸ್ಟಾರ್‌ ನ್ಪೋರ್ಟ್ಸ್

ಚೆನ್ನೈಯಲ್ಲಿ
ಭಾರತ-ವೆಸ್ಟ್‌ ಇಂಡೀಸ್‌
ಭಾರತ-ವೆಸ್ಟ್‌ ಇಂಡೀಸ್‌ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಈವರೆಗೆ 4 ಏಕದಿನ ಪಂದ್ಯಗಳನ್ನಾಡಿವೆ. ಇದರಲ್ಲಿ ಭಾರತ ಮೂರನ್ನು ಗೆದ್ದರೆ, ವಿಂಡೀಸ್‌ ಒಂದರಲ್ಲಷ್ಟೇ ಜಯ ಸಾಧಿಸಿದೆ.

ಭಾರತ ಹೊರತುಪಡಿಸಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ವಿರುದ್ಧವೂ ವಿಂಡೀಸ್‌ ಒಂದೊಂದು ಪಂದ್ಯವನ್ನಾಡಿದೆ. ಎರಡರಲ್ಲೂ ಸೋಲನುಭವಿಸಿದೆ. ಹೀಗೆ ಚೆನ್ನೈಯಲ್ಲಿ ಒಟ್ಟು 6 ಏಕದಿನ ಪಂದ್ಯಗಳನ್ನಾಡಿರುವ ಕೆರಿಬಿಯನ್‌ ಪಡೆ 5 ಸೋಲುಗಳ ಆಘಾತಕಾರಿ ದಾಖಲೆ ಹೊಂದಿದೆ.ಭಾರತ ಚೆನ್ನೈಯಲ್ಲಿ 13 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಏಳರಲ್ಲಿ ಗೆದ್ದು, ನಾಲ್ಕರಲ್ಲಿ ಸೋಲನುಭವಿಸಿದೆ. ಉಳಿದೆರಡು ಪಂದ್ಯಗಳು ರದ್ದುಗೊಂಡಿವೆ.

2 ವರ್ಷಗಳ ಬಳಿಕ
ಚೆನ್ನೈಯಲ್ಲಿ 2 ವರ್ಷಗಳ ಬಳಿಕ ಏಕದಿನ ಅಂತಾ ರಾಷ್ಟ್ರೀಯ ಪಂದ್ಯ ಏರ್ಪಡುತ್ತಿದೆ. ಇಲ್ಲಿ ಕೊನೆಯ ಪಂದ್ಯ ನಡೆದದ್ದು 2017ರ ಸೆ. 17ರಂದು.

ಆಸ್ಟ್ರೇಲಿಯ ವಿರುದ್ಧದ ಈ ಪಂದ್ಯವನ್ನು ಭಾರತ 26 ರನ್ನುಗಳಿಂದ ಜಯಿಸಿತ್ತು.

ಏಕದಿನ ಸರಣಿ ವೇಳಾಪಟ್ಟಿ
ದಿನಾಂಕ      ಪಂದ್ಯ         ಸ್ಥಳ     ಆರಂಭ

ಡಿ. 15    ಮೊದಲ ಪಂದ್ಯ ಚೆನ್ನೈ     1.30
ಡಿ. 18    ದ್ವಿತೀಯ ಪಂದ್ಯ ವಿಶಾಖಪಟ್ಟಣ 1.30
ಡಿ. 22    ತೃತೀಯ ಪಂದ್ಯ ಕಟಕ್‌    1.30

Advertisement

Udayavani is now on Telegram. Click here to join our channel and stay updated with the latest news.

Next