Advertisement

ಅಸಮಂಜಸ ನಕಾಶೆ ಪ್ರದರ್ಶಿಸಿದ ಪಾಕ್: SCO ಸಭೆಯಿಂದ ಹೊರನಡೆದ ಭಾರತ

10:22 PM Sep 15, 2020 | Hari Prasad |

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ಥಾನ ದೇಶಗಳ ಗಡಿ ಭಾಗಗಳನ್ನು ಅಸಮಂಜಸ ರೀತಿಯಲ್ಲಿ ಬಿಂಬಿಸುವ ತನ್ನ ನಕ್ಷೆಯನ್ನು ಪಾಕಿಸ್ಥಾನ ಪ್ರದರ್ಶಿಸಿರುವುದನ್ನು ಖಂಡಿಸಿ ಭಾರತವು ಸಹಕಾರ ಸಂಸ್ಥೆಯ (SCO) ವರ್ಚ್ಯುವಲ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದೆ.

Advertisement

ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ವರ್ಚ್ಯುವಲ್ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಪಾಕಿಸ್ಥಾನ ಈ ದುರ್ವರ್ತನೆಯನ್ನು ತೋರಿಸಿರುವುದು ಭಾರತವನ್ನು ಸಹಜವಾಗಿಯೇ ಕೆರಳಿಸಿದೆ.

‘ರಷ್ಯಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಈ ವರ್ಚ್ಯುವಲ್ ಸಭೆಯ ಸಂದರ್ಭದಲ್ಲಿ ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಉದ್ದೇಶಪೂರ್ವಕವಾಗಿಯೇ ಆ ದೇಶ ಕಳೆದ ಕೆಲವು ದಿನಗಳಿಂದ ಬಿಂಬಿಸುತ್ತಿರುವ ಅಸಮಂಜಸ ನಕ್ಷೆಯನ್ನು ಪ್ರದರ್ಶಿಸಿದರು’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರ ಹೇಳಿಕೆಯನ್ನು ಆಧರಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪಾಕಿಸ್ಥಾನದ ಈ ಅಧಿಕಪ್ರಸಂಗಿತನ ಸಭೆಯ ನಿಯಮಾವಳಿಗಳಿಗೆ ವಿರುದ್ಧವಾಗಿತ್ತು. ಹಾಗಾಗಿ ಈ ಸಭೆಯನ್ನು ಆಯೋಜಿಸಿದ್ದ ರಾಷ್ಟ್ರದ ಜೊತೆ ಸಮಾಲೋಚನೆ ನಡೆಸಿ ಭಾರತವು ಈ ಸಭೆಯಿಂದ ಹೊರ ನಡೆಯಿತು ಎಂದು ಶ್ರೀವಾಸ್ತವ ಅವರು ಘಟನೆಯ ಕುರಿತಾದ ವಿವರಗಳನ್ನು ನೀಡಿದ್ದಾರೆ.

ಇಂದಿನ ಬೆಳವಣಿಗೆಗಳ ಕುರಿತಾಗಿ ನಿಖರ ಮಾಹಿತಿ ಹೊಂದಿರುವ ವ್ಯಕ್ತಿ ತನ್ನ ಗುರುತಿನ ಗೌಪ್ಯತೆಯನ್ನು ಕಾಪಿಡುವ ಷರತ್ತಿನ ಮೇಲೆ ಪಾಕ್ ನಡೆಸಿದ ಕಿತಾಪತಿಯನ್ನು ‘ಹಿಂದೂಸ್ತಾನ್ ಟೈಮ್ಸ್’ ಜೊತೆ ಹಂಚಿಕೊಂಡಿದ್ದು ಹೀಗೆ…:

Advertisement

‘ಇಂದಿನ ವರ್ಚ್ಯುವಲ್ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಾಕಿಸ್ಥಾನದ ಪ್ರತಿನಿಧಿ ಕುಳಿತಿದ್ದ ಹಿಂಭಾಗದಲ್ಲಿ ಇರಿಸಲಾಗಿದ್ದ ನಕಾಶೆ ಅಸಮಂಜಸ ಮತ್ತು ಕಾಲ್ಪನಿಕವಾಗಿತ್ತು. ಮತ್ತು ಈ ನಕಾಶೆಯಲ್ಲಿ ಭಾರತದ ಸಾರ್ವಭೌಮತೆಗೊಳಪಟ್ಟ ಪ್ರದೇಶಗಳನ್ನು ಪಾಕಿಸ್ಥಾನ ತನ್ನದೆಂದು ಬಿಂಬಿಸಿಕೊಂಡಿತ್ತು. ಮತ್ತು ಪಾಕ್ ನ ಈ ನಡೆ SCOನ ಸದಸ್ಯ ರಾಷ್ಟ್ರಗಳ ಸಾರ್ವಭೌಮತೆ, ಸಮಗ್ರತೆಯ ರಕ್ಷಣೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನು ಕಂಡ ಕೂಡಲೇ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅಜಿತ್ ದೋವಲ್ ಮತ್ತು ಅವರ ತಂಡ ಪಾಕ್ ನ ಈ ದುಸ್ಸಾಹಸವನ್ನು ಕಟುಶಬ್ದಗಳಲ್ಲಿ ಖಂಡಿಸಿದ್ದಾರೆ ಮತ್ತು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಷ್ಯಾ ಸಹ ಪಾಕಿಸ್ಥಾನಕ್ಕೆ ಈ ರೀತಿ ಮಾಡದಂತೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿತು.

ಮತ್ತು ಈ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೊಲಾಯ್ ಪತ್ರುಶೇವ್ ಅವರು ಅಜಿತ್ ದೋವಲ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮಾತ್ರವಲ್ಲದೇ ಪಾಕಿಸ್ಥಾನದ ಈ ಆಕ್ಷೇಪಾರ್ಹ ನಡೆ SCOದಲ್ಲಿ ಭಾರತದ ಭಾಗವಹಿಸುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು ಹಾಗೂ ಮುಂಬರುವ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಅಜಿತ್ ದೋವಲ್ ಅವರ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿರುವುದಾಗಿ ಪತ್ರುಶೇವ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next