Advertisement

ಭಾರತದ ಕ್ಲೀನ್‌ ಸ್ವೀಪ್‌ ಯೋಜನೆ ಯಶಸ್ವಿ; ಶುಭಮನ್‌ ಗಿಲ್‌, ಸಿಕಂದರ್‌ ರಝಾ ಸೆಂಚುರಿ ಥ್ರಿಲ್‌

11:13 PM Aug 22, 2022 | Team Udayavani |

ಹರಾರೆ: ಸಿಕಂದರ್‌ ರಝಾ ಅವರ ಶತಕ ಸಾಹಸದಿಂದ ಮುನ್ನುಗ್ಗಿ ಬಂದ ಜಿಂಬಾಬ್ವೆಯನ್ನು 13 ರನ್ನುಗಳಿಂದ ರೋಚಕವಾಗಿ ಮಣಿಸಿದ ಭಾರತ ತನ್ನ ಕ್ಲೀನ್‌ ಸ್ವೀಪ್‌ ಯೋಜನೆಯನ್ನು ಯಶಸ್ವಿಗೊಳಿಸಿತು. ಜತೆಗೆ ಜಿಂಬಾಬ್ವೆ ವಿರುದ್ಧ ಸತತ 15ನೇ ಏಕದಿನ ಗೆಲುವು ಸಾಧಿಸಿತು.

Advertisement

ಭಾರತದ ಪರ ಶುಭಮನ್‌ ಗಿಲ್‌ ಚೊಚ್ಚಲ ಶತಕ (130) ಬಾರಿಸಿ ಸಂಭ್ರಮಿಸಿದರೆ, ಜಿಂಬಾಬ್ವೆಯ ಅನು ಭವಿ ಬ್ಯಾಟರ್‌ ಸಿಕಂದರ್‌ ರಝಾ 6ನೇ ಸೆಂಚುರಿ ಹೊಡೆದು (115) ಹೋರಾಟವನ್ನು ಜಾರಿಯಲ್ಲಿರಿಸಿದರು. 49ನೇ ಓವರ್‌ನಲ್ಲಿ ರಝಾ ವಿಕೆಟ್‌ ಉರುಳಿದ ಬಳಿಕವೇ ಭಾರತದ ಗೆಲುವು ಖಾತ್ರಿಯಾದದ್ದು.

ಟಾಸ್‌ ಗೆದ್ದ ಕೆ.ಎಲ್‌. ರಾಹುಲ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು. 8 ವಿಕೆಟಿಗೆ 289 ರನ್‌ ಸಂಗ್ರಹಗೊಂಡಿತು. ಇದು ಈ ಸರಣಿಯಲ್ಲಿ ದಾಖಲಾದ ಮೊದಲ 200 ಪ್ಲಸ್‌ ಸ್ಕೋರ್‌. ಜವಾಬಿತ್ತ ಜಿಂಬಾಬ್ವೆ ಕೂಡ ಇನ್ನೂರರ ಗಡಿ ದಾಟಿತು. 49.3 ಓವರ್‌ಗಳಲ್ಲಿ 276ಕ್ಕೆ ಆಲೌಟ್‌ ಆಯಿತು.

ಗಿಲ್‌ ಚೊಚ್ಚಲ ಸೆಂಚುರಿ
ಶುಭಮನ್‌ ಗಿಲ್‌ ಅವರ ಚೊಚ್ಚಲ ಏಕದಿನ ಶತಕ ಭಾರತ ಸರದಿಯ ಆಕರ್ಷಣೆ ಆಗಿತ್ತು. ಇಲ್ಲಿಯೂ ಅವರು ವನ್‌ಡೌನ್‌ನಲ್ಲಿ ಬಂದು ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ಮುಂದುವರಿಸಿದರು. ವೆಸ್ಟ್‌ ಇಂಡೀಸ್‌ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ ಕೈತಪ್ಪಿದ ಸೆಂಚುರಿಯನ್ನು ಇಲ್ಲಿ ಒಲಿಸಿಕೊಂಡರು. 97 ಎಸೆತ ನಿಭಾಯಿಸಿದ ಗಿಲ್‌ 15 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 130 ರನ್‌ ಬಾರಿಸಿದರು.

ಶುಭಮನ್‌ ಗಿಲ್‌ ಹೊರತು ಪಡಿಸಿದರೆ ಭಾರತದ ಸರದಿಯಲ್ಲಿ ಮಿಂಚಿದ ಮತ್ತೋರ್ವ ಆಟಗಾರ ಇಶಾನ್‌ ಕಿಶನ್‌. ಇವರಿಂದ 2ನೇ ಅರ್ಧ ಶತಕ ದಾಖಲಾಯಿತು. 61 ಎಸೆತ ಎದುರಿಸಿ ಭರ್ತಿ 50 ರನ್‌ ಹೊಡೆದು ರನೌಟಾಗಿ ನಿರ್ಗಮಿಸಿದರು (6 ಬೌಂಡರಿ). ಗಿಲ್‌ ಅವರ ಲೆಗ್‌ ಬಿಫೋರ್‌ ಮನವಿಗಾಗಿ ಮೇಲ್ಮನವಿ ಸಲ್ಲಿಸಿದ ವೇಳೆ ಇಶಾನ್‌ ಕಿಶನ್‌ ರನೌಟ್‌ ಆದದ್ದು ಅಚ್ಚರಿಯಾಗಿ ಕಂಡಿತು. ಕಿಶನ್‌ ಅವರು ಓಟಕ್ಕೆ ಮುಂದಾದರೂ ಗಿಲ್‌ ನಿರಾಕರಿಸಿದರು. ಆಗ ಮುನ್ಯೊಂಗ ಸೊಗಸಾದ ತ್ರೋ ಮೂಲಕ ಇಶಾನ್‌ ಕಿಶನ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು; ಗಿಲ್‌ ಬಚಾವಾದರು!

Advertisement

ನಿಧಾನ ಗತಿಯ ಆರಂಭ
ಇಲ್ಲಿಯೂ ಶಿಖರ್‌ ಧವನ್‌-ಕೆ.ಎಲ್‌. ರಾಹುಲ್‌ ಜೋಡಿ ಭಾರತದ ಇನ್ನಿಂಗ್ಸ್‌ ಆರಂಭಿಸಿತು. ಮೊದಲ ವಿಕೆಟಿಗೆ 63 ರನ್‌ ಪೇರಿಸಿದರೂ ಇದರಲ್ಲಿ ಆರಂಭಿಕ ಅಬ್ಬರವಿರಲಿಲ್ಲ. 63 ರನ್ನಿಗಾಗಿ ಭರ್ತಿ 15 ಓವರ್‌ ತೆಗೆದುಕೊಂಡರು.
ಫಾರ್ಮ್ಗೆ ಮರಳುವ ಲಕ್ಷಣ ತೋರಿದ ರಾಹುಲ್‌ 46 ಎಸೆತಗಳಿಂದ 30 ರನ್‌ ಮಾಡಿದರೆ (1 ಬೌಂಡರಿ, 1 ಸಿಕ್ಸರ್‌), ಧವನ್‌ 68 ಎಸೆತ ನಿಭಾಯಿಸಿ 40 ರನ್‌ ಬಾರಿಸಿದರು (5 ಬೌಂಡರಿ).

ಈ ನಾಲ್ವರನ್ನು ಹೊರತುಪಡಿಸಿದರೆ ಭಾರತದ ಬ್ಯಾಟಿಂಗ್‌ ಸರದಿ ವೈಫ‌ಲ್ಯ ಅನುಭವಿಸಿತೆಂದೇ ಹೇಳಬಹುದು. ದೀಪಕ್‌ ಹೂಡಾ (1), ಸಂಜು ಸ್ಯಾಮ್ಸನ್‌ (15) ಸಿಡಿದು ನಿಲ್ಲಲು ವಿಫ‌ಲರಾದರು. ಅಕ್ಷರ್‌ ಪಟೇಲ್‌ (1), ಶಾರ್ದೂಲ್ ಠಾಕೂರ್ (9) ಕೂಡ ಯಶಸ್ಸು ಕಾಣಲಿಲ್ಲ.

ಇವಾನ್ಸ್‌, ಸಿಕಂದರ್‌ ಸಾಹಸ
ಜಿಂಬಾಬ್ವೆಯ ಬೌಲಿಂಗ್‌ ಸರದಿ ಯಲ್ಲಿ ಮಿಂಚಿದವರು ಬಲಗೈ ವೇಗಿ ಬ್ರಾಡ್‌ ಇವಾನ್ಸ್‌. ಅವರು ಅಗ್ರ ಕ್ರಮಾಂಕದ 4 ವಿಕೆಟ್‌ ಸೇರಿದಂತೆ 54 ರನ್ನಿಗೆ 5 ವಿಕೆಟ್‌ ಕೆಡವಿದರು. ಇವಾನ್ಸ್‌ ಏಕದಿನ ಪಂದ್ಯದಲ್ಲಿ 5 ವಿಕೆಟ್‌ ಉರುಳಿಸಿದ ಮೊದಲ ನಿದರ್ಶನ ಇದಾಗಿದೆ.

ಚೇಸಿಂಗ್‌ ವೇಳೆ ಮಧ್ಯಮ ಕ್ರಮಾಂಕದ ಸಿಕಂದರ್‌ ರಝಾ ಭಾರತದ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟುತ್ತ ಹೋದರು. 95 ಎಸೆತಗಳಲ್ಲಿ 115 ರನ್‌ ಸಿಡಿಸಿದರು (9 ಬೌಂಡರಿ, 3 ಸಿಕ್ಸರ್‌). ಇದು 6 ಪಂದ್ಯಗಳಲ್ಲಿ ರಝಾ ಹೊಡೆದ 3ನೇ ಶತಕ.

ಸಂಕ್ಷಿಪ್ತ ಸ್ಕೋರ್‌
ಭಾರತ-8 ವಿಕೆಟಿಗೆ 289 (ಗಿಲ್‌ 130, ಇಶಾನ್‌ ಕಿಶನ್‌ 50, ಧವನ್‌ 40, ರಾಹುಲ್‌ 30, ಸ್ಯಾಮ್ಸನ್‌ 15, ಬ್ರಾಡ್‌ ಇವಾನ್ಸ್‌ 54ಕ್ಕೆ 5).

ಜಿಂಬಾಬ್ವೆ-49.3 ಓವರ್‌ಗಳಲ್ಲಿ 276 (ರಝಾ 115, ವಿಲಿಯಮ್ಸ್‌ 115, ಇವಾನ್ಸ್‌ 28, ಆವೇಶ್‌ 66ಕ್ಕೆ 3, ಅಕ್ಷರ್‌ 30ಕ್ಕೆ 2, ಕುಲದೀಪ್‌ 38ಕ್ಕೆ 2, ಚಹರ್‌ 75ಕ್ಕೆ 2). ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌.

ಸಚಿನ್‌ ದಾಖಲೆ ಮುರಿದ ಗಿಲ್‌
ತನ್ನ ಪ್ರಥಮ ಏಕದಿನ ಶತಕವನ್ನು 130ರ ತನಕ ವಿಸ್ತರಿಸುವ ಮೂಲಕ ಶುಭಮನ್‌ ಗಿಲ್‌ 24 ವರ್ಷಗಳ ಹಿಂದಿನ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಮುರಿದರು. ಇದು ಜಿಂಬಾಬ್ವೆ ನೆಲದಲ್ಲಿ ಭಾರತದ ಬ್ಯಾಟರ್‌ನ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ. 1998ರ ಬುಲವಾಯೊ ಪಂದ್ಯದಲ್ಲಿ ತೆಂಡುಲ್ಕರ್‌ ಅಜೇಯ 127 ರನ್‌ ಹೊಡೆದದ್ದು ಈವರೆಗಿನ ಅತೀ ಹೆಚ್ಚಿನ ಮೊತ್ತವಾಗಿತ್ತು.

ಜಿಂಬಾಬ್ವೆ ನೆಲದಲ್ಲಿ ಸೆಂಚುರಿ ಬಾರಿಸಿದ ಭಾರತದ ಇತರ ಆಟಗಾರರೆಂದರೆ ಅಂಬಾಟಿ ರಾಯುಡು (ಅಜೇಯ 124), ಯುವರಾಜ್‌ ಸಿಂಗ್‌ (120), ಶಿಖರ್‌ ಧವನ್‌ (116) ಮತ್ತು ವಿರಾಟ್‌ ಕೊಹ್ಲಿ (115). ಇದರಲ್ಲಿ ತೆಂಡುಲ್ಕರ್‌ ಅವರ ಶತಕವೊಂದನ್ನು ಹೊರತುಪಡಿಸಿ ಉಳಿದವರೆಲ್ಲರ ಸೆಂಚುರಿ ಹರಾರೆಯಲ್ಲಿ ದಾಖಲಾಗಿದೆ.

6 ಪಂದ್ಯ, 450 ರನ್‌
ಅಮೋಘ ಫಾರ್ಮ್ ನಲ್ಲಿರುವ ಶುಭಮನ್‌ ಗಿಲ್‌ ಈ ವರ್ಷದ 6 ಏಕದಿನ ಪಂದ್ಯಗಳಿಂದ 450 ರನ್‌ ಬಾರಿಸಿದರು. ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸದ ಅಂತಿಮ ಏಕದಿನ ಪಂದ್ಯದಲ್ಲೇ ಗಿಲ್‌ ಚೊಚ್ಚಲ ಶತಕ ದಾಖಲಿಸಬೇಕಿತ್ತು. ಆದರೆ 98 ರನ್‌ ಮಾಡಿ ಅಜೇಯರಾಗಿ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next