Advertisement

ಇಂದಿನಿಂದ ಭಾರತ-ಲಂಕಾ ಎ ತಂಡಗಳ ಟೆಸ್ಟ್‌

01:23 PM May 31, 2019 | Suhan S |

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣ ಮತ್ತೂಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಸನ್ನದ್ಧವಾಗಿದೆ. ಮೇ 31ರಿಂದ ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳ ನಡುವೆ ಟೆಸ್ಟ್‌ ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಆರಂಭಗೊಳ್ಳಲಿದ್ದು, ಜೂ. 3ರ ವರೆಗೆ ನಡೆಯಲಿದೆ.

Advertisement

ಉಭಯ ತಂಡಗಳು 2 ಟೆಸ್ಟ್‌ ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿವೆ. ಈಗಾಗಲೇ ಟೆಸ್ಟ್‌ ಸರಣಿ ಆರಂಭಗೊಂಡಿದ್ದು, ಬೆಳಗಾವಿಯಲ್ಲಿ ಮೊದಲ ಟೆಸ್ಟ್‌ ಪೂರ್ಣಗೊಂಡಿದೆ. ಮೊದಲ ಟೆಸ್ಟ್‌ನಲ್ಲಿ ಅಭಿಮನ್ಯು ಈಶ್ವರನ್‌ ದ್ವಿಶತಕ ಹಾಗೂ ಅನ್ಮೋಲ್ ಪ್ರೀತ್‌ ಸಿಂಗ್‌ ಭರ್ಜರಿ ಶತಕದ ನೆರವಿನಿಂದ ಇನಿಂಗ್ಸ್‌ ಹಾಗೂ 205 ರನ್‌ಗಳ ಅಂತರದಿಂದ ಟೀಮ್‌ ಇಂಡಿಯಾ ಜಯ ಸಾಧಿಸಿದೆ. ಎರಡೂ ಇನಿಂಗ್ಸ್‌ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ದ್ವಿತೀಯ ಟೆಸ್ಟ್‌ನಲ್ಲಿ ಗೆಲುವಿನ ಲಯ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಟೆಸ್ಟ್‌ ಸರಣಿಯ 2ನೇ ಹಾಗೂ ಕೊನೆಯ ಟೆಸ್ಟ್‌ ಅನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಲು ಶ್ರೀಲಂಕಾ ಪುಟಿದೇಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಟೆಸ್ಟ್‌ ಸರಣಿ ಬಳಿಕ ನಡೆಯುವ ಏಕದಿನ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಬೆಳಗಾವಿಯಲ್ಲಿ ನಡೆಯಲಿದ್ದು, ಕೊನೆಯ 2 ಪಂದ್ಯಗಳು ಜೂ. 13 ಹಾಗೂ 15ರಂದು ಹುಬ್ಬಳ್ಳಿಯಲ್ಲಿ ಜರುಗಲಿವೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ‘ಎ’ ತಂಡದಲ್ಲಿ ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರಿಕೆಟಿಗ. ಐಪಿಎಲ್ನಲ್ಲಿ ಆಡಿರುವ ಶ್ರೇಯಸ್‌ 56 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.

5 ವರ್ಷಗಳ ಹಿಂದೆ 2013ರಲ್ಲಿ ಭಾರತ ‘ಎ’ ಹಾಗೂ ವೆಸ್ಟ್‌ ಇಂಡೀಸ್‌ ‘ಎ’ ತಂಡಗಳ ಮಧ್ಯೆ ಇದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಅಲ್ಲದೇ ಭಾರತ ಹಾಗೂ ಬಾಂಗ್ಲಾದೇಶ ಮಹಿಳಾ ತಂಡದ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಈಗ ಮತ್ತೂಂದು ಸರಣಿಗೆ ಕೆಎಸ್‌ಸಿಎ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ.

Advertisement

ಕ್ರೀಡಾಂಗಣದಲ್ಲಿ ಪೆವಿಲಿಯನ್‌ ನಿರ್ಮಾಣ ಕಾರ್ಯ ಶೇ.70 ಪೂರ್ಣಗೊಂಡಿದೆ. ರಾಜ್ಯದಲ್ಲಿಯೇ ಅತಿದೊಡ್ಡದೆನಿಸಿದ 4000 ಚದುರಡಿಯ ಡ್ರೆಸಿಂಗ್‌ ರೂಮ್‌ ಇಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮ್ಯಾಚ್ ರೆಫ್ರಿ, ಅಂಪೈರ್‌ಗಳು, ಅಧಿಕಾರಿಗಳ ಕೊಠಡಿಗಳ ನಿರ್ಮಾಣ ಪೂರ್ಣಗೊಂಡಿದೆ.

ಪಂದ್ಯದ ಮುನ್ನಾದಿನ ಗುರುವಾರ ಉಭಯ ತಂಡಗಳ ಆಟಗಾರರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ಬೆಳಗಿನ ಅವಧಿಯಲ್ಲಿ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಭಾರತ ತಂಡದ ಆಟಗಾರರು; ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಶ್ರೀಲಂಕಾ ತಂಡದ ಆಟಗಾರರು ಅಭ್ಯಾಸ ನಡೆಸಿದರು.

•ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next