Advertisement

ಲಂಕಾ ವಿರುದ್ಧ ಬೃಹತ್‌ ಜಯ: ಕೊಹ್ಲಿ,ಅಶ್ವಿ‌ನ್‌ ಹೊಸ ಮೈಲಿಗಲ್ಲು

03:54 PM Nov 27, 2017 | Team Udayavani |

ನಾಗ್ಪುರ : ಇಂದಿಲ್ಲಿ 4ನೇ ದಿನದ ಆಟದೊಳಗೇ ಕೊನೆಗೊಂಡ ಪ್ರವಾಸಿ ಲಂಕಾ ಎದುರಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಲಂಕೆಯನ್ನು ಒಂದು ಇನ್ನಿಂಗ್ಸ್‌ ಹಾಗೂ 239 ರನ್‌ಗಳ ಭಾರೀ ದೊಡ್ಡ ಅಂತರದಿಂದ ಸೋಲಿಸುವಲ್ಲಿ ನಾಯಕ ವಿರಾಟ್‌ ಕೊಹ್ಲಿ ಮತ್ತು  ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಅವರು ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.

Advertisement

ಮೂರು ಪಂದ್ಯಗಳ ಈ ಹಾಲಿ ಟೆಸ್ಟ್‌ ಸರಣಿಯಲ್ಲಿ ಆತಿಥೇಯ ಭಾರತ ಈಗ 1-0 ಮುನ್ನಡೆಯನ್ನು ಸ್ಥಾಪಿಸಿದೆ. ಮಳೆಯಿಂದ ಬಾಧಿತವಾಗಿದ್ದ ಕೋಲ್ಕತ ಈಡನ್‌ ಗಾರ್ಡನ್‌ ಅಂಗಣದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯವನ್ನು ಮಳೆ ಹಾಗೂ ಬೆಳಕಿನ ಕೃಪೆಯಿಂದ ಅದೃಷ್ಟಶಾಲಿ ಲಂಕಾ ತಂಡ ಡ್ರಾ ಮಾಡಿಕೊಂಡಿತ್ತು.

ಹತ್ತು ವರ್ಷಗಳ ಹಿಂದೆ ಬಾಂಗ್ಲಾದೇಶವನ್ನು ಮೀರ್‌ಪುರ್‌ನಲ್ಲಿ  ಇಷ್ಟೇ ದೊಡ್ಡ ಅಂತರದಿಂದ ಸೋಲಿಸಿದ್ದ ಭಾರತ, ಅನಂತದಲ್ಲಿ ಸಾಧಿಸಿರುವ ಅತೀ ದೊಡ್ಡ ವಿಜಯ ಇಂದಿನದ್ದಾಗಿದೆ. 

ರವಿಚಂದ್ರನ್‌ ಅಶ್ವಿ‌ನ್‌ ಅವರು ಲಂಕೆಯನ್ನು ಮಣಿಸುವಲ್ಲಿ 63 ರನ್‌ ವೆಚ್ಚಕ್ಕೆ 4 ವಿಕೆಟ್‌ ಕೀಳುವ ಮೂಲಕ ತಾವು ಆಡಿರುವ 54 ಪಂದ್ಯಗಳಲ್ಲಿ ಅತ್ಯಂತ ವೇಗದಲ್ಲಿ 300 ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಅವರು ಅಸ್ಟ್ರೇಲಿಯದ ಡೆನ್ನಿಸ್‌ ಲಿಲೀ ಅವರು 56 ಪಂದ್ಯಗಳಲ್ಲಿ 300 ವಿಕೆಟ್‌ ಕೀಳುವ ಮೂಲಕ ಮಾಡಿದ್ದ ದಾಖಲೆಯನ್ನು ಅಶ್ವಿ‌ನ್‌ ಮುರಿದರು.

ಈ ಟೆಸ್ಟ್‌ ಪಂದ್ಯದಲ್ಲಿ 5ನೇ ಡಬಲ್‌ ಸೆಂಚುರಿ ಹೊಡೆದು ತಮ್ಮ ಬ್ಯಾಟಿಂಗ್‌ ಪ್ರಾಬಲ್ಯ ಮೆರೆದು ಹೊಸ ಮೈಲುಗಲ್ಲನ್ನು ಸ್ಥಾಪಿಸಿದ ವಿರಾಟ್‌ ಕೊಹ್ಲಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್‌ ದಿಗ್ಗಜ ಕೆವಿನ್‌ ಪೀಟರ್‌ಸನ್‌ ಅಭಿನಂದಿಸಿದರು.

Advertisement

ಅಶ್ವಿ‌ನ್‌ ಅವರಿಂದು ಲಂಕೆಯ ಲಾಹಿರು ಗಮೇಜ್‌ ಅವರನ್ನು ಅನೂಹ್ಯ ದೂಸ್‌ರಾ ಹಾಕಿ ಔಟ್‌ ಮಾಡುವ ಮೂಲಕ ಲಂಕೆಯ ಇನ್ನಿಂಗ್ಸ್‌ಗೆ ತೆರೆ ಎಳೆದರು. ಈ ಮೂಲಕ ಅವರು ಕೇವಲ 130 ರನ್‌ ವೆಚ್ಚಕ್ಕೆ ಎಂಟು ವಿಕೆಟ್‌ ಕೀಳುವ ಸಾಧನೆಯನ್ನು ಈ ಟೆಸ್ಟ್‌ ಪಂದ್ಯದಲ್ಲಿ ಮಾಡಿದರು. 

ಲಂಕೆಯ ನಾಯಕ ದಿನೇಶ್‌ ಚಂಡಿಮಾಲ್‌ ಅವರೋರ್ವರೇ ಭಾರತದ ಮಾರಕ ಬೌಲಿಂಗ್‌ ದಾಳಿಯನ್ನು ತಾಳಿಕೊಂಡು ತಮ್ಮ ತಂಡಕ್ಕೆ  61 ರನ್‌ಗಳ ಗರಿಷ್ಠ ಕೊಡುಗೆಯನ್ನು ನೀಡಿದರು.

ಇಂದು ಲಂಕೆಯ ಬೆನ್ನೆಲುಬು ಮುರಿಯುವಲ್ಲಿ ಇಶಾಂತ್‌ ಶರ್ಮಾ (43/2) ಮತ್ತು ರವೀಂದ್ರ ಜಡೇಜ (2/28) ಗಮನಾರ್ಹ ಪಾತ್ರ ವಹಿಸಿದರು. ಮುರಳಿ ವಿಜಯ್‌ ಅವರ ಚುರುಕಿನ ಫೀಲ್ಡಿಂಗ್‌ ಲಂಕೆಗೆ ಮಾರಕವೆನಿಸಿತು. 

ಉಮೇಶ್‌ ಯಾದವ್‌ (2/30) ಅವರಿಗೆ ಇಂದು ತಮ್ಮ 100ನೇ ಟೆಸ್ಟ್‌ ವಿಕೆಟ್‌ ಗಳಿಸುವ ಅವಕಾಶ ಸ್ವಲ್ಪದರಲ್ಲೇ ಕಳೆದು ಹೋಯಿತು. ಅಶ್ವಿ‌ನ್‌ ಮತ್ತು ಇತರರು ಲಂಕೆಯ ವಿಕೆಟ್‌ಗಳನ್ನು ಹಂಚಿಕೊಂಡದ್ದು ಉಮೇಶ್‌ ಯಾದವ್‌ ಸಾಧನೆಗೆ ಅಡ್ಡಿಯಾಯಿತು.

2ನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ :
ಭಾರತ : ಮೊದಲ ಇನ್ನಿ,ಗ್ಸ್‌ 610/6 ಡಿಕ್ಲೇರ್‌ (176.1 ಓವರ್‌); ಲಂಕಾ : ಮೊದಲ ಇನ್ನಿಂಗ್ಸ್‌ : 205 (79.1), 2ನೇ ಇನ್ನಿಂಗ್ಸ್‌ 166 (49.3)

Advertisement

Udayavani is now on Telegram. Click here to join our channel and stay updated with the latest news.

Next