Advertisement
ಗುವಾಹಾಟಿಯಲ್ಲಿ ಪಂದ್ಯ ಆಯೋಜಿಸಲು ಸಾಧ್ಯವೇ ಎಂಬ ಬಗ್ಗೆ ಈಗಿಂದಲೇ ಬಿಸಿಸಿಐ ಮತ್ತು ಅಸ್ಸಾಮ್ ಕ್ರಿಕೆಟ್ ಮಂಡಳಿ (ಎಸಿಎ) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ ಎಂಬುದಾಗಿ ಎಸಿಎ ಉಪಾಧ್ಯಕ್ಷ ಪರೀಕ್ಷಿತ್ ದತ್ತ ಹೇಳಿದ್ದಾರೆ.“ಪಂದ್ಯ ನಡೆಯಲು ಇನ್ನೂ 3 ವಾರವಿದೆ. ಹೀಗಾಗಿ ನಾವು ಪರಿಸ್ಥಿತಿಯನ್ನು ಕಾದು ನೋಡುತ್ತೇವೆ. ಪಂದ್ಯ ನಡೆದೀತೆಂಬ ವಿಶ್ವಾಸ ನಮ್ಮದು’ ಎಂಬುದಾಗಿ ದತ್ತ ಹೇಳಿದರು.
ಪ್ರತಿಭಟನೆಯಿಂದಾಗಿ ಗುವಾಹಾಟಿಯಲ್ಲಿ ನಡೆಯ ಬೇಕಿದ್ದ ಅಸ್ಸಾಮ್-ಸರ್ವಿಸಸ್ ನಡುವಿನ ರಣಜಿ ಪಂದ್ಯದ ಅಂತಿಮ ದಿನದಾಟ ರದ್ದುಗೊಂಡಿತ್ತು. ಅಸ್ಸಾಮ್-ಒಡಿಶಾ ನಡುವಿನ ಅಂಡರ್-19 ಕೂಚ್ ಬೆಹಾರ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಡಿ. 17ರಿಂದ ಅಸ್ಸಾಮ್-ಜಾರ್ಖಂಡ್ ನಡುವೆ ರಣಜಿ ಪಂದ್ಯ ನಡೆಯುವುದು ಕೂಡ ಸಂಶಯವೆನಿಸಿದೆ. ಒಂದು ವೇಳೆ ಗುವಾಹಾಟಿಯಲ್ಲಿ ಆಟ ಸಾಧ್ಯವಿಲ್ಲವೆನಿಸಿದರೆ, ಕೂಡಲೇ ಪಂದ್ಯ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾರ್ಖಂಡ್ ನಾಯಕ ಸೌರಭ್ ತಿವಾರಿ, “ಸದ್ಯ ನಾವು ಅಗರ್ತಲಾದಲ್ಲಿ ಪೊಲೀಸ್ ಭದ್ರತೆಯಲ್ಲಿದ್ದೇವೆ. ಇಲ್ಲಿಂದ ಕೋಲ್ಕತಾಕ್ಕೆ ಪ್ರಯಾಣಿಸಿ, ಅಲ್ಲಿ ಒಂದು ದಿನ ಕಾಯುವಂತೆ ನಮಗೆ ಸೂಚಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾವು ಅಸ್ಸಾಮ್ ವಿರುದ್ಧ ಎಲ್ಲಿ ಆಡುತ್ತೇವೆ ಎಂದು ಗೊತ್ತಿಲ್ಲ. ಅಲ್ಲದೇ ಅಂತರ್ಜಾಲ ಸಂಪರ್ಕ ರದ್ದಾಗಿರುವುದರಿಂದ ನಮಗೆ ಪರಿಸ್ಥಿತಿಯ ಅಂದಾಜು ಸಿಗುತ್ತಿಲ್ಲ’ ಎಂದಿದ್ದಾರೆ.