Advertisement
ಮುಂದಿನ ನಿಲ್ದಾಣ ಕೇಪ್‌ಟೌನ್. ಇಲ್ಲಿ 5 ಟೆಸ್ಟ್ ಆಡಿರುವ ಭಾರತ ಒಂದರಲ್ಲೂ ಗೆದ್ದಿಲ್ಲ. ಈ ಬಾರಿ ಗೆಲುವಿನ ಖಾತೆ ತೆರೆದೀತೇ? ಹರಿಣಗಳ ನಾಡಿನಲ್ಲಿ ಭಾರತ ಇತಿಹಾಸ ನಿರ್ಮಿಸೀತೇ? ಕುತೂಹಲ ಸಹಜ. ಒಂದು ವೇಳೆ ಪಂದ್ಯ ಡ್ರಾ ಆದರೆ ಎರಡನೇ ಸಲ ಸರಣಿ ಸಮಬಲದೊಂದಿಗೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಿಂದ ವಾಪಸಾಗಲಿದೆ.
1997ರಲ್ಲಿ ಸಚಿನ್ ತೆಂಡುಲ್ಕರ್ ನಾಯಕತ್ವದಲ್ಲಿ ಭಾರತ 2ನೇ ಸಲ ಕೇಪ್‌ಟೌನ್ ಮೈದಾನದಲ್ಲಿ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಸಚಿನ್ (169) ಮತ್ತು ಮೊಹಮ್ಮದ್ ಅಜರುದ್ದೀನ್ (115) ಅವರ ಶತಕದ ಹೊರತಾಗಿಯೂ ಭಾರತ 282 ರನ್‌ಗಳ ಭಾರೀ ಸೋಲನುಭವಿಸಿತ್ತು. ಪ್ರಸ್ತುತ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ನಾಯಕನಾಗಿ ಇದೇ ಮೈದಾನದಲ್ಲಿ ಸೋತಿದ್ದರು. 2007ರ ಪಂದ್ಯದಲ್ಲಿ 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿತು. ಭಾರತ ಪರ ವಾಸಿಮ್ ಜಾಫರ್ ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್ ಸಿಡಿಸಿದ್ದರು.
Related Articles
2011ರ ಸರಣಿ ವೇಳೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತವಿಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ 146 ರನ್ ಬಾರಿಸಿದ್ದರು. ಗೌತಮ್ ಗಂಭೀರ್ ಕ್ರಮವಾಗಿ 93 ಮತ್ತು 64 ರನ್ ಬಾರಿಸುವ ಮೂಲಕ ಭಾರತವನ್ನು ಸೋಲಿನಿಂದ ಪಾರು ಮಾಡಿದರು.
Advertisement
ಎಡವಿದ ಕೊಹ್ಲಿ ಬಳಗ2018ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 72 ರನ್‌ಗಳಿಂದ ಸೋಲು ಕಂಡಿತ್ತು. ಭಾರತ ಕ್ರಮವಾಗಿ 209 ಮತ್ತು 135ಕ್ಕೆ ಆಲೌಟ್ ಆಗಿತ್ತು. ಹಾರ್ದಿಕ್ ಪಾಂಡ್ಯ ಮೊದಲ ಇನ್ನಿಂಗ್ಸ್‌ನಲ್ಲಿ 93 ರನ್ ಬಾರಿಸಿದ್ದರು. ಗೆಲುವು ಕಾಣದ ಭಾರತ
ಭಾರತ ಇದುವರೆಗೆ ಕೇಪ್‌ಟೌನ್‌ನ “ನ್ಯೂಲ್ಯಾಂಡ್ಸ್ ಸ್ಟೇಡಿಯಂ’ನಲ್ಲಿ 5 ಟೆಸ್ಟ್ ಆಡಿದೆ. ಒಮ್ಮೆಯೂ ಗೆದ್ದಿಲ್ಲ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಉಳಿದ ಮೂರರಲ್ಲಿ ಹೀನಾಯ ಸೋಲು ಕಂಡಿದೆ. ಕಳೆದ ಬಾರಿ (2018) ಇಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ 72 ರನ್‌ಗಳಿಂದ ಎಡವಿತ್ತು. ಭಾರತ ಮೊದಲ ಬಾರಿಗೆ ಕೇಪ್‌ಟೌನ್‌ನಲ್ಲಿ ಆಡಿದ್ದು 1993ರಲ್ಲಿ. ಜಾವಗಲ್ ಶ್ರೀನಾಥ್ ಅವರ ಮಾರಕ ಬೌಲಿಂಗ್ ಮತ್ತು ಸಚಿನ್ ತೆಂಡುಲ್ಕರ್ ಅವರ ಅರ್ಧ ಶತಕದಿಂದಾಗಿ ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಇದನ್ನೂ ಓದಿ:ಪ್ರೊ ಕಬಡ್ಡಿ: ನವೀನ್ ದಾಳಿಗೆ ಬೆಚ್ಚಿಬಿದ್ದ ಯೋಧಾ ಟೀಮ್ ಇಂಡಿಯಾಕ್ಕೆ ಸಂಗೀತಮಯ ಸ್ವಾಗತ
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆಡಲು ಶನಿವಾರ ಕೇಪ್‌ಟೌನ್‌ಗೆ ಆಗಮಿಸಿದ ಟೀಮ್ ಇಂಡಿಯಾಕ್ಕೆ ಸಂಗೀತಮಯ ಸ್ವಾಗತ ನೀಡಲಾಯಿತು. ಕೊಹ್ಲಿ ಪಡೆ ಜೊಹಾನ್ಸ್‌ಬರ್ಗ್‌ನಿಂದ ಚಾರ್ಟರ್ಡ್ ವಿಮಾನದಲ್ಲಿ ಕೇಪ್‌ಟೌನ್‌ಗೆ ಬಂದಿಳಿಯಿತು. ತಂಡದ ಹೊಟೇಲಿಗೆ ಆಗಮಿಸಿದಾಗ ಕೇಪ್‌ಟೌನ್‌ನ ಸಾಂಪ್ರದಾಯಿಕ ವಾದ್ಯ ಸಂಗೀತದೊಂದಿಗೆ ಸ್ವಾಗತ ಕೋರಲಾಯಿತು. ಇದೇ ವೇಳೆ ದಕ್ಷಿಣ ಆಫ್ರಿಕಾ ತಂಡ ಕೂಡ ಕೇಪ್‌ಟೌನ್‌ಗೆ ಆಗಮಿಸಿದೆ. ಭಾರತ ತಂಡ ರವಿವಾರ ಮೊದಲ ಸುತ್ತಿನ ಅಭ್ಯಾಸ ಆರಂಭಿಸಲಿದೆ. ಸರಣಿ ನಿರ್ಣಾಯಕ ಟೆಸ್ಟ್ ಮಂಗಳವಾರ ಇಲ್ಲಿನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಕೊಹ್ಲಿ ಓಕೆ, ಸಿರಾಜ್ ಅನುಮಾನ
ಕೇಪ್‌ಟೌನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಮರಳುವ ಎಲ್ಲ ಸಾಧ್ಯತೆ ಇದೆ ಎಂಬುದಾಗಿ ದ್ರಾವಿಡ್ ಅಭಿಪ್ರಾಯಪಟ್ಟರು. ಆದರೆ ಜೊಹಾನ್ಸ್ ಬರ್ಗ್ ಟೆಸ್ಟ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಮೊಹಮ್ಮದ್ ಸಿರಾಜ್ ಆಡುವ ಸಾಧ್ಯತೆ ಇಲ್ಲ ಎಂದರು. “ಕೊಹ್ಲಿ ಫಿಟ್ ಆಗಿದ್ದಾರೆ. ಓಡಲು ಸಾಧ್ಯವಾಗುತ್ತಿದೆ. ಒಂದೆರಡು ನೆಟ್ ಪ್ರ್ಯಾಕ್ಟೀಸ್ ನಡೆಸಿದರೆ ಸರಿಹೋಗುತ್ತಾರೆ. ಇನ್ನೂ 2 ದಿನ ಇದೆ. ಕೊಹ್ಲಿ ಜತೆ ಮಾತಾಡಿದ್ದೇನೆ. ಆದರೆ ಸಿರಾಜ್ ಅಂತಿಮ ಟೆಸ್ಟ್ ಆಡುವ ಸಾಧ್ಯತೆ ಇಲ್ಲ…’ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ದ್ರಾವಿಡ್ ಹೇಳಿದರು. ವಿಹಾರಿ, ಅಯ್ಯರ್ ತುಸು ಕಾಯಬೇಕು: ಕೋಚ್ ರಾಹುಲ್ ದ್ರಾವಿಡ್
ತಂಡದಲ್ಲಿ ಸೀನಿಯರ್ ಆಟಗಾರರು ಇರುವುದರಿಂದ ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಅವರು ಖಾಯಂ ಸ್ಥಾನ ಪಡೆಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುತ್ತದೆ ಎಂಬ ರೀತಿಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಹೇಳಿಕೆ ನೀಡಿದ್ದಾರೆ. “ವಿಹಾರಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಮೊದಲ ಸರದಿಯಲ್ಲಿ ಅತ್ಯುತ್ತಮ ಕ್ಯಾಚ್ ಒಂದರಿಂದ ಅವರ ವಿಕೆಟ್ ಉರುಳಿತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಅವರ ಆಟ ಉತ್ತಮ ಮಟ್ಟದಲ್ಲಿತ್ತು. ಅಂದಮಾತ್ರಕ್ಕೆ ನಾಳೆ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದೊಡನೆ ರಹಾನೆ, ಪೂಜಾರ ಅವರನ್ನು ಮೀರಿಸಿ ವಿಹಾರಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದರ್ಥವಲ್ಲ. ತಂಡದಲ್ಲಿ ಸೀನಿಯರ್ ಇರುವಾಗ ತುಸು ಕಾಯಬೇಕಾಗುತ್ತದೆ. ಶ್ರೇಯಸ್ ಅಯ್ಯರ್‌ಗೂ ಈ ಮಾತು ಅನ್ವಯಿಸುತ್ತದೆ’ ಎಂದು ರಾಹುಲ್ ದ್ರಾವಿಡ್ ಹೇಳಿದರು. “ಟೀಮ್ ಇಂಡಿಯಾದ ಈಗಿನ ಸೀನಿಯರ್ ಆಟಗಾರರೂ ಹಿಂದೆ ಇದೇ ಸ್ಥಿತಿ ಎದುರಿಸಿದ್ದರು. ಅವರೂ ಸಾಕಷ್ಟು ಕಾದ ಬಳಿಕವೇ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದರು. ಕ್ರೀಡಾಲೋಕದ ನಿಯಮವೇ ಹಾಗೆ, ಇಲ್ಲಿ ಕಾಯುವುದು ಅನಿವಾರ್ಯ’ ಎಂಬುದಾಗಿ ದ್ರಾವಿಡ್ ಹೇಳಿದರು.