Advertisement

ಇಂದು ತೃತೀಯ ಏಕದಿನ; ಆರಂಭಿಕರ ಫಾರ್ಮ್ ಚಿಂತೆ; ಸರಣಿ ಗೆಲುವಿಗೆ ಭಾರತ ಪ್ರಯತ್ನ

11:12 PM Oct 10, 2022 | Team Udayavani |

ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆಯುವ ಮೂರನೇ ಮತ್ತು ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾಸದಲ್ಲಿರುವ ದ್ವಿತೀಯ ದರ್ಜೆಯ ಭಾರತ ತಂಡವು ಈ ಮೂಲಕ ಸರಣಿ ಗೆಲ್ಲು ಪ್ರಯತ್ನಿಸಲಿದೆ. ಆದರೆ ತಂಡಕ್ಕೆ ಆರಂಭಿಕ ಆಟಗಾರರ ಕಳಪೆ ಫಾರ್ಮ್ ಚಿಂತೆಯ ವಿಷಯವಾಗಿದೆ.

Advertisement

ಸರಣಿಯ ಆರಂಭಿಕ ಪಂದ್ಯವನ್ನು ಸ್ವಲ್ಪದರಲ್ಲಿ ಕಳೆದುಕೊಂಡಿದ್ದ ಶಿಖರ್‌ ಧವನ್‌ ನೇತೃತ್ವದ ಭಾರತ ತಂಡವು ರವಿವಾರ ನಡೆದ ದ್ವಿತೀಯ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿ ಅಧಿಕಾರಯುತ ವಾಗಿ ಜಯಿಸಿತ್ತು. ಈ ಮೂಲಕ ಸರಣಿಯನ್ನು ಸಮಬಲಗೊಳಿಸಲು ಯಶಸ್ವಿಯಾಗಿತ್ತು.

ಇಶಾನ್‌ ಕಿಶನ್‌ ಮತ್ತು ಶೇಯಸ್‌ ಅಯ್ಯರ್‌ ಅವರ ಅಮೋಘ ಆಟದಿಂದಾಗಿ ಭಾರತ ಸುಲಭವಾಗಿ ಜಯ ಕಾಣುವಂತಾಯಿತು. ಆದರೆ ಭಾರತಕ್ಕೆ ಚಿಂತೆಯಾಗಿರುವುದು ಆರಂಭಿಕರ ವೈಫ‌ಲ್ಯ. ನಾಯಕ ಶಿಖರ್‌ ಧವನ್‌ ಮತ್ತು ಯುವ ಆಟಗಾರ ಶುಭ್‌ಮನ್‌ ಗಿಲ್‌ ಈ ಸರಣಿಯ ಎರಡು ಪಂದ್ಯಗಳಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಧವನ್‌ ಅವರೀಗ ಏಕದಿನಕ್ಕೆ ಸೀಮಿತಗೊಂಡಿದ್ದಾರೆ. ಆದರೆ ಅವರು ಈ ಸರಣಿಯ ಎರಡು ಪಂದ್ಯಗಳಲ್ಲಿ ಕೇವಲ 17 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸರಣಿ ನಿರ್ಣಾಯಕ ಪಂದ್ಯದಲ್ಲಾದರೂ ಅವರಿಂದ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ನಿರೀಕ್ಷೆ ಮಾಡಲಾಗಿದೆ. ಗಿಲ್‌ ಕೂಡ ಉತ್ತಮ ಆರಂಭ ನೀಡಲು ಒದ್ದಾಡುತ್ತಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್‌, ಕಿಶನ್‌ ಮತ್ತು ಉಪನಾಯಕ ಸಂಜು ಸ್ಯಾಮ್ಸನ್‌ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಅಯ್ಯರ್‌ ಮತ್ತು ಸ್ಯಾಮ್ಸನ್‌ ಸ್ಥಿರ ನಿರ್ವಹಣೆ ನೀಡುತ್ತಿದ್ದರೆ ಕಿಶನ್‌ ದ್ವಿತೀಯ ಪಂದ್ಯದಲ್ಲಿ ಬಿರುಸಿನ ಆಟವಾಡಿದ್ದಾರೆ. ಸಿಕ್ಸರ್‌ಗಳ ಸುರಿಮಳೆಗೈದು ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

Advertisement

ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಸಿರಾಜ್‌ ಸದ್ಯ ಗಾಯಗೊಂಡಿರುವ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಬದಲಿಯಾಗಿ ಟಿ20 ವಿಶ್ವಕಪ್‌ ತಂಡದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ. ಸ್ಪಿನ್ನರ್‌ಗಳಾದ ಶಾಬಾಜ್‌ ಅಹ್ಮದ್‌ ಮತ್ತು ರವಿ ಬಿಷ್ಣೋಯಿ ನಿಖರ ದಾಳಿ ಸಂಘಟಿಸಿ ಗಮನ ಸೆಳೆದಿದ್ದಾರೆ.

ಬವುಮ ಮರಳುವ ನಿರೀಕ್ಷೆ
ಗಾಯದಿಂದಾಗಿ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದ ನಾಯಕ ಟೆಂಬ ಬವುಮ ನಿರ್ಣಾಯಕ ಪಂದ್ಯಕ್ಕೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಆದರೆ ಅವರು ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿಸುತ್ತಿರುವುದು ಚಿಂತೆಗೆ ಕಾರಣವಾಗಿದೆ. ತಂಡದ ಆರಂಭಿಕ ಕಾಕ್‌, ಐಡೆನ ಮಾರ್ಕ್‌ರಮ್‌ ಮತ್ತು ಡೇವಿಡ್‌ ಮಿಲ್ಲರ್‌ ಉತ್ತಮ ನಿರ್ವಹಣೆ ನೀಡುತ್ತಿರುವುದು ಸಮಾಧಾನ ತಂದಿದೆ.

ಮಳೆ ಸಾಧ್ಯತೆ
ಸರಣಿ ನಿರ್ಣಾಯಕ ಪಂದ್ಯಕ್ಕೆ ಮಳೆ ತೊಂದರೆ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಮೂರು ದಿನಗಳಿಂದ ದಿಲ್ಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳವಾರ ಕೂಡ ಬಿರುಗಾಳಿ ಸಹಿತ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.

ಉಭಯ ತಂಡಗಳು
ಭಾರತ
ಶಿಖರ್‌ ಧವನ್‌ (ನಾಯಕ), ಶುಭ್‌ಮನ್‌ ಗಿಲ್‌, ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ಶಾರ್ದೂಲ್ ಠಾಕೂರ್, ಕುಲದೀಪ್‌ ಯಾದವ್‌, ಆವೇಶ್‌ ಖಾನ್‌, ರವಿ ಬಿಷ್ಣೋಯಿ, ಸಿರಾಜ್‌, ವಾಷಿಂಗ್ಟನ್‌ ಸುಂದರ್‌, ಮುಕೇಶ್‌ ಕುಮಾರ್‌, ರಜತ್‌ ಪಾಟೀದಾರ್‌, ಶಾಬಾಜ್‌ ಅಹ್ಮದ್‌ ಮತ್ತು ರಾಹುಲ್‌ ತ್ರಿಪಾಠಿ.

ದಕ್ಷಿಣ ಆಫ್ರಿಕಾ
ಟೆಂಬ ಬವುಮ, ಜನ್ನೆಮಾನ್‌ ಮಾಲನ್‌, ಕ್ವಿಂಟನ್‌ ಡಿ ಕಾಕ್‌, ಐಡೆನ್‌ ಮಾರ್ಕ್‌ರಮ್‌, ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ವೇಯ್ನ ಪಾರ್ನೆಲ್‌, ಕೇಶವ ಮಹಾರಾಜ್‌, ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ, ತಬ್ರೈಜ್‌, ರೀಜಾ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸೆನ್‌, ಆ್ಯನ್ರಿಚ್‌ ನೋರ್ಜೆ ಮತ್ತು ಆ್ಯಂಡಿಲೆ ಪೆಹ್ಲುಕ್ವಾಯೊ.

Advertisement

Udayavani is now on Telegram. Click here to join our channel and stay updated with the latest news.

Next