Advertisement

ಇನ್ನೂರರ ಗಡಿಯಲ್ಲಿ ಆಟ ಮುಗಿಸಿದ ಭಾರತ; ವಾಂಡರರ್ನಲ್ಲೂ ವೇಗಿಗಳ ಮೇಲುಗೈ

08:20 AM Jan 04, 2022 | Team Udayavani |

ಜೊಹಾನ್ಸ್‌ಬರ್ಗ್: ವಾಂಡರರ್ ನಲ್ಲಿ ಆರಂಭಗೊಂಡ ನ್ಯೂ ಇಯರ್‌ ಟೆಸ್ಟ್‌ ಪಂದ್ಯದಲ್ಲೂ ವೇಗಿಗಳ ಅಬ್ಬರ ಮುಂದುವರಿದಿದೆ. ಭಾರತ 202 ರನ್ನುಗಳ ಸಾಮಾನ್ಯ ಮೊತ್ತಕ್ಕೆ ತನ್ನ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಜವಾಬಿತ್ತ ದಕ್ಷಿಣ ಆಫ್ರಿಕಾ ಒಂದು ವಿಕೆಟಿಗೆ 35 ರನ್‌ ಮಾಡಿದೆ.

Advertisement

ದ್ವಿತೀಯ ದಿನದಾಟದಲ್ಲಿ ಭಾರತದ ಬೌಲರ್ ತಿರುಗಿ ಬಿದ್ದು, ಆತಿಥೇಯರನ್ನೂ ಸಣ್ಣ ಮೊತ್ತಕ್ಕೆ ನಿಯಂತ್ರಿಸಬೇಕಾದ ಅಗತ್ಯವಿದೆ. ಆಗಷ್ಟೇ ಟೀಮ್‌ ಇಂಡಿಯಾಕ್ಕೆ ಮೇಲುಗೈ ಅವಕಾಶ ಒದಗಿ ಬರಲಿದೆ.
ಕೊಹ್ಲಿ ಗೈರಲ್ಲಿ ಕಣಕ್ಕಿಳಿದ ಭಾರತವನ್ನು ಮೊದಲ ಸಲ ಕೆ.ಎಲ್‌. ರಾಹುಲ್‌ ಮುನ್ನಡೆಸಿ ದರು. ಆದರೆ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ನಿರ್ಧಾರ ಅಷ್ಟೇನೂ ಯಶಸ್ಸು ಕಾಣಲಿಲ್ಲ. ದಕ್ಷಿಣ ಆಫ್ರಿಕಾ ವೇಗಿಗಳು ಘಾತಕವಾಗಿ ಎರಗಿದರು. ಭಾರತದ ಬ್ಯಾಟ್ಸ್‌ಮನ್‌ಗಳು ರನ್ನಿಗಾಗಿ ಪರದಾಡಿದರು. ನಿರಂತರವಾಗಿ ವಿಕೆಟ್‌ ಉರುಳುತ್ತ ಹೋದವು. ಇನ್ನೂರರ ಗಡಿ ದಾಟಿದ್ದಷ್ಟೇ ಸಮಾಧಾನಕರ ಸಂಗತಿ. ಆದರೆ ಇದೇನೂ ಜೊಹಾನ್ಸ್‌ಬರ್ಗ್‌ ನಲ್ಲಿ ಭಾರತದ ಕನಿಷ್ಠ ಮೊತ್ತವಲ್ಲ. 2017-18ರ ಪ್ರವಾಸದ ವೇಳೆ 187ಕ್ಕೆ ಆಲೌಟಾಗಿಯೂ ಭಾರತ ಟೆಸ್ಟ್‌ ಪಂದ್ಯವನ್ನು ಗೆದ್ದಿತ್ತು ಎಂಬುದನ್ನು ಮರೆಯುವಂತಿಲ್ಲ!

ಮಿಂಚಿದ ರಾಹುಲ್‌, ಅಶ್ವಿ‌ನ್‌
ಭಾರತದ ಸರದಿಯಲ್ಲಿ ಮಿಂಚಿದ ಇಬ್ಬರು ಆಟಗಾರರೆಂದರೆ ಕೆ.ಎಲ್‌. ರಾಹುಲ್‌ ಮತ್ತು ಆರ್‌. ಅಶ್ವಿ‌ನ್‌. ದಿಢೀರ್‌ ನಾಯಕತ್ವದ ಒತ್ತಡದ ನಡುವೆಯೂ ಗಟ್ಟಿಯಾಗಿ ನಿಂತ ರಾಹುಲ್‌ 133 ಎಸೆತಗಳನ್ನು ನಿಭಾಯಿಸಿ ಭರ್ತಿ 50 ರನ್‌ ಹೊಡೆದರು. ಸಿಡಿಸಿದ್ದು 9 ಬೌಂಡರಿ. ಇದು ಭಾರತದ ಸರದಿಯ ಏಕೈಕ ಅರ್ಧ ಶತಕವಾಗಿತ್ತು. ರಾಹುಲ್‌ 46ನೇ ಓವರ್‌ನಲ್ಲಿ 5ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಬಳಿಕ ತಂಡವನ್ನು ಆಧರಿಸಿ ನಿಂತ ಆರ್‌. ಅಶ್ವಿ‌ನ್‌ 50 ಎಸೆತ ಎದುರಿಸಿ ಬಹುಮೂಲ್ಯ 46 ರನ್‌ ಹೊಡೆದರು. ಇದರಲ್ಲಿ 6 ಬೌಂಡರಿ ಸೇರಿತ್ತು.

ಕೈಕೊಟ್ಟ ಪೂಜಾರ, ರಹಾನೆ
ಕೈ ಕೊಟ್ಟವರಲ್ಲಿ ಪ್ರಮುಖರೆಂದರೆ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ. ನಾಯಕ ವಿರಾಟ್‌ ಕೊಹ್ಲಿ ಗೈರಲ್ಲಿ ನಿಂತು ಆಡಬೇಕಿದ್ದ ಈ ಅನುಭವಿ ಆಟಗಾರರು ತೀರಾ ಬೇಜವಾಬ್ದಾರಿಯಿಂದ ಆಡಿ ತಮಗೆ ಲಭಿಸಿದ ಮತ್ತೂಂದು ಅವಕಾಶವನ್ನು ವ್ಯರ್ಥಗೊಳಿಸಿದರು. ಪೂಜಾರ 33 ಎಸೆತ ಎದುರಿಸಿದರೂ ಗಳಿಸಿದ್ದು ಮೂರೇ ರನ್‌. ರಹಾನೆ ಅವರದು “ಗೋಲ್ಡನ್‌ ಡಕ್‌’. ಇವರಿಬ್ಬರನ್ನು ಡ್ನೂನ್‌ ಒಲಿವರ್‌ ಸತತ ಎಸೆತಗಳಲ್ಲಿ ಕೆಡವಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು. ಜತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಬೇಟೆಯನ್ನೂ ಪೂರ್ತಿಗೊಳಿಸಿದರು.
ಇವರಂತೆ ಮತ್ತೂಂದು ಅವಕಾಶ ಪಡೆದ ಶಾರ್ದೂಲ್ ಠಾಕೂರ್ ಕೂಡ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು.

Advertisement

ಇದನ್ನೂ ಓದಿ:ಪ್ರೊ ಕಬಡ್ಡಿ 8ನೇ ಆವೃತ್ತಿ: ಬೆಂಗಾಲ್‌ಗೆ ಬೆದರಿದ ಪಿಂಕ್‌ ಪ್ಯಾಂಥರ್

ಅಗರ್ವಾಲ್‌ ಬಿರುಸಿನ ಆಟ
ಭಾರತದ ಆರಂಭ ಬಿರುಸಿನಿಂದಲೇ ಕೂಡಿತ್ತು. ರಾಹುಲ್‌ ಒಂದೆಡೆ ವಿಕೆಟ್‌ ಕಾಯುವ ಕಾಯಕದಲ್ಲಿ ನಿರತರಾಗಿದ್ದರೂ ಮಾಯಾಂಕ್‌ ಅಗರ್ವಾಲ್‌ ಮುನ್ನುಗ್ಗಿ ಬಾರಿಸಲಾರಂಭಿಸಿದ್ದರು. ಆದರೆ ಇನ್ನಿಂಗ್ಸ್‌ ವಿಸ್ತರಿಸಲು ಸಾಧ್ಯವಾಗಲಿಲ್ಲ. 37 ಎಸೆತಗಳಿಂದ 26 ರನ್‌ ಮಾಡಿ ಜಾನ್ಸೆನ್‌ಗೆ ವಿಕೆಟ್‌ ಒಪ್ಪಿಸಿದರು. ಇದರಲ್ಲಿ 5 ಬೌಂಡರಿ ಸೇರಿತ್ತು.

ಕೊಹ್ಲಿ ಬದಲು ಅವಕಾಶ ಪಡೆದ ಹನುಮ ವಿಹಾರಿ ಕೂಡ ಯಶಸ್ಸು ಕಾಣಲಿಲ್ಲ. ಅವರ ಗಳಿಕೆ 53 ಎಸೆತಗಳಿಂದ 20 ರನ್‌ (3 ಬೌಂಡರಿ). ಆದರೆ ರಾಹುಲ್‌ ಅವರೊಂದಿಗೆ 4ನೇ ವಿಕೆಟಿಗೆ 42 ರನ್‌ ಪೇರಿಸಲು ನೆರವಾದರು. ಇದೇ ಭಾರತದ ಸರದಿಯ ದೊಡ್ಡ ಜತೆಯಾಟವಾಗಿತ್ತು. ರಿಷಭ್‌ ಪಂತ್‌ 43 ಎಸೆತ ನಿಭಾಯಿಸಿ 17 ರನ್‌ ಹೊಡೆದರು. ಇದರಲ್ಲಿದ್ದುದು ಒಂದೇ ಬೌಂಡರಿ.

ಉಪನಾಯಕ ಬುಮ್ರಾ ಭಾರತದ ಸರದಿಯ ಏಕೈಕ ಸಿಕ್ಸರ್‌ ಹೊಡೆದರು. ಜತೆಗೆ 2 ಬೌಂಡರಿಯೂ ಸೇರಿತ್ತು. 11 ಎಸೆತ ಎದುರಿಸಿದ ಅವರ ಗಳಿಕೆ ಅಜೇಯ 14 ರನ್‌. 4 ವಿಕೆಟ್‌ ಉಡಾಯಿಸಿದ ಯುವ ವೇಗಿ ಮಾರ್ಕೊ ಜಾನ್ಸೆನ್‌ ದಕ್ಷಿಣ ಆಫ್ರಿಕಾದ ಯಶಸ್ವಿ ಬೌಲರ್‌. ರಬಾಡ ಮತ್ತು ಒಲಿವರ್‌ ತಲಾ 3 ವಿಕೆಟ್‌ ಕೆಡವಿದರು. ಎನ್‌ಗಿಡಿ ಮತ್ತು ಮಹಾರಾಜ್‌ಗೆ ಯಾವುದೇ ವಿಕೆಟ್‌ ಲಭಿಸಲಿಲ್ಲ.

ರಾಹುಲ್‌ಗೆ ಅನಿರೀಕ್ಷಿತ ನಾಯಕತ್ವ!
ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ ಟಾಸ್‌ ವೇಳೆ ಅಚ್ಚರಿಯೊಂದು ಕಾದಿತ್ತು. ನಾಯಕ ವಿರಾಟ್‌ ಕೊಹ್ಲಿ ಬದಲು ಕೆ.ಎಲ್‌. ರಾಹುಲ್‌ ಆಗಮಿಸಿದ್ದರು. ಕೊಹ್ಲಿ ಬೆನ್ನುನೋವಿನಿಂದಾಗಿ ಹೊರಗುಳಿದ ಕಾರಣ ರಾಹುಲ್‌ ಅನಿರೀಕ್ಷಿತ ಸಂದರ್ಭದಲ್ಲಿ ಟೆಸ್ಟ್‌ ಕ್ಯಾಪ್ಟನ್ಸಿ ವಹಿಸಿಕೊಳ್ಳಬೇಕಾಯಿತು.

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಏಕದಿನ ತಂಡದ ನಾಯಕನಾಗಿ ನೇಮಕಗೊಂಡ ರಾಹುಲ್‌ ಟೆಸ್ಟ್‌ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಹಾಗೆಯೇ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಉಪನಾಯಕತ್ವ ನೀಡಲಾಯಿತು. ಅವರಿಗೂ ಇದು ಮೊದಲ ಅನುಭವ.

ಇದರೊಂದಿಗೆ ರಾಹುಲ್‌ ಭಾರತದ 34ನೇ ಟೆಸ್ಟ್‌ ನಾಯಕನೆನಿಸಿದರು. ಹಾಗೆಯೇ 1990ರ ಬಳಿಕ, ಏಕದಿನ ತಂಡದ ನಾಯಕನಾಗುವ ಮೊದಲೇ ಟೆಸ್ಟ್‌ ತಂಡದ ನಾಯಕನಾದ ಭಾರತದ ಮೊದಲ ಕ್ರಿಕೆಟಿಗೆನೆನಿಸಿಕೊಂಡರು. ಅಂದು ಮೊಹಮ್ಮದ್‌ ಅಜರುದ್ದೀನ್‌ಗೆ ಇಂಥದೊಂದು ಅವಕಾಶ ಲಭಿಸಿತ್ತು.

ಕರ್ನಾಟಕದ 4ನೇ ನಾಯಕ
ಕೆ.ಎಲ್‌. ರಾಹುಲ್‌ ಭಾರತದ ಟೆಸ್ಟ್‌ ತಂಡದ ನಾಯಕನೆನಿಸಿದ ಕರ್ನಾಟಕದ 4ನೇ ಆಟಗಾರ. ಇದಕ್ಕೂ ಮೊದಲು ಜಿ.ಆರ್‌. ವಿಶ್ವನಾಥ್‌, ರಾಹುಲ್‌ ದ್ರಾವಿಡ್‌ ಮತ್ತು ಅನಿಲ್‌ ಕುಂಬ್ಳೆ ಟೀಮ್‌ ಇಂಡಿಯಾವನ್ನು ಮುನ್ನಡೆಸಿದ್ದರು.

ಕೊಹ್ಲಿ ಬದಲು ವಿಹಾರಿ
ವಿರಾಟ್‌ ಕೊಹ್ಲಿ ಗಾಯಾಳಾಗಿ ಟೆಸ್ಟ್‌ ಪಂದ್ಯದಿಂದ ಹೊರಗುಳಿದ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯ ಎದುರಿನ 2017ರ ಧರ್ಮಶಾಲಾ ಟೆಸ್ಟ್‌ ಪಂದ್ಯವನ್ನು ಅವರು ತಪ್ಪಿಸಿಕೊಂಡಿದ್ದರು.

ವಿರಾಟ್‌ ಕೊಹ್ಲಿ ಬದಲು ಹನುಮ ವಿಹಾರಿ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಭಾರತದ ತಂಡದಲ್ಲಿ ಸಂಭವಿಸಿದ ಬದಲಾವಣೆ ಇದೊಂದೇ. ಶ್ರೇಯಸ್‌ ಅಯ್ಯರ್‌ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇತ್ತಾದರೂ ಅವರೂ ಗಾಯಾಳಾಗಿದ್ದಾರೆ ಎಂಬ ಸುದ್ದಿ ಬಂದಿದೆ.

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಸಿ ರಬಾಡ ಬಿ ಜಾನ್ಸೆನ್‌ 50
ಅಗರ್ವಾಲ್‌ ಸಿ ವೆರೇಯ್ನ ಬಿ ಜಾನ್ಸೆನ್‌ 26
ಪೂಜಾರ ಸಿ ಬವುಮ ಬಿ ಒಲಿವರ್‌ 3
ರಹಾನೆ ಸಿ ಪೀಟರ್‌ಸನ್‌ ಬಿ ಒಲಿವರ್‌ 0
ಹನುಮ ವಿಹಾರಿ ಸಿ ಡುಸೆನ್‌ ಬಿ ರಬಾಡ 20
ರಿಷಭ್‌ ಪಂತ್‌ ಸಿ ವೆರೇಯ್ನ ಬಿ ಜಾನ್ಸೆನ್‌ 17
ಆರ್‌. ಅಶ್ವಿ‌ನ್‌ ಸಿ ಪೀಟರ್‌ಸನ್‌ ಬಿ ಜಾನ್ಸೆನ್‌ 46
ಶಾರ್ದೂಲ್ ಠಾಕೂರ್ ಸಿ ಪೀಟರ್‌ಸನ್‌ ಬಿ ಒಲಿವರ್‌ 0
ಮೊಹಮ್ಮದ್‌ ಶಮಿ ಸಿ ಮತ್ತು ಬಿ ರಬಾಡ 9
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 14
ಮೊಹಮ್ಮದ್‌ ಸಿರಾಜ್‌ ಸಿ ವೆರೇಯ್ನ ಬಿ ರಬಾಡ 1
ಇತರ 16
ಒಟ್ಟು (ಆಲೌಟ್‌) 202
ವಿಕೆಟ್‌ ಪತನ:1-36, 2-49, 3-49, 4-91, 5-116, 6-156, 7-157, 8-185, 9-187.
ಬೌಲಿಂಗ್‌;ಕಾಗಿಸೊ ರಬಾಡ 17.1-2-64-3
ಡ್ನೂನ್‌ ಒಲಿವರ್‌ 17-1-64-3
ಲುಂಗಿ ಎನ್‌ಗಿಡಿ 11-4-26-0
ಮಾರ್ಕೊ ಜಾನ್ಸೆನ್‌ 17-5-31-4
ಕೇಶವ್‌ ಮಹಾರಾಜ್‌ 1-0-6-0
ದಕ್ಷಿಣ ಆಫ್ರಿಕಾ
ಡೀನ್‌ ಎಲ್ಗರ್‌ ಬ್ಯಾಟಿಂಗ್‌ 11
ಐಡನ್‌ ಮಾರ್ಕ್‌ರಮ್‌ ಎಲ್‌ಬಿಡಬ್ಲ್ಯು ಶಮಿ 7 ಕೀಗನ್‌ ಪೀಟರ್‌ಸನ್‌ ಬ್ಯಾಟಿಂಗ್‌ 14
ಇತರ 3
ಒಟ್ಟು( ಒಂದು ವಿಕೆಟಿಗೆ) 35
ವಿಕೆಟ್‌ ಪತನ:1-14.
ಬೌಲಿಂಗ್‌; ಜಸ್‌ಪ್ರೀತ್‌ ಬುಮ್ರಾ 8-3-14-0
ಮೊಹಮ್ಮದ್‌ ಶಮಿ 6-2-15-1
ಮೊಹಮ್ಮದ್‌ ಸಿರಾಜ್‌ 3.5-2-4-0
ಶಾರ್ದೂಲ್ ಠಾಕೂರ್ 0.1-0-0-0

Advertisement

Udayavani is now on Telegram. Click here to join our channel and stay updated with the latest news.

Next