Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಕೇವಲ 4 ವಿಕೆಟಿಗೆ 211 ರನ್ ರಾಶಿ ಹಾಕಿತು. ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 3 ವಿಕೆಟಿಗೆ 212 ರನ್ ಬಾರಿಸಿ ಭಾರತದ ವಿಶ್ವದಾಖಲೆಯನ್ನು ತಪ್ಪಿಸಿತು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಫ್ಘಾನಿಸ್ಥಾನ, ರೊಮೇನಿಯಾ ಮತ್ತು ಭಾರತ ಸತತ 12 ಗೆಲುವಿನ ಜಂಟಿ ದಾಖಲೆ ಹೊಂದಿದ್ದವು. ಈ ಪಂದ್ಯ ಜಯಿಸಿದ್ದರೆ ಭಾರತದಿಂದ ನೂತನ ವಿಶ್ವದಾಖಲೆ ನಿರ್ಮಾಣವಾಗುತ್ತಿತ್ತು.
Related Articles
Advertisement
ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ದ್ವಿತೀಯ ಎಸೆತದಲ್ಲಿ ಲಭಿಸಿದ 5 ವೈಡ್ ರನ್ ಮೂಲಕ ಭಾರತದ ಖಾತೆ ತೆರೆಯಲ್ಪಟ್ಟಿತು. ಇದೇ ಓವರ್‌ನಲ್ಲಿ ಇಶಾನ್ ಕಿಶನ್ 2 ಬೌಂಡರಿ ಬಾರಿಸಿ ಸಿಡಿಯುವ ಸೂಚನೆ ನೀಡಿದರು. ಮೊದಲ ಓವರ್‌ನಲ್ಲೇ 13 ರನ್ ಒಟ್ಟುಗೂಡಿತು. ಇನ್ನೊಂದೆಡೆ ಗಾಯಕ್ವಾಡ್ ಕೂಡ ದೊಡ್ಡ ಹೊಡೆತಗಳಿಗೆ ಮುಂದಾದರು. ನೋರ್ಜೆಗೆ ಎರಡು ಸಿಕ್ಸರ್ ಬಿತ್ತು. ಪವರ್ ಪ್ಲೇಯಲ್ಲಿ ಆರಂಭಿಕ ಜೋಡಿ 51 ರನ್ ಒಟ್ಟುಗೂಡಿಸಿತು.
ಪವರ್ ಪ್ಲೇ ಮುಗಿದ ಬೆನ್ನಲ್ಲೇ ಗಾಯಕ್ವಾಡ್ ಪಾರ್ನೆಲ್‌ಗೆ ಸಿಕ್ಸರ್ ರುಚಿ ತೋರಿಸಿದರು. ಮರು ಎಸೆತದಲ್ಲೇ ಪಾರ್ನೆಲ್ ಸೇಡು ತೀರಿಸಿಕೊಂಡರು. ಗಾಯಕ್ವಾಡ್ ಆಟ 23 ರನ್ನಿಗೆ ಮುಗಿಯಿತು (15 ಎಸೆತ, 3 ಸಿಕ್ಸರ್). ಮೊದಲ ವಿಕೆಟಿಗೆ 6.2 ಓವರ್‌ಗಳಿಂದ 57 ರನ್ ಹರಿದು ಬಂತು.
ಇಶಾನ್ ಕಿಶನ್ ಹೆಚ್ಚಿನ ಸ್ಟ್ರೈಕ್ ಪಡೆಯುತ್ತ ಇದ್ದುದರಿಂದ ಅವರಿಂದಲೇ ಹೆಚ್ಚು ರನ್ ಹರಿದುಬರತೊಡಗಿತು. ಅಯ್ಯರ್ 8 ಎಸೆತ ಎದುರಿಸುವಷ್ಟರಲ್ಲಿ 3 ಸಿಕ್ಸರ್ ಸಿಡಿಸಿದರು. 9.4 ಓವರ್‌ಗಳಲ್ಲಿ ಭಾರತದ 100 ರನ್ ಪೂರ್ತಿಗೊಂಡಿತು.
ಐಪಿಎಲ್‌ನಲ್ಲಿ ಕೋಟಿ ಮೊತ್ತಕ್ಕೆ ತಕ್ಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದ ಇಶಾನ್ ಕಿಶನ್ ಇಲ್ಲಿ 37 ಎಸೆತಗಳಿಂದ ಅರ್ಧ ಶತಕ ಹೊಡೆದರು. ಮಹಾರಾಜ್ ಎಸೆದ 13ನೇ ಓವರ್‌ನ ಸತತ 4 ಎಸೆತಗಳಲ್ಲಿ 20 ರನ್ (6, 6, 4, 4) ಸಿಡಿಸುವ ಮೂಲಕ ಕೋಟ್ಲಾ ವೀಕ್ಷಕರಿಗೆ ಭರಪೂರ ರಂಜನೆ ಒದಗಿಸಿದರು. ಆದರೆ ಅಂತಿಮ ಎಸೆತದಲ್ಲಿ ಕಿಶನ್‌ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಮಹಾರಾಜ್ ಯಶಸ್ವಿಯಾದರು. ಎಡಗೈ ಆರಂಭಿಕನ ಗಳಿಕೆ 48 ಎಸೆತಗಳಿಂದ 76 ರನ್. ಇದರಲ್ಲಿ 11 ಫೋರ್, 3 ಸಿಕ್ಸರ್ ಸೇರಿತ್ತು. ಇಶಾನ್ ಕಿಶನ್-ಅಯ್ಯರ್ ಕೇವಲ 6.4 ಓವರ್‌ಗಳಿಂದ 80 ರನ್ ಸೂರೆಗೈದರು.
ಮೊದಲ 15 ಓವರ್‌ಗಳಲ್ಲಿ ಹತ್ತರ ಸರಾಸರಿಯಲ್ಲಿ ರನ್ ಬಾರಿಸತೊಡಗಿದ ಭಾರತ ಭರ್ತಿ 150 ರನ್ ಸಂಗ್ರಹಿಸಿತು. ಡೆತ್ ಓವರ್ ವೇಳೆ ಅಯ್ಯರ್ ವಿಕೆಟ್ ಬಿತ್ತು. 27 ಎಸೆತಗಳಿಂದ 36 ರನ್ (1 ಬೌಂಡರಿ, 3 ಸಿಕ್ಸರ್) ಮಾಡಿದ ಅವರು ಪ್ರಿಟೋರಿಯಸ್ ಎಸೆತದಲ್ಲಿ ಬೌಲ್ಡ್ ಆದರು.
ಸಿಡಿಯುವ ಮುಂದಿನ ಸರದಿ ನಾಯಕ ರಿಷಭ್ ಪಂತ್ ಅವರದು. ತವರಿನಂಗಳದಲ್ಲೇ ಮೊದಲ ಸಲ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಖುಷಿ ಅವರ ಆಟದಲ್ಲಿ ಗೋಚರಿಸಿತು. ತಂಡಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟಕ್ಕೆ ಮುಂದಾದರು. 19 ಓವರ್‌ಗಳಲ್ಲಿ ತಂಡದ ಮೊತ್ತ 200ಕ್ಕೆ ಏರಿತು. ಪಂತ್-ಪಾಂಡ್ಯ 18 ಎಸೆತಗಳಿಂದ 46 ಸೂರೆಗೈದರು. ಪಂತ್ ಗಳಿಕೆ 16 ಎಸೆತಗಳಿಂದ 23 ರನ್ (2 ಬೌಂಡರಿ, 2 ಸಿಕ್ಸರ್). ಪಾಂಡ್ಯ 12 ಎಸೆತಗಳಿಂದ ಅಜೇಯ 31 ರನ್ (2 ಬೌಂಡರಿ, 3 ಸಿಕ್ಸರ್) ಬಾರಿಸಿದರು.
ಎರಡನೇ ಕಿರಿಯ ಕಪ್ತಾನ :
ಕೆ.ಎಲ್. ರಾಹುಲ್ ಗೈರಲ್ಲಿ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್ ಭಾರತದ 2ನೇ ಕಿರಿಯ ಟಿ20 ನಾಯಕನೆನಿಸಿದರು (24 ವರ್ಷ, 248 ದಿನ). ದಾಖಲೆ ಸುರೇಶ್ ರೈನಾ ಹೆಸರಲ್ಲಿದೆ (23 ವರ್ಷ, 197 ದಿನ).
ಮಾರ್ಕ್‌ರಮ್‌ಗೆ ಕೊರೊನಾ :
ಪಂದ್ಯದ ಆರಂಭಕ್ಕೂ ಮೊದಲೇ ದಕ್ಷಿಣ ಆಫ್ರಿಕಾ ಆಘಾತವೊಂದನ್ನು ಎದುರಿಸಿತು. ಐಡನ್ ಮಾರ್ಕ್‌ರಮ್ ಅವರ ಕೋವಿಡ್ ಫಲಿತಾಂಶ ಪಾಸಿಟಿವ್ ಬಂದ ಕಾರಣ ಪಂದ್ಯದಿಂದ ಹೊರಗುಳಿದರು. ಮಾರ್ಕ್‌ರಮ್ ಸ್ಥಾನಕ್ಕೆ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಸೇರಿಸಿಕೊಳ್ಳಲಾಯಿತು. ಅವರಿಗೆ ಇದು ಪದಾರ್ಪಣ ಪಂದ್ಯವಾಗಿತ್ತು.ವೇನ್ ಪಾರ್ನೆಲ್ 2017ರ ಬಳಿಕ ಮೊದಲ ಪಂದ್ಯವಾಡಿದರು. ಈ ಅವಧಿಯಲ್ಲಿ ಅವರು 51 ಟಿ20 ಪಂದ್ಯಗಳಿಂದ ಹೊರಗುಳಿದಿದ್ದರು. ಇದು ದಕ್ಷಿಣ ಆಫ್ರಿಕಾ ಪರ ಜಂಟಿ ದಾಖಲೆ. 2011-17ರ ನಡುವೆ ಹೀನೊ ಕುಹ್ನ್ ಕೂಡ 51 ಪಂದ್ಯ ತಪ್ಪಿಸಿಕೊಂಡಿದ್ದರು.