Advertisement

ಏಷ್ಯಾ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಇಂದು ಭಾರತ-ಪಾಕಿಸ್ತಾನ ಕದನ ಕುತೂಹಲ

09:22 PM Dec 16, 2021 | Team Udayavani |

ಢಾಕಾ: ಏಷ್ಯಾ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಯ ಮಹತ್ವದ ಪಂದ್ಯವೊಂದಕ್ಕೆ ಢಾಕಾ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ, ಕಳೆದ ಸಲದ ಜಂಟಿ ಚಾಂಪಿಯನ್‌ಗಳಾದ ಭಾರತ-ಪಾಕಿಸ್ತಾನ ತಂಡಗಳು ಶುಕ್ರವಾರ ಮಧ್ಯಾಹ್ನ ಮುಖಾಮುಖೀಯಾಗಲಿವೆ.

Advertisement

ಭಾರತಕ್ಕೆ ಇದು ಕೂಟದ 3ನೇ ಪಂದ್ಯ. ಕೊರಿಯ ವಿರುದ್ಧ 2-2 ಡ್ರಾ ಸಾಧಿಸಿದ ಬಳಿಕ ಆತಿಥೇಯ ಬಾಂಗ್ಲಾದೇಶವನ್ನು 9-0 ಗೋಲುಗಳಿಂದ ಮಣಿಸಿದ ಮನ್‌ಪ್ರೀತ್‌ ಸಿಂಗ್‌ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಪಾಕಿಸ್ತಾನವನ್ನು ಬಗ್ಗುಬಡಿದರೆ ಸೆಮಿಫೈನಲ್‌ ಖಾತ್ರಿಯಾಗಲಿದೆ. ಪಾಕಿಸ್ತಾನಕ್ಕೆ ಇದು ಎರಡನೇ ಪಂದ್ಯ. ಜಪಾನ್‌ ವಿರುದ್ಧ ಗೋಲ್‌ಲೆಸ್‌ ಡ್ರಾ ಸಾಧಿಸಿದ ಪಾಕ್‌ 4ನೇ ಸ್ಥಾನದಲ್ಲಿದೆ.

ಭಾರತ-ಪಾಕಿಸ್ತಾನ ಕಳೆದ ಕೂಟದ ಜಂಟಿ ಚಾಂಪಿಯನ್ಸ್‌ ಎಂಬುದನ್ನು ಮರೆಯುವಂತಿಲ್ಲ. ಮಳೆಯಿಂದಾಗಿ 2018ರ ಮಸ್ಕತ್‌ ಫೈನಲ್‌ ಪಂದ್ಯ ರದ್ದಾದುದರಿಂದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ಸ್‌ ಎಂದು ಘೋಷಿಸಲಾಗಿತ್ತು. ಟೋಕ್ಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಪದಕದ ಬರಗಾಲ ನೀಗಿಸಿಕೊಂಡ ಹಿರಿಮೆ ಭಾರತದ್ದಾದರೆ, ಟೋಕ್ಯೊ ಒಲಿಂಪಿಕ್ಸ್‌ಗೆ ಪ್ರವೇಶವನ್ನೇ ಪಡೆಯದಿದ್ದುದು ಪಾಕ್‌ ಹಾಕಿ ದುರಂತ!

ಭಾರತವೇ ಮೆಚ್ಚಿನ ತಂಡ: ಲಯದ ಲೆಕ್ಕಾಚಾರದಲ್ಲಿ ಭಾರತವೇ ಮೆಚ್ಚಿನ ತಂಡ. ಕೂಟದ ಇತಿಹಾಸದ ಪ್ರಕಾರ ಇಬ್ಬರದೂ ಸಮಬಲದ ಸಾಧನೆ. ಈವರೆಗಿನ 5 ಕೂಟಗಳಲ್ಲಿ ಭಾರತ, ಪಾಕಿಸ್ತಾನ ಹೊರತುಪಡಿಸಿ ಬೇರೆ ತಂಡಗಳು ಚಾಂಪಿಯನ್‌ ಆಗಿಲ್ಲ. 2011 ಮತ್ತು 2016ರಲ್ಲಿ ಭಾರತ ಟ್ರೋಫಿಯನ್ನು ಎತ್ತಿತ್ತು. ಪಾಕಿಸ್ತಾನ 2012 ಮತ್ತು 2013ರಲ್ಲಿ ಗೆದ್ದು ಬಂದಿತ್ತು. 4 ಫೈನಲ್‌ಗ‌ಳಲ್ಲಿ ಭಾರತ-ಪಾಕ್‌ ತಂಡಗಳೇ ಎದುರಾಗಿದ್ದವು. ಒಮ್ಮೆ ಜಪಾನ್‌ ಪ್ರಶಸ್ತಿ ಸುತ್ತಿಗೆ ಬಂದಿತ್ತು.

-ಆರಂಭ: ಅಪರಾಹ್ನ 3.30

Advertisement
Advertisement

Udayavani is now on Telegram. Click here to join our channel and stay updated with the latest news.

Next