Advertisement

ವಾಶೌಟ್‌ ನಂ. 4; ಮಳೆಯಾಟಕ್ಕೆ ಸೋತ ಭಾರತ-ನ್ಯೂಜಿಲ್ಯಾಂಡ್‌

01:19 PM Jun 15, 2019 | Team Udayavani |

ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ನಲ್ಲಿ ಮಳೆಯ ಪ್ರಾಬಲ್ಯ ಮುಂದುವರಿದಿದೆ. ಅಭಿಮಾನಿಗಳ ತೀವ್ರ ಹತಾಶೆಯ ನಡುವೆ ಕೂಟದ ಅಷ್ಟೂ ಆಸಕ್ತಿ ನಿಧಾನವಾಗಿ ಕಡಿಮೆ ಆಗುತ್ತ ಹೋಗುತ್ತಿದೆ. ಮಳೆಯಾಟದ ತಾಜಾ ಉದಾಹರಣೆ ಗುರುವಾರ ನಾಟಿಂಗ್‌ಹ್ಯಾಮ್‌ನಲ್ಲಿ ಕಾಣಸಿಕ್ಕಿದ್ದು, ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಬಹು ನಿರೀಕ್ಷೆಯ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.

Advertisement

ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ಮಳೆ ನುಂಗಿಹಾಕಿದ 4ನೇ ಪಂದ್ಯ. ಇದರೊಂದಿಗೆ ವಿಶ್ವಕಪ್‌ನಲ್ಲಿ ಮಳೆಯಾಟದ ದಾಖಲೆಯೂ ವಿಸ್ತಾರಗೊಂಡಿದೆ. ಇದು ಒಂದೂ ಎಸೆತ ಕಾಣದೆ ರದ್ದುಗೊಂಡ ವಿಶ್ವಕಪ್‌ ಇತಿಹಾಸದ 5ನೇ ಪಂದ್ಯ. ಕೇವಲ ಅಂಕಗಳನ್ನು ಹಂಚಿಕೊಳ್ಳುತ್ತ ಹೋಗುವುದರಲ್ಲಿ ಅದೇನು ಲಾಭವಿದೆ ಎಂಬ ಕ್ರಿಕೆಟ್‌ ಪ್ರೇಮಿಗಳ ಕೂಗು ಕೂಡ ಮಳೆಯ ಅಬ್ಬರದಲ್ಲಿ ಕೊಚ್ಚಿ ಹೋಗಲಾರಂಭಿಸಿದೆ.

ಅಜೇಯ ತಂಡಗಳಿಗೆ ನಿರಾಸೆ
ಭಾರತ ಮತ್ತು ನ್ಯೂಜಿಲ್ಯಾಂಡ್‌ ಈ ಕೂಟದ ಅಜೇಯ ತಂಡಗಳಾಗಿದ್ದವು. ಹೀಗಾಗಿ ಗೆಲುವಿನ ಓಟ ಮುಂದುವರಿಸಿಕೊಂಡು ಹೋಗುವ ಅದೃಷ್ಟ ಯಾರಿಗಿದೆ ಎಂಬುದು ಎಲ್ಲರನ್ನೂ ಕಾಡುತ್ತಿದ್ದ ಕುತೂಹಲವಾಗಿತ್ತು. ಈವರೆಗೆ ಏಶ್ಯನ್‌ ತಂಡಗಳನ್ನೇ ಎದುರಿಸಿದ ನ್ಯೂಜಿಲ್ಯಾಂಡ್‌ ಎಲ್ಲ 3 ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಸಾಧಿಸಿದರೆ, ಭಾರತ ಆಡಿದ ಎರಡರಲ್ಲೂ ಗೆಲುವಿನ ಸಂಭ್ರಮ ಆಚರಿಸಿತ್ತು. ಆದರೆ ಎರಡೂ ತಂಡಗಳು ಮೊದಲ ಸಲ ಮಳೆಯಾಟಕ್ಕೆ ಶರಣಾಗಲೇ ಬೇಕಾಯಿತು.
ನಾಟಿಂಗ್‌ಹ್ಯಾಮ್‌ನಲ್ಲಿ ಅಪರಾಹ್ನದ ಬಳಿಕ ಬಿರುಸಿನ ಮಳೆಯಾಗಲಿದೆ ಎಂಬುದು ಹವಾಮಾನ ವರದಿಯಾಗಿತ್ತು. ಹೀಗಾಗಿ ಒಂದು ಇನ್ನಿಂಗ್ಸ್‌ ಯಾವುದೇ ಅಡ್ಡಿಯಿಲ್ಲದೆ ಮುಗಿದೀತು ಎಂಬ ನಿರೀಕ್ಷೆ ಇತ್ತು. ಆದರೆ ಮುಂಜಾನೆಯಿಂದಲೇ ಸುರಿಯತೊಡಗಿದ ಮಳೆ ಇಡೀ ಪಂದ್ಯವನ್ನು ನುಂಗಿ ಬಿಟ್ಟಿತು.

ರದ್ದುಗೊಂಡ ಪಂದ್ಯಗಳು
1.ಪಾಕಿಸ್ಥಾನ-ಶ್ರೀಲಂಕಾ,
ಬ್ರಿಸ್ಟಲ್‌, ಜೂ. 7
2.ದಕ್ಷಿಣ ಆಫ್ರಿಕಾ-ವಿಂಡೀಸ್‌, ಸೌತಾಂಪ್ಟನ್‌, ಜೂ. 10
3.ಶ್ರೀಲಂಕಾ-ಬಾಂಗ್ಲಾದೇಶ, ಬ್ರಿಸ್ಟಲ್‌, ಜೂ. 11
4. ಭಾರತ-ನ್ಯೂಜಿಲ್ಯಾಂಡ್‌, ನಾಟಿಂಗ್‌ಹ್ಯಾಮ್‌, ಜೂ. 13

ಭಾರತ-ಪಾಕ್‌ ಪಂದ್ಯಕ್ಕೂ ಮಳೆ?
ರವಿವಾರ ಮ್ಯಾಂಚೆಸ್ಟರ್‌ನಲ್ಲಿ ಭಾರತ-ಪಾಕಿಸ್ಥಾನ ನಡುವೆ ಕೂಟದ ಹೈ ವೋಲ್ಟೆàಜ್‌ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗುವ ಸಂಭವವಿದೆ. ಇನ್ನೆರಡು ದಿನಗಳಲ್ಲಿ ಖಚಿತ ಹವಾಮಾನ ವರದಿ ಲಭ್ಯವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next