Advertisement

ಮಹಿಳೆಯರಿಗೆ ಸೋಲು

12:30 AM Feb 09, 2019 | |

ಆಕ್ಲೆಂಡ್‌: ಆತಿಥೇಯ ನ್ಯೂಜಿಲೆಂಡ್‌ ಎದುರಿನ 2ನೇ ಟಿ20 ಪಂದ್ಯವನ್ನೂ ಕಳೆದುಕೊಂಡ ಭಾರತದ ವನಿತೆಯರು ಸರಣಿ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಶುಕ್ರವಾರ ಆಕ್ಲೆಂಡ್‌ನ‌ಲ್ಲಿ ನಡೆದ ಜಿದ್ದಾಜಿದ್ದಿ ಮುಖಾಮುಖೀಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ 4 ವಿಕೆಟ್‌ಗಳಿಂದ ಎಡವಿತು.

Advertisement

ಗೆದ್ದು ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಿದ್ದ ಒತ್ತಡದಲ್ಲಿದ್ದ ಭಾರತ ಮೊದಲು ಬ್ಯಾಟಿಂಗ್‌ ನಡೆಸಿ 6 ವಿಕೆಟಿಗೆ 135 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿತು. ಜವಾಬಿತ್ತ ನ್ಯೂಜಿಲೆಂಡ್‌ ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವಿನ ರನ್‌ ಬಾರಿಸಿತು. ಆಗ 6 ವಿಕೆಟ್ ಉರುಳಿತ್ತು. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 23 ರನ್ನುಗಳಿಂದ ಕಳೆದುಕೊಂಡಿತ್ತು. ಸರಣಿಯ ಅಂತಿಮ ಪಂದ್ಯ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ಅಂತಿಮ ಓವರ್‌, 9 ರನ್‌: ನ್ಯೂಜಿಲ್ಯಾಂಡ್‌ ಗೆಲುವಿಗೆ ಅಂತಿಮ ಓವರಿನಲ್ಲಿ 9 ರನ್‌ ಅಗತ್ಯವಿತ್ತು. ಮಾನ್ಸಿ ಜೋಶಿ ಪಾಲಾದ ಈ ಓವರಿನ ಮೊದಲ ಎಸೆತದಲ್ಲೇ ಕ್ಯಾಟಿ ಮಾರ್ಟಿನ್‌ ಬೌಂಡರಿ ಹೊಡೆದು ಲೆಕ್ಕಾಚಾರವನ್ನು ಸರಳಗೊಳಿಸಿದರು. ಮುಂದಿನ ಎಸೆತದಲ್ಲೇ ಮಾರ್ಟಿನ್‌ ಬೌಲ್ಡ್‌ ಆದಾಗ ಭಾರತದ ಆಸೆ ಪುನಃ ಚಿಗುರಿತು. ಆದರೆ ಹನ್ನಾ ರೋವ್‌ ಮತ್ತು ಲೀಗ್‌ ಕ್ಯಾಸ್ಪರೆಕ್‌ ಸೇರಿಕೊಂಡು ಮುಂದಿನ 4 ಎಸೆತಗಳಲ್ಲಿ ಕ್ರಮವಾಗಿ 2, 1, 1, 1 ರನ್‌ ಬಾರಿಸಿ ತಂಡಕ್ಕೆ ರೋಚಕ ಜಯ ತಂದಿತ್ತರು. 52 ಎಸೆತಗಳಿಂದ 62 ರನ್‌ ಬಾರಿಸಿ (5 ಬೌಂಡರಿ) ತಂಡಕ್ಕೆ ಆಸರೆಯಾದ ಓಪನರ್‌ ಸುಝೀ ಬೇಟ್ಸ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ನಾಯಕಿ ಆ್ಯಮಿ ಸ್ಯಾಟರ್‌ವೇಟ್ 23, ಓಪನರ್‌ ಸೋಫಿ ಡಿವೈನ್‌ 19 ರನ್‌ ಮಾಡಿದರು. ಭಾರತದ ಬೌಲಿಂಗ್‌ ಸರದಿಯಲ್ಲಿ ರಾಧಾ ಯಾದವ್‌ ಮತ್ತು ಅರುಂಧತಿ ರೆಡ್ಡಿ ಯಶಸ್ವೀ ದಾಳಿ ಸಂಘಟಿಸಿದರು (ತಲಾ 2 ವಿಕೆಟ್).

ಮಂಧನಾ, ಜೆಮಿಮಾ ಹೋರಾಟ: ಪ್ರವಾಸಿಗರ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಜೆಮಿಮಾ ರೋಡ್ರಿಗಸ್‌ ಮತ್ತು ಸ್ಮತಿ ಮಂಧನಾ ಮಾತ್ರ. ಇವರಿಬ್ಬರಿಂದ 2ನೇ ವಿಕೆಟಿಗೆ 70 ರನ್‌ ಒಟ್ಟುಗೂಡಿತು. ಜೆಮಿಮಾ 53 ಎಸೆತ ಎದುರಿಸಿ ಸರ್ವಾಧಿಕ 72 ರನ್‌ ಹೊಡೆದರೆ (6 ಬೌಂಡರಿ, 1 ಸಿಕ್ಸರ್‌), ಮಂಧನಾ 27 ಎಸೆತಗಳಿಂದ 36 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). ಉಳಿದವರ್ಯಾರೂ ಎರಡಂಕೆಯ ಗಡಿ ದಾಟಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ಭಾರತ-20 ಓವರ್‌ಗೆ 135/6 (ಜೆಮಿಮಾ 72, ಮಂಧನಾ 36, ರೋಸ್‌ಮೇರಿ 17ಕ್ಕೆ 2). ನ್ಯೂಜಿಲೆಂಡ್‌ 20 ಓವರ್‌ಗೆ 6 136/6 (ಬೇಟ್ಸ್‌ 62, ಸ್ಯಾಟರ್‌ವೇಟ್ 23, ಅರುಂಧತಿ 22ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next