Advertisement
ಕೊರೊನಾದಿಂದ ಮುಂದೂಡಲ್ಪಟ್ಟ ಸರಣಿಯ 5ನೇ ಹಾಗೂ ಅಂತಿಮ ಪಂದ್ಯವನ್ನು ಭಾರತ ಆಡಲಿಕ್ಕಿದೆ. ಈ ಪಂದ್ಯ ಜುಲೈ ಒಂದರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಸರಣಿಯಲ್ಲಿ ಭಾರತ 2-1 ಮುನ್ನಡೆಯಲ್ಲಿದೆ.
Related Articles
Advertisement
ಪೂಜಾರ ಪುನರಾಗಮನ :
ಇಂಗ್ಲೆಂಡ್ ಸರಣಿ ಅರ್ಧದಲ್ಲೇ ನಿಂತ ಬಳಿಕ ಶ್ರೀಲಂಕಾ ವಿರುದ್ಧ ತವರಿನಲ್ಲಿ ಆಡಲಾದ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಸ್ಥಾನ ಕಳೆದುಕೊಂಡಿದ್ದರು. ಆದರೆ ಇಂಗ್ಲೆಂಡ್ ಕೌಂಟಿಯಲ್ಲಿ ಸಸೆಕ್ಸ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಮರಳಿದ್ದಾರೆ. ಅವರು ಕೌಂಟಿ ಪರ 720 ರನ್ ಬಾರಿಸಿ ಮಿಂಚಿದರು. 2 ಶತಕ ಹಾಗೂ ಒಂದು ದ್ವಿಶತಕವನ್ನು ಇದು ಒಳಗೊಂಡಿದೆ.
ಅಂದು ತಂಡದಲ್ಲಿದ್ದ ಅಜಿಂಕ್ಯ ರಹಾನೆ ಈ ಬಾರಿ ಸ್ಥಾನ ಕಳೆದುಕೊಂಡಿದ್ದಾರೆ. ಅವರು ಫಾರ್ಮ್ನಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ. ಹಾಗೆಯೇ ಕೆ.ಎಲ್. ರಾಹುಲ್ ಗಾಯಾಳಾಗಿ ಈ ಸರಣಿಯಿಂದ ಬೇರ್ಪಟ್ಟಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಕೆ.ಎಸ್. ಭರತ್, ರವೀಂದ್ರ ಜಡೇಜ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.
ಟೀಮ್ ಇಂಡಿಯಾ ಕಠಿನ ಅಭ್ಯಾಸ :
ಈಗಾಗಲೇ ಇಂಗ್ಲೆಂಡ್‌ಗೆ ಆಗಮಿಸಿರುವ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಕಠಿನ ಅಭ್ಯಾಸದಲ್ಲಿ ತೊಡಗಿದ್ದಾರೆ. ಲಂಡನ್‌ನಿಂದ ಲೀಸೆಸ್ಟರ್‌ಶೈರ್‌ಗೆ ಭಾರತೀಯರ ಅಭ್ಯಾಸ ತಾಣ ಸ್ಥಳಾಂತರಗೊಂಡಿದ್ದು, ಸೋಮವಾರ ಇಲ್ಲಿ ಮೊದಲ ಸುತ್ತಿನ ನೆಟ್ ಪ್ರ್ಯಾಕ್ಟೀಸ್ ನಡೆಸಿದರು.
ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ನಿರಂತರ ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದುದು ಕಂಡುಬಂತು. ಇಬ್ಬರೂ ಫ್ರಂಟ್‌ಫುಟ್ ಡಿಫೆನ್ಸ್‌ಗೆ ಹೆಚ್ಚಿನ ಗಮನ ನೀಡಿದರು.
ಮುಂದೂಡಲ್ಪಟ್ಟ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಜೂ. 24ರಿಂದ 27ರ ತನಕ ಲೀಸೆಸ್ಟರ್‌ಶೈರ್ ಕೌಂಟಿ ವಿರುದ್ಧ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ.