Advertisement
ಮೊದಲ ಪಂದ್ಯದಲ್ಲಿ 227 ರನ್ನುಗಳ ಆಘಾತಕಾರಿ ಸೋಲನುಭವಿಸಿದ ಭಾರತ ತಂಡಕ್ಕೆ ಇದೊಂದು ಭಾರೀ ಸವಾಲಿನ ಪಂದ್ಯ. ಒಂದೆಡೆ ಸರಣಿಯನ್ನು ಸಮಬಲಕ್ಕೆ ತರಬೇಕು, ಇನ್ನೊಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಾಧ್ಯತೆಯನ್ನು ತೆರೆದಿಡಬೇಕು. ಜತೆಗೆ ಕೊಹ್ಲಿ ನಾಯಕತ್ವವೂ ಸುರಕ್ಷಿತವಾಗಿ ಉಳಿಯಬೇಕು! ಗೆಲುವೊಂದೇ ಇದಕ್ಕೆಲ್ಲ ಪರಿಹಾರ. ಸಂತೋಷದ ಸಂಗತಿಯೆಂದರೆ ಶೇ.50ರಷ್ಟು ಪ್ರೇಕ್ಷಕರಿಗೆ ಬಿಸಿಸಿಐ ಪ್ರವೇಶ ನೀಡಲಿದೆ.
Related Articles
Advertisement
ಈ ಟೆಸ್ಟ್ ಪಂದ್ಯ ನೂತನವಾಗಿ ನಿರ್ಮಿಸಲಾದ ಟ್ರ್ಯಾಕ್ ಮೇಲೆ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಬಳಸಲಾದ ಅಂಕಣಕ್ಕಿಂತ ಇದು ಭಿನ್ನ. ಬಹಳ ಬೇಗನೇ ತಿರುವು ಪಡೆಯುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಭಾರತವಿಲ್ಲಿ ತ್ರಿವಳಿ ಸ್ಪಿನ್ ದಾಳಿಯನ್ನು ಸಂಘಟಿಸುವುದು ಬಹುತೇಕ ಖಚಿತ. ಆಗ ಪ್ರಧಾನ ಸ್ಪಿನ್ನರ್ ಅಶ್ವಿನ್‌ಗೆ ಇಬ್ಬರು ಅತ್ಯುತ್ತಮ ಬೆಂಬಲಿಗರ ಅಗತ್ಯ ಬೀಳಲಿದೆ. ಯಾವುದೇ ಪರಿಣಾಮ ಬೀರದ ಶಹಬಾಜ್ ನದೀಂ ಸ್ಥಾನ ಕಳೆದುಕೊಳ್ಳುವುದು ಖಚಿತ. ಈ ಸ್ಥಾನಕ್ಕೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಲಗ್ಗೆ ಇಡುವುದರಲ್ಲಿ ಅನುಮಾನವಿಲ್ಲ. ಜಡೇಜ ಜಾಗಕ್ಕೆ ಅವರು ಸೂಕ್ತ ಬದಲೀ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೂ ಇನ್ನೂ ಸ್ಪೆಷಲಿಸ್ಟ್ ಥರ್ಡ್ ಸ್ಪಿನ್ನರ್ ಆಗಿ ರೂಪುಗೊಂಡಿಲ್ಲ. ಹೀಗಾಗಿ ಇವರು ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನುಮಾನವಿದೆ. ಈ ಜಾಗಕ್ಕೆ ಎಡಗೈ ಲೆಗ್‌ಸ್ಪಿನ್ನರ್ ಕುಲದೀಪ್ ಯಾದವ್ ಸೂಕ್ತ ಆಯ್ಕೆ ಆಗಬಲ್ಲರು. ತಂಡದ ಆಡಳಿತ ಮಂಡಳಿಗೆ ತಂಡದ ಹಿತಾಸಕ್ತಿಯೇ ಮುಖ್ಯವಾಗಿದ್ದರೆ ಕುಲದೀಪ್ ಆಯ್ಕೆಯಾದಾರು. ಅಂದ ಹಾಗೆ ಈ ಜಾಗಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರು ಕೂಡ ಕೇಳಿ ಬರುತ್ತಿದೆ. ವೇಗದ ವಿಭಾಗದಲ್ಲಿ ಶಾದೂìಲ್ ಠಾಕೂರ್ ಮತ್ತು ಸಿರಾಜ್ ರೇಸ್‌ನಲ್ಲಿದ್ದಾರೆ. ಆದರೆ ಅನುಭವದ ನೆಲೆಯಲ್ಲಿ ಇಶಾಂತ್ ಮತ್ತು ಬುಮ್ರಾ ಮುಂದುವರಿಯುವುದು ಖಚಿತ.
ಕಾಡುತ್ತಿದೆ ಆರಂಭಿಕ ವೈಫಲ್ಯ :
ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಆರಂಭಿಕ ವಿಭಾಗದ್ದು. ಯುವ ಆಟಗಾರ ಗಿಲ್ ಧೈರ್ಯದಿಂದ ಆಡುತ್ತಿದ್ದರೂ; ಅನುಭವಿ ರೋಹಿತ್ ಬ್ಯಾಟ್ ಮಾತ್ರ ಮಾತಾಡುತ್ತಿಲ್ಲ. ಸೀಮಿತ ಓವರ್‌ಗಳ ಪಂದ್ಯಕ್ಕಷ್ಟೇ ಫಿಟ್ ಎಂಬ ಅಪವಾದದಿಂದ ಪಾರಾಗಬೇಕಾದರೆ ರೋಹಿತ್ ದೊಡ್ಡದೊಂದು ಇನಿಂಗ್ಸ್ ಕಟ್ಟಬೇಕು, ಮತ್ತು ಅದು ಚೆನ್ನೈಯಲ್ಲೇ ಬರಬೇಕು. ಆಸ್ಟ್ರೇಲಿಯದಲ್ಲಿ ನಾಯಕತ್ವದ ಒತ್ತಡದ ನಡುವೆಯೂ ಶತಕ ಬಾರಿಸಿದದ್ದ ಅಜಿಂಕ್ಯ ರಹಾನೆ ಮೊದಲ ಟೆಸ್ಟ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದನ್ನು ನಂಬಲಾಗುತ್ತಿಲ್ಲ. ಪೂಜಾರ, ಕೊಹ್ಲಿ ಸೇರಿದಂತೆ ಇಡೀ ಬ್ಯಾಟಿಂಗ್ ವಿಭಾಗ ನಿಂತು ಆಡಿದರೆ ಎಂಥ ಸ್ಥಿತಿಯಲ್ಲೂ ಪಂದ್ಯವನ್ನು ಉಳಿಸಿಕೊಳ್ಳಬಹುದು.
ಇಂಗ್ಲೆಂಡ್ ತಂಡದಲ್ಲಿ 4 ಬದಲಾವಣೆ! :
ಸಾಮಾನ್ಯವಾಗಿ ಗೆಲುವಿನ ತಂಡವನ್ನು ಬದಲಿಸದೇ ಇರುವುದು ಕ್ರಿಕೆಟ್ ಸಂಪ್ರದಾಯ. ಆದರೆ 227 ರನ್ ಜಯಭೇರಿ ಮೊಳಗಿಸಿದ ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ 4 ಬದಲಾವಣೆಗಳನ್ನು ಮಾಡಿದೆ!
ಕಳೆದ ಪಂದ್ಯದ ಬೌಲಿಂಗ್ ಹೀರೋಗಳಾದ ಜೇಮ್ಸ್ ಆ್ಯಂಡರ್ಸನ್, ಜೋಫ್ರ ಆರ್ಚರ್, ಡಾಮಿನಿಕ್ ಬೆಸ್ ಅವರನ್ನು ಇಂಗ್ಲೆಂಡ್ ಕೈಬಿಟ್ಟಿದೆ. ವಿಕೆಟ್ ಕೀಪರ್ ಜಾಸ್ ಬಟ್ಲರ್ ತವರಿಗೆ ಮರಳಿದ್ದಾರೆ.
ಇವರಲ್ಲಿ ಆ್ಯಂಡರ್ಸನ್ ಮತ್ತು ಬೆಸ್ ಅವರನ್ನು ರೊಟೇಶನ್ ಪದ್ಧತಿ ಹಾಗೂ ಹೆಚ್ಚಿನ ಒತ್ತಡದಿಂದ ಮುಕ್ತಗೊಳಿಸುವ ಸಲುವಾಗಿ ಹೊರಗಿಡಲಾಗಿದೆ. ಇವರ ಬದಲು ಸ್ಟುವರ್ಟ್ ಬ್ರಾಡ್ ಮತ್ತು ಮೊಯಿನ್ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಇವರಿಬ್ಬರು ಅಂತಿಮ ಬಳಗದಲ್ಲಿ ಕಾಣಿಸಿಕೊಳ್ಳುವುದು ನಿಶ್ಚಿತ. ವೇಗಿ ಆರ್ಚರ್ ಗಾಯಾಳಾದ ಕಾರಣ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಸ್ಥಾನಕ್ಕೆ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಮತ್ತು ವೇಗಿ ಓಲೀ ಸ್ಟೋನ್ ನಡುವೆ ಪೈಪೋಟಿ ಇದೆ. ಬಟ್ಲರ್ ಬದಲು ಬೆನ್ ಫೋಕ್ಸ್ ವಿಕೆಟ್ ಕೀಪಿಂಗ್ ನಡೆಸಲಿದ್ದಾರೆ.
ಸಂಭಾವ್ಯ ತಂಡಗಳು :
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್/ಕುಲದೀಪ್ ಯಾದವ್, ಇಶಾಂತ್ ಶರ್ಮ, ಜಸ್‌ಪ್ರೀತ್ ಬುಮ್ರಾ.
ಇಂಗ್ಲೆಂಡ್: ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಡೇನಿಯಲ್ ಲಾರೆನ್ಸ್, ಜೋ ರೂಟ್ (ನಾಯಕ), ಓಲೀ ಪೋಪ್, ಸ್ಟೋಕ್ಸ್, ಬೆನ್ ಫೋಕ್ಸ್, ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್/ಓಲೀ ಸ್ಟೋನ್, ಜಾಕ್ ಲೀಚ್.