Advertisement

ಇಂದೋರ್‌ನಲ್ಲಿ ಇಂದು…ಸಣ್ಣ ಅಂಗಳದಲ್ಲಿ ದೊಡ್ಡ ನಿರೀಕ್ಷೆ

06:50 AM Sep 24, 2017 | Team Udayavani |

ಇಂದೋರ್‌: ವಿಶ್ವ ಚಾಂಪಿಯನ್‌ ಖ್ಯಾತಿಯ ಆಸ್ಟ್ರೇಲಿಯ ವಿರುದ್ಧ ಸತತ 2 ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತದ ಪಾಲಿಗೆ ಸೆ. 24ರ ರವಿವಾರ “ಸೂಪರ್‌ ಸಂಡೇ’ ಆಗುವ ಸಾಧ್ಯತೆಯೊಂದು ತೆರೆಯಲ್ಪಟ್ಟಿದೆ. ಇಂದೋರ್‌ನಲ್ಲಿ ಸರಣಿಯ 3ನೇ ಪಂದ್ಯ ನಡೆಯಲಿದ್ದು, ಭಾರತ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸರಣಿ ಜಯಭೇರಿಯ ಗುರಿ ಇರಿಸಿಕೊಂಡಿದೆ. ಜತೆಗೆ ನಂ.1 ಸ್ಥಾನವೂ ಅಧಿಕೃತಗೊಳ್ಳಲಿದೆ. ಇನ್ನೊಂದೆಡೆ ತೀವ್ರ ಸಂಕಟದ ಸ್ಥಿತಿಯಲ್ಲಿರುವ ಕಾಂಗರೂ ಪಡೆಯ ಮುಂದೆ ಸರಣಿಯನ್ನು ಜೀವಂತವಾಗಿಡುವ ದೊಡ್ಡ ಸವಾಲು ಎದುರಾಗಿದೆ.

Advertisement

ಉಳಿದ 3 ಪಂದ್ಯಗಳಲ್ಲಿ ಒಂದನ್ನು ಗೆಲ್ಲುವುದು ಟೀಮ್‌ ಇಂಡಿಯಾ ಪಾಲಿಗೆ ಅಸಾಧ್ಯವೇನಲ್ಲ ಎಂದೇ ಭಾವಿಸಬಹುದು. ಈ ಗೆಲುವು ಇಂದೋರ್‌ನಲ್ಲೇ ಒಲಿದರೆ ಕೊಹ್ಲಿ ಪಡೆ ನಿಶ್ಚಿಂತೆಯಿಂದ ಮುಂದಿನೆರಡು ಪಂದ್ಯಗಳನ್ನು “ವಿಶ್ವಕಪ್‌ ಪ್ರಯೋಗ’ಕ್ಕೆ ಮೀಸಲಿಡಬಹುದು.

ಸಾಮಾನ್ಯವಾಗಿ ಇಂದೋರ್‌ನಲ್ಲಿ ರನ್‌ ಹರಿವು ಅಧಿಕ. ಇದಕ್ಕೆ ಕಾರಣ ಸಣ್ಣ ಅಂಗಳ ಹಾಗೂ ಬಹಳ ಹತ್ತಿರದಲ್ಲಿರುವ
 “ಬೌಂಡರಿ’. 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 418 ರನ್‌ ಪೇರಿಸಿದ್ದು, ಸೆಹವಾಗ್‌ ದ್ವಿಶತಕ ಸಿಡಿಸಿದ್ದನ್ನೆಲ್ಲ ಇದಕ್ಕೆ ಉದಾಹರಣೆಯಾಗಿ ನೀಡಬಹುದು. ರವಿವಾರವೂ ಇದು ದೊಡ್ಡ ಮೊತ್ತದ ಮೇಲಾಟವಾದರೆ ಅಚ್ಚರಿಯೇನಿಲ್ಲ.

4ನೇ ಕ್ರಮಾಂಕಕ್ಕೆ ಯಾರು?
ಚೆನ್ನೈ ಹಾಗೂ ಕೋಲ್ಕತಾ ಪಂದ್ಯಗಳೆರಡರಲ್ಲೂ ಭಾರತದ್ದು ಅಧಿಕಾರಯುತ ಗೆಲುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಚೆನ್ನೈನ ಮೊದಲ ಮುಖಾಮುಖೀಯಲ್ಲಿ 11 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡು ತೀವ್ರ ಸಂಕಟದಲ್ಲಿದ್ದ ಆತಿಥೇಯ ಪಡೆ ಕೊನೆಯಲ್ಲಿ 281 ರನ್‌ ಪೇರಿಸಿ ತಿರುಗೇಟು ನೀಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಕೋಲ್ಕತಾದಲ್ಲೂ ಅಷ್ಟೇ, ಭಾರತದ 252 ರನ್‌ ಭಾರೀ ಸವಾಲಿನ ಮೊತ್ತವೇನೂ ಆಗಿರಲಿಲ್ಲ. ಇದನ್ನು ಉಳಿಸಿಕೊಳ್ಳುವ ಮೂಲಕ ಕೊಹ್ಲಿ ಪಡೆ ತನ್ನ ಕಾರ್ಯತಂತ್ರದಲ್ಲಿ ಧಾರಾಳ ಯಶಸ್ಸು ಕಂಡಿರುವುದು ಸ್ಪಷ್ಟ.

ಈ ಸರಣಿಯಲ್ಲಿ ಭಾರತದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎನ್ನುವುದು ಒಂದು ತಂಡವಾಗಿ ಕ್ಲಿಕ್‌ ಆಗಿದೆ. ವೈಯಕ್ತಿಕವಾಗಿ ಹೇಳಬೇಕಾದರೆ ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ, ಮನೀಷ್‌ ಪಾಂಡೆ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆದರೆ ರೋಹಿತ್‌ ಶೀಘ್ರದಲ್ಲೇ ದೊಡ್ಡಾಟಕ್ಕೆ ಮರಳಬಹುದೆಂಬ ನಿರೀಕ್ಷೆ ಇದೆ. 0 ಹಾಗೂ 3 ರನ್‌ ಮಾಡಿದ ಪಾಂಡೆಗೆ ಇನ್ನೊಂದು ಅವಕಾಶ ಲಭಿಸೀತೇ ಅಥವಾ ಇದು ಕೆ.ಎಲ್‌. ರಾಹುಲ್‌ ಪಾಲಾದೀತೇ ಎಂಬುದೊಂದು ಪ್ರಶ್ನೆ. ಆದರೆ ಆರಂಭಕಾರ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ತೀವ್ರ ರನ್‌ ಬರಗಾಲ ಅನುಭವಿಸುತ್ತಿರುವುದು ಸುಳ್ಳಲ್ಲ. ಒಟ್ಟಾರೆ ಭಾರತದ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಶೀಘ್ರವೇ ಪರಿಹಾರ ಬೇಕಿರುವುದಂತೂ ನಿಜ.

Advertisement

“ಉಸ್ತುವಾರಿ ಆರಂಭಕಾರ’ ರಹಾನೆ ಮೊದಲ ಪಂದ್ಯದಲ್ಲಿ ಐದೇ ರನ್‌ ಮಾಡಿದರೂ ಬಳಿಕ ಕೋಲ್ಕತಾದಲ್ಲಿ 55 ರನ್‌ ಬಾರಿಸಿ ನಾಯಕ ಕೊಹ್ಲಿ ಜತೆಗೂಡಿ ಶತಕದ ಜತೆಯಾಟ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇದಾರ್‌ ಜಾಧವ್‌ ಕೂಡ ಉಪಯುಕ್ತ ಕೊಡುಗೆ ಸಲ್ಲಿಸಿದ್ದಾರೆ (24 ಮತ್ತು 40 ರನ್‌). ಕೊಹ್ಲಿ, ಧೋನಿ, ಪಾಂಡ್ಯ ಟೀಮ್‌ ಇಂಡಿಯಾದ “ಬ್ಯಾಟಿಂಗ್‌ ಪವರ್‌’ ಎಂಬುದರಲ್ಲಿ ಅನುಮಾನವಿಲ್ಲ. ಇವರಲ್ಲಿ ಪಾಂಡ್ಯ ಅವರದು ಅಪ್ಪಟ ಆಲ್‌ರೌಂಡ್‌ ಸಾಧನೆ.

ಭಾರತದ ಬೌಲಿಂಗ್‌ ಮಿಂಚು
ಭಾರತದ ಬೌಲಿಂಗ್‌ ಕಾಂಗರೂ ಪಾಲಿಗೆ ಕಗ್ಗಂಟಾಗಿರುವುದು ಸ್ಪಷ್ಟ. ಮುಖ್ಯವಾಗಿ ಹ್ಯಾಟ್ರಿಕ್‌ ಹೀರೋ ಕುಲದೀಪ್‌ ಯಾದವ್‌, ಗೂಗ್ಲಿ ಬೌಲರ್‌ ಯಜುವೇಂದ್ರ ಚಾಹಲ್‌, ಸ್ವಿಂಗ್‌ ಬೌಲರ್‌ ಭುವನೇಶ್ವರ್‌ ಅತ್ಯಂತ ಅಪಾಯಕಾರಿಯಾಗಿ ಕಾಂಗರೂ ಮೇಲೆ ಎರಗುತ್ತಿದ್ದಾರೆ. ಹೀಗಾಗಿ ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ರವೀಂದ್ರ ಜಡೇಜ ಮೊದಲಾದ ಅನುಭವಿಗಳು ಇಂದೋರ್‌ನಲ್ಲೂ “ವೇಟಿಂಗ್‌ ಲಿಸ್ಟ್‌’ನಲ್ಲಿಯೇ ಉಳಿಯಬೇಕಾಗಬಹುದು.

ಆಸ್ಟ್ರೇಲಿಯದ ಸಮಸ್ಯೆಗಳು
ಆಸ್ಟ್ರೇಲಿಯ ಈ ಎರಡೂ ಪಂದ್ಯಗಳಲ್ಲಿ ಒಂದು ತಂಡವಾಗಿ ಸಂಪೂರ್ಣ ವೈಫ‌ಲ್ಯ ಅನುಭವಿಸಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಆರಂಭಿಕ ಮೇಲುಗೈ ಉಳಿಸಿಕೊಳ್ಳಲು ವಿಫ‌ಲವಾಗಿದೆ. ಚೆನ್ನೈಯಲ್ಲಿ 11ಕ್ಕೆ 3 ವಿಕೆಟ್‌ ಉರುಳಿಸಿಕೊಂಡ ಭಾರತವನ್ನು 281ರ ತನಕ ಬೆಳೆಯಲು ಬಿಟ್ಟಿದ್ದು ಬೌಲಿಂಗ್‌ ಸಮಸ್ಯೆಯಾದರೆ, ಕೋಲ್ಕತಾದಲ್ಲಿ 117 ರನ್‌ ಅಂತರದಲ್ಲಿ ಕೊನೆಯ 8 ವಿಕೆಟ್‌ ಉರುಳಿಸಿಕೊಂಡದ್ದು ಬ್ಯಾಟಿಂಗ್‌ ಸಂಕಟವನ್ನು ಬಿಡಿಸಿಟ್ಟಿದೆ.
ಅಪಾಯಕಾರಿ ಆರಂಭಕಾರ ವಾರ್ನರ್‌ ಇನ್ನೂ ಸಿಡಿದಿಲ್ಲ. ಇವರಿಗೆ ಸೂಕ್ತ ಜತೆಗಾರನೂ ಸಿಕ್ಕಿಲ್ಲ. ಆದರೆ ಇಂದೋರ್‌ನಲ್ಲಿ ಆರನ್‌ ಫಿಂಚ್‌ ಕಣಕ್ಕಿಳಿಯುವ ಸಾಧ್ಯತೆ ಇದೆ. ಇವರಲ್ಲೊಬ್ಬರು ಸಿಡಿದರಷ್ಟೇ ಆಸ್ಟ್ರೇಲಿಯದ ಬ್ಯಾಟಿಂಗ್‌ ಮೇಲೆ ಭರವಸೆ ಇಡಬಹುದು. ತಂಡದ ಬ್ಯಾಟಿಂಗ್‌ ಕುಸಿತದ ಬಗ್ಗೆ ನಾಯಕ ಸ್ಮಿತ್‌ ತೀವ್ರ ಚಿಂತೆ ವ್ಯಕ್ತಪಡಿಸಿದ್ದು, ಇದು ಇಲ್ಲಿಗೇ ನಿಲ್ಲಬೇಕು ಎಂದು ಎಚ್ಚರಿಸಿದ್ದಾರೆ. ಅವರ ಎಚ್ಚರಿಕೆ ಎಷ್ಟರ ಮಟ್ಟಿಗೆ ಫ‌ಲ ಕೊಟ್ಟಿàತೆಂಬುದನ್ನು ಕಾದು ನೋಡಬೇಕು.

ಆಸೀಸ್‌ ಬೌಲಿಂಗ್‌ ಸರದಿಯಲ್ಲಿ ವೇಗಿ ಕೋಲ್ಟರ್‌ ನೈಲ್‌ ಆರಂಭಿಕ ಸ್ಪೆಲ್‌ಗ‌ಳಲ್ಲಿ ಅತ್ಯಂತ ಅಪಾಯಕಾರಿಯಾಗಿ ಕಂಡುಬಂದಿದ್ದಾರೆ. ಆದರೆ ಇವರಿಗೆ ಪ್ಯಾಟ್‌ ಕಮಿನ್ಸ್‌ ಅವರಿಂದ ಸೂಕ್ತ ಬೆಂಬಲ ಸಿಕ್ಕಿಲ್ಲ. ಸ್ಪಿನ್ನರ್‌ಗಳಂತೂ ಚೆನ್ನಾಗಿ ದಂಡಿಸಿಕೊಂಡಿದ್ದಾರೆ. ಒಟ್ಟಾರೆ, ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳುವುದು ಆಸೀಸ್‌ ಪಾಲಿಗೆ ನಿಜವಾದ ಅಗ್ನಿಪರೀಕ್ಷೆಯಾಗಿದೆ.

ರಿಸ್ಟ್‌ ಸ್ಪಿನ್ನರ್‌ಗಳಿಗೆ ನೆರವು
ಭಾರತದ ಅತೀ ಚಿಕ್ಕ ಕ್ರಿಕೆಟ್‌ ಅಂಗಳವಾಗಿರುವ “ಹೋಳ್ಕರ್‌ ಸ್ಟೇಡಿಯಂ’ ಬ್ಯಾಟ್ಸ್‌ಮನ್‌ಗಳ ಸ್ವರ್ಗವೆಂದೇ ಗುರುತಿಸಲ್ಪಟ್ಟಿದೆ. ಬೀಸಿದ್ದೆಲ್ಲ ಇಲ್ಲಿ ಬೌಂಡರಿ ಗೆರೆ ದಾಟುವುದರಿಂದ ರನ್‌ ಸುರಿಮಳೆ ಮಾಮೂಲು. ಈ ಬಾರಿಯೂ ದೊಡ್ಡ ಮೊತ್ತದ ಸಾಧ್ಯತೆ ಇದೆ. ಆದರೆ ಈ ಪಿಚ್‌ ರಿಸ್ಟ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ ಎನ್ನುತ್ತಾರೆ ಕ್ಯುರೇಟರ್‌ ಸಮಂದರ್‌ ಸಿಂಗ್‌ ಚೌಹಾಣ್‌. ಭಾರತದ ಕುಲದೀಪ್‌, ಚಾಹಲ್‌ ಅವರಿಗೆ ಇದು ಪಕ್ಕಾ “ಸೂಟ್‌’ ಆಗುತ್ತದೆ ಎಂಬುದು ಚೌಹಾಣ್‌ ಹೇಳಿಕೆ.

“ಇದಕ್ಕೆ ಮಧ್ಯ ಪ್ರದೇಶದ ವಿವಿಧ ಕಡೆಯಿಂದ ತರಿಸಲಾದ “ಬ್ಲ್ಯಾಕ್‌ ಕಾಟನ್‌’ ಮಣ್ಣನ್ನು ಬಳಸಲಾಗಿದೆ. ಈಗಿನ ಹವಾಮಾನಕ್ಕೆ ಇದು ಪುಡಿಯಾಗದು. ಹೆಚ್ಚು ಒಣಗುವುದೂ ಇಲ್ಲ. ಈ ಮಣ್ಣಿಗೆ ನೀರಿನ ಅಂಶವನ್ನು ಹಿಡಿದಿಡುವ ಸಾಮರ್ಥ್ಯವಿದೆ. ಹೀಗಾಗಿ ಕುಲದೀಪ್‌, ಚಾಹಲ್‌ ಅವರಂಥ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಲಭಿಸಲಿದೆ. ಆದರೂ ಇದು ದೊಡ್ಡ ಮೊತ್ತದ ಪಂದ್ಯವಾಗಲಿದೆ…’ ಎಂದು ಚೌಹಾಣ್‌ ಹೇಳಿದರು. ಈ ಸಂದರ್ಭದಲ್ಲಿ ಅವರು ಸೆಹವಾಗ್‌ ದ್ವಿಶತಕ, ಕಳೆದ ವರ್ಷ ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ (211) ಹಾಗೂ ರಹಾನೆ (188) ಅವರ ದೊಡ್ಡ ಇನ್ನಿಂಗ್ಸ್‌ಗಳನ್ನು ನೆನಪಿಸಿಕೊಂಡರು.ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ನಡೆಸಿ ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆ ಇದೆ.

ಮಳೆ ಸಾಧ್ಯತೆ ಇದೆ…
ಇಂದೋರ್‌ ಪಂದ್ಯಕ್ಕೂ ಮಳೆ ಎದುರಾಗುವ ಸಾಧ್ಯತೆ ಇದೆ. ಆದರೆ ಮಳೆಯಿಂದ ತೀವ್ರ ಅಡಚಣೆ ಆಗಲಿಕ್ಕಿಲ್ಲ ಎಂಬುದು ಸಮಾಧಾನಕರ ವರದಿ.

ಇಂದೋರ್‌ನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಕಳೆದ ಮಧ್ಯ ರಾತ್ರಿಯಿಂದ ಶನಿವಾರ ಅಪರಾಹ್ನ ತನಕ ಮಳೆಯಾಗಿದೆ. ಇದು ಸೋಮವಾರ ತನಕ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿಯೂ ಇಡೀ ಅಂಗಳಕ್ಕೆ ಹೊದಿಕೆ ಹಾಕಲಾಗಿದೆ.

ಅಂಗಳದ ಡ್ರೈನೇಜ್‌ ವ್ಯವಸ್ಥೆ ಉತ್ತಮ ಮಟ್ಟದಲ್ಲಿದೆ. ಭಾರೀ ಮಳೆಯಾದರೂ ಮಳೆ ನಿಂತ ಒಂದೇ ಗಂಟೆಯಲ್ಲಿ ಮೈದಾನವನ್ನು ಆಟಕ್ಕೆ ಅಣಿಗೊಳಿಸುವ ವ್ಯವಸ್ಥೆ ಇಲ್ಲಿದೆ.

ಇಂದೋರ್‌ನಲ್ಲಿ ಭಾರತ ಅಜೇಯ
ಇಂದೋರ್‌ನ “ಹೋಳ್ಕರ್‌ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಭಾರತದ್ದು ಅಜೇಯ ಸಾಧನೆ. ಆಡಿದ ನಾಲ್ಕೂ ಏಕದಿನ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಜಯ ಸಾಧಿಸಿದೆ. ಇಂಗ್ಲೆಂಡ್‌ ವಿರುದ್ಧ 2 ಜಯ ಕಂಡರೆ, ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಂದೊಂದು ಗೆಲುವು ಒಲಿದಿದೆ. ಭಾರತ-ಆಸ್ಟ್ರೇಲಿಯ ಇಂದೋರ್‌ನಲ್ಲಿ ಈವರೆಗೆ ಮುಖಾಮುಖೀ ಆಗಿಲ್ಲ.

ಭಾರತ ಇಲ್ಲಿ ಮೊದಲ ಪಂದ್ಯವಾಡಿದ್ದು ಇಂಗ್ಲೆಂಡ್‌ ವಿರುದ್ಧ, 2006ರಲ್ಲಿ. ನಾಯಕರಾಗಿದ್ದ ರಾಹುಲ್‌ ದ್ರಾವಿಡ್‌ ಆರಂಭಿಕನ ಜವಾಬ್ದಾರಿಯನ್ನೂ ಹೊತ್ತಿದ್ದರು. ಇವರ ಜತೆಗಾರನಾಗಿ ಕಣಕ್ಕಿಳಿದ ಕರ್ನಾಟಕದ ರಾಬಿನ್‌ ಉತ್ತಪ್ಪ ಅವರಿಗೆ ಇದು ಚೊಚ್ಚಲ ಏಕದಿನ ಪಂದ್ಯವಾಗಿತ್ತು.

ಸರಣಿಯ ಈ 7ನೇ ಹಾಗೂ ಅಂತಿಮ ಪಂದ್ಯದಲ್ಲಿ ಎಸ್‌. ಶ್ರೀಶಾಂತ್‌ ಅವರ ಅಮೋಘ ದಾಳಿಯ (55ಕ್ಕೆ 6) ನಡುವೆಯೂ ಇಂಗ್ಲೆಂಡ್‌ 288 ರನ್‌ ಪೇರಿಸಿತು. ಭಾರತ 49.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 289 ರನ್‌ ಬಾರಿಸಿ ಸರಣಿಯನ್ನು 5-1 ಅಂತರದಿಂದ ವಶಪಡಿಸಿಕೊಂಡಿತು. ಭಾರತದ ಅಗ್ರ ಕ್ರಮಾಂಕದ ಎಲ್ಲರೂ ಅರ್ಧ ಶತಕ ಬಾರಿಸಿದ್ದು ಈ ಪಂದ್ಯದ ವಿಶೇಷ. ಉತ್ತಪ್ಪ 86, ದ್ರಾವಿಡ್‌ 69, ಯುವರಾಜ್‌ ಅಜೇಯ 63, ರೈನಾ 53 ರನ್‌ ಹೊಡೆದರು.

ಯುವಿ ಆಲ್‌ರೌಂಡ್‌ ಶೋ
ಭಾರತ 2 ವರ್ಷಗಳ ಬಳಿಕ ಮತ್ತೆ ಇಂಗ್ಲೆಂಡನ್ನು ಇಲ್ಲಿ ಎದುರಿಸಿತು. ಅದು 7 ಪಂದ್ಯಗಳ ಸರಣಿಯ 2ನೇ ಮೇಲಾಟವಾಗಿತ್ತು. ನಾಯಕರಾಗಿದ್ದವರು ಧೋನಿ. ಭಾರತದ ಗೆಲುವಿನ ಅಂತರ 54 ರನ್‌.

ಭಾರತ 29 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡಾಗ ಗಂಭೀರ್‌ (70), ಯುವರಾಜ್‌ (118) ಯೂಸುಫ್ ಪಠಾಣ್‌ (ಅಜೇಯ 50) ತಂಡವನ್ನು ಆಧರಿಸಿ ನಿಂತರು. ಸ್ಕೋರ್‌ 9ಕ್ಕೆ 292 ತನಕ ಏರಿತು. ಜವಾಬಿತ್ತ ಇಂಗ್ಲೆಂಡ್‌ 238ಕ್ಕೆ ಕುಸಿಯಿತು. ಬೌಲಿಂಗಿನಲ್ಲೂ ಮಿಂಚಿದ ಯುವಿ 28ಕ್ಕೆ 4, ಸೆಹವಾಗ್‌ 28ಕ್ಕೆ 3 ವಿಕೆಟ್‌ ಉರುಳಿಸಿದರು.

ಸೆಹವಾಗ್‌ ಡಬಲ್‌ ಸೆಂಚುರಿ!
ಭಾರತ 2011ರಲ್ಲಿ ವೆಸ್ಟ್‌ ಇಂಡೀಸನ್ನು ಸರಣಿಯ 4ನೇ ಪಂದ್ಯದಲ್ಲಿ ಎದುರಿಸಿದಾಗ ಇಲ್ಲಿ ರನ್‌ ಪ್ರವಾಹವೇ ಹರಿದಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರತ ಪೇರಿಸಿದ್ದು 5ಕ್ಕೆ 418 ರನ್‌. ನಾಯಕ ವೀರೇಂದ್ರ ಸೆಹವಾಗ್‌ ಅವರ ವಿಶ್ವದಾಖಲೆಯ ದ್ವಿಶತಕ (219) ವೈಭವಕ್ಕೆ ಇಂದೋರ್‌ ಅಂಗಳ ಸಾಕ್ಷಿಯಾಯಿತು. ಅಂದು ವೀರೂ 200 ರನ್‌ ಮಾಡಿದ್ದ ತೆಂಡುಲ್ಕರ್‌ ದಾಖಲೆ ಮುರಿದಿದ್ದರು. ಜವಾಬಿತ್ತ ವಿಂಡೀಸ್‌ 265ಕ್ಕೆ ಸರ್ವಪತನ ಕಂಡಿತು. ಗೆಲುವಿನ ಅಂತರ 153 ರನ್‌. ಅಂದಹಾಗೆ ಈಗ ಸರ್ವಾಧಿಕ ರನ್ನಿನ ವಿಶ್ವದಾಖಲೆ ಹೊಂದಿರುವ ರೋಹಿತ್‌ ಶರ್ಮ ಏಕದಿನ ಪಾದಾರ್ಪಣೆ ಮಾಡಿದ್ದು ಇದೇ ಪಂದ್ಯದಲ್ಲಿ!

ನೆರವಿಗೆ ನಿಂತ ಧೋನಿ
ಇಂದೋರ್‌ನಲ್ಲಿ ಕೊನೆಯ ಏಕದಿನ ಪಂದ್ಯ ನಡೆದದ್ದು 2015ರಲ್ಲಿ. ಅಂದು ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಸರಣಿಯ 2ನೇ ಪಂದ್ಯದಲ್ಲಿ ಎದುರಾಗಿದ್ದವು. 0-1 ಹಿನ್ನಡೆಯಲ್ಲಿದ್ದ ಟೀಮ್‌ ಇಂಡಿಯಾ 22 ರನ್‌ ಜಯದೊಂದಿಗೆ ಸಮಬಲ ಸಾಧಿಸಿತು. ಭಾರತ 9ಕ್ಕೆ 247 ರನ್‌ ಗಳಿಸಿದರೆ, ಆಫ್ರಿಕಾ 225ಕ್ಕೆ ಕುಸಿಯಿತು. ಧೋನಿ 92 ರನ್‌ ಬಾರಿಸಿ ಕಪ್ತಾನನ ಆಟವಾಡಿದರೆ, ರಹಾನೆ 51 ರನ್‌ ಹೊಡೆದರು. ಬೌಲಿಂಗಿನಲ್ಲಿ ಮಿಂಚಿದವರು ಭುವನೇಶ್ವರ್‌ ಕುಮಾರ್‌ (41ಕ್ಕೆ 3) ಮತ್ತು ಅಕ್ಷರ್‌ ಪಟೇಲ್‌ (39ಕ್ಕೆ 3).

ಇಂದೋರ್‌ನಲ್ಲಿ ಭಾರತ
ವರ್ಷ    ಎದುರಾಳಿ    ಫ‌ಲಿತಾಂಶ
2006    ಇಂಗ್ಲೆಂಡ್‌    7 ವಿಕೆಟ್‌ ಜಯ
2008    ಇಂಗ್ಲೆಂಡ್‌    54 ರನ್‌ ಜಯ
2011    ವೆಸ್ಟ್‌ ಇಂಡೀಸ್‌    153 ರನ್‌ ಜಯ
2015    ದಕ್ಷಿಣ ಆಫ್ರಿಕಾ    22 ರನ್‌ ಜಯ

ಸಂಭಾವ್ಯ ತಂಡಗಳು
ಭಾರತ:
ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ವಿರಾಟ್‌ ಕೊಹ್ಲಿ (ನಾಯಕ), ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಾಹಲ್‌.

ಆಸ್ಟ್ರೇಲಿಯ: ಡೇವಿಡ್‌ ವಾರ್ನರ್‌, ಆರನ್‌ ಫಿಂಚ್‌, ಸ್ಟೀವನ್‌ ಸ್ಮಿತ್‌ (ನಾಯಕ), ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೊಯಿನಿಸ್‌, ಮ್ಯಾಥ್ಯೂ ವೇಡ್‌, ಆ್ಯಶrನ್‌ ಅಗರ್‌, ಪ್ಯಾಟ್‌ ಕಮಿನ್ಸ್‌, ನಥನ್‌ ಕೋಲ್ಟರ್‌ ನೈಲ್‌, ಕೇನ್‌ ರಿಚರ್ಡ್‌ಸನ್‌.

ಆರಂಭ: ಮಧ್ಯಾಹ್ನ 1.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next