Advertisement

ನಾಗ್ಪುರದಲ್ಲಿ ನಲಿದಾಟ: ಭಾರತಕ್ಕೆ 4-1 ಸರಣಿ

06:10 AM Oct 02, 2017 | Team Udayavani |

ನಾಗ್ಪುರ: ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧದ ನಾಗ್ಪುರ ಏಕದಿನ ಪಂದ್ಯವನ್ನು 7 ವಿಕೆಟ್‌ ಅಂತರದಿಂದ ಭರ್ಜರಿಯಾಗಿ ಗೆದ್ದ ಭಾರತ 5 ಪಂದ್ಯಗಳ ಸರಣಿಯನ್ನು 4-1ರಿಂದ ವಶ ಪಡಿಸಿಕೊಂಡಿದೆ. ಇದರೊಂದಿಗೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಗಟ್ಟಿ ಗೊಳಿಸಿದೆ.


ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇ ಲಿಯ 9 ವಿಕೆಟಿಗೆ 242 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಭಾರತ 42.5 ಓವರ್‌ಗಳಲ್ಲಿ 3 ವಿಕೆಟಿಗೆ 243 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಇದರಲ್ಲಿ ರೋಹಿತ್‌ ಶರ್ಮ ಪಾಲೇ 125 ರನ್‌. ಇದು ಅವರ 14ನೇ ಏಕದಿನ ಶತಕ. ಆಕ್ರಮಣಕಾರಿ ಆಟವಾಡಿದ ರೋಹಿತ್‌ 109 ಎಸೆತಗಳಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಬೀಸಿದ್ದು 5 ಸಿಕ್ಸರ್‌ ಹಾಗೂ 11 ಬೌಂಡರಿ. ರೋಹಿತ್‌ ಅವರ “ರ್ಯಾಪಿಡ್‌ ಸೆಂಚುರಿ’ 94 ಎಸೆತಗಳಿಂದ ಬಂತು. ಈ ಸಾಧನೆಯ ವೇಳೆ ಅವರು 6 ಸಾವಿರ ರನ್‌ ಪೂರ್ತಿಗೊಳಿಸಿದರು.


ಈ ಸರಣಿಲ್ಲಿ ಆರಂಭಿಕನ ಜವಾಬ್ದಾರಿ ಯನ್ನು ಅತ್ಯಂತ ಯಶಸ್ವಿಯಾಗಿ ನಿಭಾ ಯಿಸಿದ ಅಜಿಂಕ್ಯ ರಹಾನೆ 61 ರನ್‌ ಬಾರಿಸಿದರು (74 ಎಸೆತ, 7 ಬೌಂಡರಿ). ರೋಹಿತ್‌-ರಹಾನೆ ಜೋಡಿಯ ಮೊದಲ ವಿಕೆಟ್‌ ಜತೆಯಾಟದಲ್ಲಿ 22.3 ಓವರ್‌ಗಳಿಂದ 124 ರನ್‌ ಹರಿದು ಬಂತು. ಇದು ಇವರಿಬ್ಬರ ಸತತ 3ನೇ ಶತಕದ ಜತೆಯಾಟವಾದರೆ, ಈ ವರ್ಷ ಭಾರತ ಮೊದಲ ವಿಕೆಟಿಗೆ ದಾಖಲಿಸಿದ 8ನೇ ಶತಕದ ಜತೆಯಾಟ. ಕ್ಯಾಲೆಂಡರ್‌ ವರ್ಷ ವೊಂದರಲ್ಲಿ ಇದು ಭಾರತದ ನೂತನ ದಾಖಲೆಯಾಗಿದೆ.


ರೋಹಿತ್‌ ಶರ್ಮ-ವಿರಾಟ್‌ ಕೊಹ್ಲಿ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 99 ರನ್‌ ಒಟ್ಟುಗೂಡಿಸಿ ಭಾರತದ ಹಾದಿಯನ್ನು ಸುಗಮಗೊಳಿಸಿದರು. ಕೊಹ್ಲಿ ಗಳಿಕೆ 39 ರನ್‌. ಭಾರತ ಗೆಲುವನ್ನು ಸಮೀಪಿಸಿದ ಹಂತದಲ್ಲಿ ಇವರಿಬ್ಬರ ವಿಕೆಟ್‌ ಉರುಳಿತು.


ಕಾಂಗರೂಗಳಿಗೆ ಕಡಿವಾಣ
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯ ಆರಂಭದಲ್ಲಿ ದೊಡ್ಡ ಮೊತ್ತದ ಸಾಧ್ಯತೆಯನ್ನು ತೆರೆದಿರಿಸಿತಾದರೂ ಬಳಿಕ ಭಾರತದ ಬೌಲಿಂಗ್‌ ದಾಳಿಗೆ ಸಿಲುಕಿ ಇನ್ನೂರೈವತ್ತರೊಳಗೆ ನಿಂತು ಬಿಟ್ಟಿತು. ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಕಾಂಗರೂಗಳಿಗೆ ಕಡಿವಾಣ ಹೇರುವಲ್ಲಿ ಹೆಚ್ಚಿನ ಯಶಸ್ಸು ಕಂಡರು. ಪಟೇಲ್‌ ಸಾಧನೆ 38ಕ್ಕೆ 3.


ಡೆತ್‌ ಓವರ್‌ಗಳಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ಜಬರ್ದಸ್ತ್ ದಾಳಿ ಸಂಘ ಟಿಸಿದ್ದು ಕೂಡ ಆಸೀಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿತು. ಬುಮ್ರಾ ಸಾಧನೆ 51ಕ್ಕೆ 2 ವಿಕೆಟ್‌. ಮೇಡನ್‌ನೊಂದಿಗೆ ಬುಮ್ರಾ ಆಕ್ರಮಣ ಮೊದಲ್ಗೊಂಡಿತ್ತು. ಭುವ ನೇಶ್ವರ್‌ ಅವರ ಆರಂಭಿಕ ಸ್ಪೆಲ್‌ ಉತ್ತಮ ವಾಗಿತ್ತು. ಪಾರ್ಟ್‌ಟೈಮ್‌ ಸ್ಪಿನ್ನರ್‌ ಕೇದಾರ್‌ ಜಾಧವ್‌ಗೆ ಮೊದಲ ಸಲ ಪೂರ್ತಿ 10 ಓವರ್‌ ಕೋಟಾ ಮುಗಿಸುವ ಅವಕಾಶ ಲಭಿಸಿತು. ವಿಕೆಟ್‌ ಕೀಳಲು ವಿಫ‌ಲರಾದದ್ದು ಕುಲದೀಪ್‌ ಯಾದವ್‌ ಮಾತ್ರ.

Advertisement

ಆಸ್ಟ್ರೇಲಿಯದ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಬಿಗ್‌ ಹಿಟ್ಟರ್‌ಗಳಾದ ವಾರ್ನರ್‌-ಫಿಂಚ್‌ ಮೊದಲ ವಿಕೆಟಿಗೆ 11.3 ಓವರ್‌ಗಳಿಂದ 66 ರನ್‌ ಒಟ್ಟುಗೂಡಿಸಿದರೂ ಮೊದಲ 5 ಓವರ್‌ಗಳಲ್ಲಿ ಇವರಿಂದ ಗಳಿಸಲು ಸಾಧ್ಯ ವಾದದ್ದು 21 ರನ್‌ ಮಾತ್ರ. ಬಳಿಕ ತುಸು ವೇಗ ಕಂಡುಕೊಂಡರು. ವಾರ್ನರ್‌ ಆಸೀಸ್‌ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿ ಯಾದರು (53). 

5ನೇ ವಿಕೆಟಿಗೆ ಜತೆಗೂಡಿದ ಹೆಡ್‌ ಮತ್ತು ಸ್ಟೊಯಿನಿಸ್‌ ತಂಡದ ಕುಸಿತಕ್ಕೆ ತಡೆಯಾದರು. ಇತ್ತಂಡಗಳಿನ್ನು 3 ಪಂದ್ಯಗಳ ಟಿ-20 ಸರಣಿಯಲ್ಲಿ ಮುಖಾಮುಖೀ ಆಗಲಿವೆ. ಮೊದಲ ಪಂದ್ಯ ಅ. 7ರಂದು ರಾಂಚಿಯಲ್ಲಿ ನಡೆಯಲಿದೆ. 


ಭಾರತದ ಬೌಲಿಂಗ್‌ನಲ್ಲಿ ಮತ್ತೆ 3 ಬದಲಾವಣೆ
ನಾಗ್ಪುರ ಏಕದಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ 3 ಬದಲಾವಣೆ ಮಾಡಿಕೊಳ್ಳಲಾಯಿತು. ಈ ಬದಲಾವಣೆಗಳೆಲ್ಲ ಬೌಲಿಂಗ್‌ ವಿಭಾಗದಲ್ಲೇ ಸಂಭವಿಸಿವೆ. ಬೆಂಗಳೂರಿನಲ್ಲಿ ಸರಣಿಯಲ್ಲೇ ಮೊದಲ ಸಲ ಆಡಿದ್ದ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ಅವರನ್ನು ಹೊರಗಿರಿಸಿ ಭುವನೇಶ್ವರ್‌ ಕುಮಾರ್‌ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರಿಗೆ ವಿಶ್ರಾಂತಿ ನೀಡಿ ಚೈನಾಮನ್‌ ಕುಲದೀಪ್‌ ಯಾದವ್‌ಗೆ ಮತ್ತೆ ಅವಕಾಶ ನೀಡಲಾಯಿತು. ಕೆ.ಎಲ್‌. ರಾಹುಲ್‌ಗೆ ಕೊನೆಯ ಪಂದ್ಯದಲ್ಲಾದರೂ ಅವಕಾಶ ಲಭಿಸಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. ಆಸ್ಟ್ರೇಲಿಯ ತಂಡದಲ್ಲಿ ಸಂಭವಿಸಿದ್ದು ಒಂದು ಬದಲಾವಣೆ ಮಾತ್ರ. ವೇಗಿ ಕೇನ್‌ ರಿಚರ್ಡ್‌ಸನ್‌ ಅವರ ಆರೋಗ್ಯ ಹದಗೆಟ್ಟ ಕಾರಣ ಈ ಜಾಗಕ್ಕೆ ಆಲ್‌ರೌಂಡರ್‌ ಜೇಮ್ಸ್‌ ಫಾಕ್ನರ್‌ ಬಂದರು.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಡೇವಿಡ್‌ ವಾರ್ನರ್‌    ಸಿ ಪಾಂಡೆ ಬಿ ಪಟೇಲ್‌    53
ಆರನ್‌ ಫಿಂಚ್‌    ಸಿ ಬುಮ್ರಾ ಬಿ ಪಾಂಡ್ಯ    32
ಸ್ಟೀವ್‌ ಸ್ಮಿತ್‌    ಎಲ್‌ಬಿಡಬ್ಲ್ಯು ಜಾಧವ್‌    16
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ರಹಾನೆ ಬಿ ಪಟೇಲ್‌    13
ಟ್ರ್ಯಾವಿಸ್‌ ಹೆಡ್‌    ಬಿ ಪಟೇಲ್‌    42
ಮಾರ್ಕಸ್‌ ಸ್ಟೊಯಿನಿಸ್‌    ಎಲ್‌ಬಿಡಬ್ಲ್ಯು ಬುಮ್ರಾ    46
ಮ್ಯಾಥ್ಯೂ ವೇಡ್‌    ಸಿ ರಹಾನೆ ಬಿ ಬುಮ್ರಾ    20
ಜೇಮ್ಸ್‌ ಫಾಕ್ನರ್‌    ರನೌಟ್‌    12
ಪ್ಯಾಟ್‌ ಕಮಿನ್ಸ್‌    ಔಟಾಗದೆ    2
ಕೋಲ್ಟರ್‌ ನೈಲ್‌    ಔಟಾಗದೆ    0
ಇತರ        6
ಒಟ್ಟು  (50 ಓವರ್‌ಗಳಲ್ಲಿ 9 ವಿಕೆಟಿಗೆ)    242
ವಿಕೆಟ್‌ ಪತನ: 1-66, 2-100, 3-112, 4-118, 5-205, 6-210, 7-237, 8-242, 9-242.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        8-0-40-1
ಜಸ್‌ಪ್ರೀತ್‌ ಬುಮ್ರಾ        10-2-51-2
ಹಾರ್ದಿಕ್‌ ಪಾಂಡ್ಯ        2-0-14-1
ಕುಲದೀಪ್‌ ಯಾದವ್‌        10-1-48-0
ಕೇದಾರ್‌ ಜಾಧವ್‌        10-0-48-1
ಅಕ್ಷರ್‌ ಪಟೇಲ್‌        10-0-38-3 

ಭಾರತ
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ನೈಲ್‌    61
ರೋಹಿತ್‌ ಶರ್ಮ    ಸಿ ನೈಲ್‌ ಬಿ ಝಂಪ    125
ವಿರಾಟ್‌ ಕೊಹ್ಲಿ    ಸಿ ಸ್ಟೊಯಿನಿಸ್‌ ಬಿ ಝಂಪ    39
ಕೇದಾರ್‌ ಜಾಧವ್‌    ಔಟಾಗದೆ    5
ಮನೀಷ್‌ ಪಾಂಡೆ    ಔಟಾಗದೆ    11
ಇತರ        2
ಒಟ್ಟು  (42.5 ಓವರ್‌ಗಳಲ್ಲಿ 3 ವಿಕೆಟಿಗೆ)    243
ವಿಕೆಟ್‌ ಪತನ: 1-124, 2-223, 3-227.
ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌        7-1-29-0
ನಥನ್‌ ಕೋಲ್ಟರ್‌ ನೈಲ್‌        9-0-42-1
ಮಾರ್ಕಸ್‌ ಸ್ಟೊಯಿನಿಸ್‌        4-0-20-0
ಜೇಮ್ಸ್‌ ಫಾಕ್ನರ್‌        5.5-0-37-0
ಆ್ಯಡಂ ಝಂಪ        8-0-59-2
ಟ್ರ್ಯಾವಿಸ್‌ ಹೆಡ್‌        6-0-38-0
ಆರನ್‌ ಫಿಂಚ್‌        3-0-17-0

Advertisement

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ
ಸರಣಿಶ್ರೇಷ್ಠ: ಹಾರ್ದಿಕ್‌ ಪಾಂಡ್ಯ

 

Advertisement

Udayavani is now on Telegram. Click here to join our channel and stay updated with the latest news.

Next