Advertisement
“ಅಡಿಲೇಡ್ ಓವಲ್’ನಲ್ಲಿ 31 ರನ್ನುಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಖುಷಿಯಲ್ಲಿರುವ ಭಾರತ, ಸಹಜವಾಗಿಯೇ ಭಾರೀ ಹುಮ್ಮಸ್ಸಿನಲ್ಲಿದೆ. ಆಸ್ಟ್ರೇಲಿಯದಲ್ಲಿ ಮೊದಲ ಸಲ ಟೆಸ್ಟ್ ಸರಣಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯನ್ನು ಯಶಸ್ವಿಯಾಗಿ ಇರಿಸಿದೆ. ಆದರೆ ಎರಡನೇ ಹೆಜ್ಜೆ ಇಡುವ ವೇಳೆ ಜಾರದೇ ಇರುವುದು ಮುಖ್ಯ.
ಕ್ಯುರೇಟರ್ ಬ್ರೆಟ್ ಸಿಪ್‌ಥೋಪೆì ಪ್ರಕಾರ ಇದು ಅತ್ಯಧಿಕ ಬೌನ್ಸ್ ಹೊಂದಿರುವ, ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಅಂಗಳ. ಫಾಸ್ಟ್ ಬೌಲಿಂಗಿಗೆ ಹೆಸರುವಾಸಿಯಾಗಿರುವ ಪರ್ತ್‌ನ ಹಿಂದಿನ ಅಂಗಳದ ರೀತಿಯಲ್ಲೇ ಇಲ್ಲಿನ ಪಿಚ್ ಅನ್ನು ನಿರ್ಮಿಸಲಾಗಿದೆ. ಹೀಗಾಗಿ ಇದು ಅಡಿಲೇಡ್ ಮಾದರಿಯ ಟ್ರ್ಯಾಕ್ ಅಲ್ಲ. ಆಸ್ಟ್ರೇಲಿಯದ ಟ್ರ್ಯಾಕ್‌ಗಳೆಲ್ಲವೂ ಅಡಿಲೇಡ್ ಮಾದರಿಯಲ್ಲೇ ಇರುತ್ತವೆ ಎಂದು ಭಾವಿಸಿ ಆಡಲಿಳಿದರೆ ಕೊಹ್ಲಿ ಪಡೆ ಇದಕ್ಕೆ ಭಾರೀ ದಂಡ ತೆರಬೇಕಾದೀತು.
ಪರ್ತ್‌ನಲ್ಲೂ ಟೀಮ್ ಇಂಡಿಯಾ ಮೇಲುಗೈ ಸಾಧಿಸಬೇಕಾದರೆ ಎದುರಾಳಿ ವೇಗಿಗಳನ್ನು ಚೆನ್ನಾಗಿ ನಿಭಾಯಿಸಿ ಕ್ರೀಸ್ ಆಕ್ರಮಿಸಿಕೊಳ್ಳುವುದು, ಮೊದಲು ಬೌಲಿಂಗ್ ಅವಕಾಶ ಲಭಿಸಿದರೆ ಈ ಟ್ರ್ಯಾಕ್‌ನ ಸಂಪೂರ್ಣ ಲಾಭವೆತ್ತಿ ಕಾಂಗರೂಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯ. ಕೊನೆಯ ಇನ್ನಿಂಗ್ಸ್‌ನಲ್ಲಿ ರನ್ ಚೇಸಿಂಗ್ ಕಠಿನವಾಗಿ ಪರಿಣಮಿಸುವುದರಿಂದ ಟಾಸ್ ಗೆಲುವು ನಿರ್ಣಾಯಕ.
4 ಮಂದಿ ವೇಗಿಗಳ ದಾಳಿ?
ಜೊಹಾನ್ಸ್‌ಬರ್ಗ್ ಮಾದರಿಯ “ಗ್ರೀನ್ ಟಾಪ್ ವಿಕೆಟ್’ ಹೊಂದಿರುವ ಪರ್ತ್‌ನಲ್ಲಿ ಸ್ಪಿನ್ ನಡೆಯದು. ನಾಲ್ಕೂ ಮಂದಿ ವೇಗಿಗಳನ್ನು ಕಣಕ್ಕಿಳಿ ಸುವುದು ಇಲ್ಲಿನ ಸಂಪ್ರದಾಯ. 2012ರಲ್ಲೂ ಭಾರತ ಇದೇ ಪ್ರಯೋಗ ಮಾಡಿತ್ತು. ಅಂದು ಜಹೀರ್ ಖಾನ್, ಉಮೇಶ್ ಯಾದವ್, ಇಶಾಂತ್ ಶರ್ಮ ಮತ್ತು ಆರ್. ವಿನಯ್ ಕುಮಾರ್ ಭಾರತದ ವೇಗದ ಪಡೆಯಲ್ಲಿದ್ದರು. ಕೊಹ್ಲಿ ಕೂಡ ಇದನ್ನು ಅನುಸರಿಸುವ ಸಾಧ್ಯತೆ ಇಲ್ಲದಿಲ್ಲ. ಅಡಿಲೇಡ್‌ನಲ್ಲಿ ಎಲ್ಲವೂ ಭಾರತದ ಯೋಜನೆ ಯಂತೆಯೇ ಸಾಗಿತ್ತು. ದ್ವಿತೀಯ ಇನ್ನಿಂಗ್ಸಿನ ಕೊನೆಯ ಹಂತದಲ್ಲಿ ಕ್ಷಿಪ್ರ ಪತನವೊಂದನ್ನು ಕಂಡದ್ದು ಹೊರತುಪಡಿಸಿದರೆ ಪ್ರವಾಸಿಗರ ಆಟ ಚೇತೋಹಾರಿಯಾಗಿತ್ತು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಭಾರತದ ಬ್ಯಾಟಿಂಗ್ ಸರದಿಯ ಬೆನ್ನೆಲುಬಾಗಿ ನಿಂತಿದ್ದರು. ರಾಹುಲ್, ರಹಾನೆ 2ನೇ ಸರದಿಯಲ್ಲಿ ಮಿಂಚಿದ್ದರು. ನಾಯಕ ಕೊಹ್ಲಿ ರನ್ ಬರಗಾಲ ಅನುಭವಿಸಿದರೂ ಮತ್ತೆ ಟ್ರ್ಯಾಕ್ ಏರುವುದು ಅವರಿಗೆ ಭಾರೀ ಸಮಸ್ಯೆಯೇನಲ್ಲ. ಪಂತ್ ಹೊಡಿಬಡಿ ಶೈಲಿ ಬಿಟ್ಟು, ನಿಂತು ಆಡುವುದನ್ನು ಕಲಿಯಬೇಕಿದೆ. ರೋಹಿತ್ ಬದಲು ಕಣಕ್ಕಿಳಿಯಲಿರುವ ಹನುಮ ವಿಹಾರಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಪಾರ್ಟ್‌ಟೈಮ್ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲರು.
Related Articles
ಅಡಿಲೇಡ್‌ನಲ್ಲಿ ಎಡವಿದ ಆತಿಥೇಯ ಆಸ್ಟ್ರೇಲಿಯ ಸಹಜವಾಗಿಯೇ ತೀವ್ರ ಒತ್ತಡ ದಲ್ಲಿದೆ. ಸರಣಿಯನ್ನು ಸಮಬಲಕ್ಕೆ ತರುವುದು ಭಾರೀ ಸವಾಲಿನ ಕೆಲಸವಾದರೆ, ನೂತನ ಟ್ರ್ಯಾಕ್ ಹೇಗೋ ಏನೋ ಎಂಬ ಆತಂಕವೂ ಮನೆಮಾಡಿದೆ. ಈ ವರ್ಷ ಇಲ್ಲಿ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಅದು ಸೋಲನುಭವಿಸಿದೆ. ವಾರ್ನರ್, ಸ್ಮಿತ್ ಅನುಪಸ್ಥಿತಿ ಆತಿಥೇಯರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ಈ ಪಂದ್ಯಕ್ಕಾಗಿ ಆಸ್ಟ್ರೇಲಿಯ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿ ಕೊಂಡಿಲ್ಲ. ಆದರೆ ಆರಂಭಕಾರ ಆರನ್ ಫಿಂಚ್ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳಿವೆ. ಅವರನ್ನು ಕೆಳ ಕ್ರಮಾಂಕಕ್ಕೆ ಇಳಿಸಿ ಉಸ್ಮಾನ್ ಖ್ವಾಜಾ ಅಥವಾ ಶಾನ್ ಮಾರ್ಷ್ ಅವರಿಂದ ಇನ್ನಿಂಗ್ಸ್ ಆರಂಭಿಸುವ ಯೋಜನೆ ಆಸ್ಟ್ರೇಲಿಯದ್ದು.
Advertisement
ವಾಕಾದಿಂದ ಆಪ್ಟಸ್ ಸ್ಟೇಡಿಯಂನತ್ತ…
ಪರ್ತ್ ಟೆಸ್ಟ್ ಪಂದ್ಯವೀಗ ಸ್ವಾನ್ ನದಿ ತೀರದ “ವಾಕಾ’ ಸ್ಟೇಡಿಯಂನಿಂದ ನೂತನವಾಗಿ ನಿರ್ಮಿಸಲಾದ “ಆಪ್ಟಸ್ ಸ್ಟೇಡಿಯಂ’ಗೆ ಸ್ಥಳಾಂತರವಾಗುತ್ತಿದೆ. ಇದೇ ಮೊದಲ ಬಾರಿಗೆ ಇಲ್ಲಿ ಟೆಸ್ಟ್ ಕ್ರಿಕೆಟಿಗೆ ಬಾಗಿಲು ತೆರೆದುಕೊಳ್ಳಲಿದೆ. 1.6 ಬಿಲಿಯನ್ ಡಾಲರ್ ಮೊತ್ತದಲ್ಲಿ ನಿರ್ಮಾಣಗೊಂಡ ಈ ಸ್ಟೇಡಿಯಂ ಆಧುನಿಕ ಬಯಲು ರಂಗಮಂದಿರದಂತಿದ್ದು, ಬಹೂಪಯೋಗಿ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಿದೆ. ಒಟ್ಟು 70 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದ್ದರೂ ಕ್ರಿಕೆಟ್ ಮತ್ತು ಫುಟ್‌ಬಾಲ್ ಪಂದ್ಯಗಳ ವೇಳೆ ಇದು 60 ಸಾವಿರ ಆಸನಗಳಿಗೆ ಸೀಮಿತಗೊಳ್ಳಲಿದೆ. ಆದರೆ ಈ ಹೊಸ ಕ್ರಿಕೆಟ್ ಅಂಗಳ ಆಸ್ಟ್ರೇಲಿಯದ ಪಾಲಿಗೆ ಇನ್ನೂ ಅದೃಷ್ಟದ ಬಾಗಿಲನ್ನು ತೆರೆದಿಲ್ಲ. ಇಲ್ಲಿ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಆಸೀಸ್ ಸೋಲಿನ ಸುಳಿಗೆ ಸಿಲುಕಿತ್ತು. ಜನವರಿಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ 12 ರನ್ನುಗಳ ರೋಚಕ ಜಯ ಸಾಧಿಸಿದರೆ, ಕಳೆದ ತಿಂಗಳು ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ಗೆದ್ದು ಬಂದಿತ್ತು.
ಸಂಭಾವ್ಯ ತಂಡಗಳುಭಾರತ: ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ. ಆಸ್ಟ್ರೇಲಿಯ: ಮಾರ್ಕಸ್ ಹ್ಯಾರಿಸ್, ಆರನ್ ಫಿಂಚ್, ಉಸ್ಮಾನ್ ಖ್ವಾಜಾ, ಟ್ರ್ಯಾವಿಸ್ ಹೆಡ್, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಬ್, ಟಿಮ್ ಪೇನ್ (ನಾಯಕ), ನಥನ್ ಲಿಯೋನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್. ಪರ್ತ್‌ನಲ್ಲಿ ಭಾರತಕ್ಕೆ ಒಂದೇ ಜಯ
ಪರ್ತ್‌ನ “ವಾಕಾ’ ಅಂಗಳದಲ್ಲಿ ಈವರೆಗೆ 4 ಟೆಸ್ಟ್ ಆಡಿರುವ ಭಾರತ ಮೂರರಲ್ಲಿ ಸೋತು ಒಂದನ್ನಷ್ಟೇ ಗೆದ್ದಿದೆ. ಈ ಗೆಲುವು 2008ರಲ್ಲಿ ಒಲಿದಿತ್ತು. ಅಂದಿನ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಅನಿಲ್ ಕುಂಬ್ಳೆ ನೇತೃತ್ವದ ಭಾರತ 72 ರನ್ನುಗಳಿಂದ ಗೆದ್ದಿತ್ತು. ಆತಿಥೇಯ ತಂಡದ ನಾಯಕರಾಗಿದ್ದವರು ರಿಕಿ ಪಾಂಟಿಂಗ್. ದ್ರಾವಿಡ್ (93), ತೆಂಡುಲ್ಕರ್ (71) ಸಾಹಸದಿಂದ ಭಾರತ 320 ರನ್ ಗಳಿಸಿತು. ಜವಾಬಿತ್ತ ಆಸ್ಟ್ರೇಲಿಯ 212ಕ್ಕೆ ಕುಸಿಯಿತು. ಆರ್.ಪಿ. ಸಿಂಗ್ 4 ವಿಕೆಟ್ ಕಿತ್ತು ಮಿಂಚಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಕ್ಷ್ಮಣ್ (79) ನೆರವಿಗೆ ನಿಂತರು. ಭಾರತ 294 ರನ್ ಗಳಿಸಿ 413 ರನ್ ಗುರಿ ನೀಡಿತು. ಆಸೀಸ್ 340 ರನ್ ಗಳಿಸಿ ಆಲೌಟ್ ಆಯಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು
(ಒಟ್ಟು 5 ವಿಕೆಟ್, 74 ರನ್). ಅಶ್ವಿನ್, ರೋಹಿತ್ ಔಟ್; ಭಾರತಕ್ಕೆ ಭಾರೀ ಹೊಡೆತ
ಮೊದಲೇ ಪೃಥ್ವಿ ಶಾ ಸೇವೆಯಿಂದ ವಂಚಿತವಾಗಿರುವ ಭಾರತಕ್ಕೆ ಈಗ ಇನ್ನೂ ಎರಡು ಹೊಡೆತ ಬಿದ್ದಿದೆ. ಬ್ಯಾಟ್ಸ್ ಮನ್ ರೋಹಿತ್ ಶರ್ಮ ಮತ್ತು ಪ್ರಧಾನ ಸ್ಪಿನ್ನರ್ ಆರ್. ಅಶ್ವಿನ್ ಗಾಯಾಳಾಗಿ ಪರ್ತ್ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಇವರನ್ನು ಹೊರತುಪಡಿಸಿ 13ರ ಬಳಗವನ್ನು ಪ್ರಕಟಿಸಿರುವ ಭಾರತ ಹನುಮ ವಿಹಾರಿ, ರವೀಂದ್ರ ಜಡೇಜ, ಉಮೇಶ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಸೇರಿಸಿ ಕೊಂಡಿದೆ. ರೋಹಿತ್ ಬದಲು ವಿಹಾರಿ, ಅಶ್ವಿನ್ ಬದಲು ಜಡೇಜ ಆಡುವ ಸಾಧ್ಯತೆ ಇದೆ. “ಅಶ್ವಿನ್ ಕಿಬ್ಬೊಟ್ಟೆಯ ಎಡ ಭಾಗದ ಸ್ನಾಯು ಸೆಳೆತಕ್ಕೊಳ ಗಾಗಿದ್ದಾರೆ. ರೋಹಿತ್ ಅಡಿಲೇಡ್‌ನಲ್ಲಿ ಫೀಲ್ಡಿಂಗ್ ಮಾಡು ತ್ತಿದ್ದಾಗ ಬೆನ್ನುನೋವಿಗೆ ಸಿಲುಕಿದ್ದರು. ಇಬ್ಬರೂ ಈಗ ಚಿಕಿತ್ಸೆ ಪಡೆಯುತ್ತಿದ್ದು, ಪರ್ತ್ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ’ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.