ವಿಶಾಖಪಟ್ಟಣ: ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಟಿ 20 ಸರಣಿಯ ಮೊದಲ ರೋಚಕ ಹಣಾಹಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 2 ವಿಕೆಟ್ ಜಯ ಸಾಧಿಸಿ ಶುಭಾರಂಭ ಮಾಡಿದೆ. ವಿಶ್ವ ಕಪ್ ಸೋಲಿನ ಬಳಿಕ ಸೂರ್ಯ ಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವ ಸಾಮರ್ಥ್ಯ ತೋರಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಪ್ರವಾಸಿ ಆಸ್ಟ್ರೇಲಿಯ ಜೋಶ್ ಇಂಗ್ಲಿಸ್ ಅವರ ಅಮೋಘ ಶತಕದ ನೆರವಿನಿಂದ ಭಾರತಕ್ಕೆ ಗೆಲ್ಲಲು 209 ರನ್ ಗಳ ಗುರಿ ಮುಂದಿಟ್ಟಿತ್ತು.
ರುತುರಾಜ್ ಗಾಯಕವಾಡ್ ಅವರು ಎಸೆತವನ್ನು ಎದುರಿಸುವ ಮೊದಲೇ ರನ್ ಔಟಾದರು. ಯಶಸ್ವಿ ಜೈಸ್ವಾಲ್ 21 ರನ್ (8ಎಸೆತ) ಗಳಿಸಿ ಔಟಾದರು. ಆಬಳಿಕ ಇಶಾನ್ ಕಿಶನ್ ಮತ್ತು ಸೂರ್ಯ ಕುಮಾರ್ ಯಾದವ್ ಅಮೋಘ ಜತೆಯಾಟವಾಡಿದರು. ಇಶಾನ್ ಕಿಶನ್ 58 ರನ್ (39 ಎಸೆತ) ಗಳಿಸಿ ಔಟಾದರು. ಅಮೋಘ ಆಟವಾಡಿದ ಸೂರ್ಯ ಕುಮಾರ್ ಯಾದವ್ 80 ರನ್ ಗಳಿಸಿ (42 ಎಸೆತ) ಔಟಾದರು. ತಿಲಕ್ ವರ್ಮಾ 12, ರಿಂಕು ಸಿಂಗ್ ಭರ್ಜರಿ ಸಿಕ್ಸರ್ ಸಿಡಿಸಿ ಗೆಲುವಿನ ಸಂಭ್ರಮದಲ್ಲಿ ತೇಲಾಡಿದರು. ಕೊನೆಯ ಎಸೆತ ನೋ ಬಾಲ್ ಆಗಿತ್ತು ಎನ್ನುವುದೂ ವಿಶೇಷ. ರಿಂಕು ಸಿಂಗ್ 28 ರನ್ ಗಳಿಸಿ (14 ಎಸೆತ) ಔಟಾಗದೆ ಉಳಿದರು.
ಕೊನೆಯ ಓವರ್ ನಲ್ಲಿ 7 ರನ್ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಸೀನ್ ಅಬಾಟ್ ಎಸೆತ ಓವರ್ ನಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡಿತು ಆದರೂ ಗೆಲುವು ಸಾಧಿಸಿತು.
ಆಸೀಸ್ ಆರಂಭದಿಂದಲೂ ಅಬ್ಬರಿಸಿತು. 13 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ಅವರನ್ನು ರವಿ ಬಿಷ್ಣೋಯಿ ಕ್ಲೀನ್ ಬೌಲ್ಡ್ ಮಾಡಿದರು. ಸ್ಟೀವನ್ ಸ್ಮಿತ್ 52 ರನ್ ಗಳಿಸಿದ್ದ ವೇಳೆ ರನೌಟ್ ಆದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೋಶ್ ಇಂಗ್ಲಿಸ್ 47 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. 110(50 ಎಸೆತ) ರನ್ ಗಳಿಸಿದ್ದ ವೇಳೆ ಪ್ರಸಿದ್ಧ್ ಎಸೆದ ಚೆಂಡನ್ನು ಯಶಸ್ವಿ ಜೈಸ್ವಾಲ್ ಕೈಗಿತ್ತು ನಿರ್ಗಮಿಸಿದರು.
ಮಾರ್ಕಸ್ ಸ್ಟೊಯಿನಿಸ್7, ಟಿಮ್ ಡೇವಿಡ್ 19ರನ್ ಗಳಿಸಿದರು. 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿತು. ಮುಕೇಶ್ ಕುಮಾರ್ ಅವರು ಕೊನೆಯ ಓವರ್ ಅನ್ನು ಅದ್ಭುತವಾಗಿ ಎಸೆದರು. 5 ರನ್ ಮಾತ್ರ ಬಿಟ್ಟುಕೊಟ್ಟರು. 4 ಓವರ್ ಎಸೆದು 29 ರನ್ ಮಾತ್ರ ನೀಡಿ ಗಮನ ಸೆಳೆದರು.