Advertisement

ಮಳೆ ನಿಯಮದ “ಮಹಿಮೆ’

06:00 AM Nov 22, 2018 | Team Udayavani |

ಬ್ರಿಸ್ಬೇನ್‌: ಡಕ್‌ವರ್ತ್‌-ಲೂಯಿಸ್‌ ನಿಯಮದ ವಿಪರ್ಯಾಸಕ್ಕೆ ಭಾರತ-ಆಸ್ಟ್ರೇಲಿಯ ನಡುವಿನ ಬ್ರಿಸ್ಬೇನ್‌ ಟಿ20 ಪಂದ್ಯ ಸಾಕ್ಷಿಯಾಗಿದೆ. ಬುಧವಾರ ಇಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಆತಿಥೇಯ ಆಸ್ಟ್ರೇಲಿಯಕ್ಕಿಂತ ಜಾಸ್ತಿ ರನ್‌ ಬಾರಿಸಿಯೂ ಭಾರತ ಸೋಲನುಭವಿಸಿದೆ!

Advertisement

ಆಸ್ಟ್ರೇಲಿಯ ಇನ್ನಿಂಗ್ಸ್‌ ವೇಳೆ ಸುರಿದ ಮಳೆಯಿಂದ ಸುಮಾರು ಮುಕ್ಕಾಲು ಗಂಟೆ ಯಷ್ಟು ಆಟ ನಷ್ಟವಾದ ಬಳಿಕ ಅಳವಡಿ ಸಲಾದ ಡಿ-ಎಲ್‌ ನಿಯಮ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 16.1 ಓವರ್‌ಗಳಲ್ಲಿ 3 ವಿಕೆಟಿಗೆ 153 ರನ್‌ ಮಾಡಿದಾಗ ಮಳೆ ಸುರಿಯಿತು. 45 ನಿಮಿಷಗಳ ಬಳಿಕ ಆಟ ಮುಂದುವರಿದಾಗ ಓವರ್‌ಗಳ ಸಂಖ್ಯೆಯನ್ನು 17ಕ್ಕೆ ಸೀಮಿತಗೊಳಿಸಲಾಯಿತು. ಉಳಿದ 5 ಎಸೆತಗಳನ್ನು ಎದುರಿಸಿದ ಆಸೀಸ್‌ 4 ವಿಕೆಟಿಗೆ 158 ರನ್‌ ಗಳಿಸಿತು. ಆಗ ಭಾರತಕ್ಕೆ 17 ಓವರ್‌ಗಳಲ್ಲಿ 174 ರನ್ನುಗಳ ಗುರಿ ಲಭಿಸಿತು. ಶಿಖರ್‌ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರ ದಿಟ್ಟ ಬ್ಯಾಟಿಂಗ್‌ ಸಾಹಸದ ಹೊರತಾಗಿಯೂ ಭಾರತ 7 ವಿಕೆಟಿಗೆ 169ರ ತನಕ ಬಂದು ಎಡವಿತು. ಹೀಗೆ ಆಸ್ಟ್ರೇಲಿಯಕ್ಕಿಂತ ಜಾಸ್ತಿ ರನ್‌ ಮಾಡಿಯೂ ಟೀಮ್‌ ಇಂಡಿಯಾ ಸೋಲು ಕಾಣಬೇಕಾಯಿತು!

ಧವನ್‌, ಕಾರ್ತಿಕ್‌ ಗರಿಷ್ಠ ಪ್ರಯತ್ನ
ಚೇಸಿಂಗಿಗೆ ಇಳಿದ ಭಾರತ ರೋಹಿತ್‌ ಶರ್ಮ (7), ಕೆ.ಎಲ್‌. ರಾಹುಲ್‌ (13), ವಿರಾಟ್‌ ಕೊಹ್ಲಿ (4) ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. ಆದರೆ ಶಿಖರ್‌ ಧವನ್‌ ಭಾರೀ ಜೋಶ್‌ನಲ್ಲಿದ್ದರು; ಕಾಂಗರೂ ದಾಳಿಯನ್ನು ಚೆಂಡಾಡುತ್ತಲೇ ಹೋದರು. ಧವನ್‌ ಕ್ರೀಸಿನಲ್ಲಿರುವಷ್ಟು ಹೊತ್ತು ಭಾರತದ ರನ್‌ಗತಿಯೂ ರಭಸದಿಂದ ಕೂಡಿತ್ತು. ಧವನ್‌ 12ನೇ ಓವರಿನಲ್ಲಿ, 4ನೇ ವಿಕೆಟ್‌ ರೂಪದಲ್ಲಿ ನಿರ್ಗಮಿಸುವಾಗ ಭಾರತ 105 ರನ್‌ ಗಳಿಸಿತ್ತು. ಧವನ್‌ ಗಳಿಕೆ 42 ಎಸೆತಗಳಿಂದ 76 ರನ್‌. ಸಿಡಿಸಿದ್ದು 10 ಬೌಂಡರಿ ಹಾಗೂ 2 ಸಿಕ್ಸರ್‌.

ಮುಂದಿನದು ದಿನೇಶ್‌ ಕಾರ್ತಿಕ್‌-ರಿಷಬ್‌ ಪಂತ್‌ ಜೋಡಿಯ ಸಾಹಸ. ಒಂದು ಹಂತದಲ್ಲಿ 4 ಓವರ್‌ಗಳಿಂದ 60 ರನ್‌ ತೆಗೆಯಬೇಕಾದ ಭಾರೀ ಒತ್ತಡದಲ್ಲಿದ್ದ ಭಾರತವನ್ನು 3 ಓವರ್‌ಗಳಿಂದ 35 ರನ್‌, 2 ಓವರ್‌ಗಳಿಂದ 24 ರನ್‌, ಕೊನೆಯ ಓವರಿನಲ್ಲಿ 13 ರನ್‌ ಗಳಿಸಬೇಕಾದ ಹಂತಕ್ಕೆ ತಂದು ನಿಲ್ಲಿಸಿದ ಹೆಗ್ಗಳಿಕೆ ಇವರದ್ದು. ಆದರೆ ಅಂತಿಮ ಓವರ್‌ ಎಸೆದ ಮಾರ್ಕಸ್‌ ಸ್ಟೋಯಿನಿಸ್‌ 2 ದೊಡ್ಡ ವಿಕೆಟ್‌ ಕೀಳುವುದರೊಂದಿಗೆ ಪಂದ್ಯವನ್ನು ಪ್ರವಾಸಿಗರ ಕೈಯಿಂದ ಕಸಿದರು.

ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ದಿನೇಶ್‌ ಕಾರ್ತಿಕ್‌ ಕೇವಲ 13 ಎಸೆತಗಳಿಂದ 30 ರನ್‌ ಬಾರಿಸಿದರೆ (4 ಬೌಂಡರಿ, 1 ಸಿಕ್ಸರ್‌), ಪಂತ್‌ 16 ಎಸೆತ ಎದುರಿಸಿ 20 ರನ್‌ ಮಾಡಿದರು (1 ಬೌಂಡರಿ, 1 ಸಿಕ್ಸರ್‌). ಈ ಜೋಡಿಯಿಂದ ಕೇವಲ 24 ಎಸೆತಗಳಿಂದ 51 ರನ್‌ ಹರಿದು ಬಂದಾಗ ಭಾರತದ ಗೆಲುವಿನ ದಟ್ಟ ನಿರೀಕ್ಷೆ ಇತ್ತು. ಆದರೆ ಕಾಂಗರೂಗಳಿಗಿಂತ 11 ರನ್‌ ಹೆಚ್ಚು ಮಾಡಿಯೂ ಸೋಲಬೇಕಾದ ಸಂಕಟ ಟೀಮ್‌ ಇಂಡಿಯಾದ್ದಾಯಿತು.

Advertisement

ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ಮೋಡಿ
ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಆಸ್ಟ್ರೇಲಿಯ ಇದರ ಭರಪೂರ ಲಾಭವೆತ್ತಿತು. ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌ ಕಡೆಯ ಹಂತದಲ್ಲಿ ಮುನ್ನುಗ್ಗಿ ಬಾರಿಸಿದರು. ಈ ಜೋಡಿ 6.1 ಓವರ್‌ಗಳಿಂದ 78 ರನ್‌ ಸೂರೆಗೈದಿತು. ಮ್ಯಾಕ್ಸ್‌ವೆಲ್‌ ಸರ್ವಾಧಿಕ 46 ರನ್‌ ಹೊಡೆದರೆ (24 ಎಸೆತ, 4 ಸಿಕ್ಸರ್‌), ಸ್ಟೋಯಿನಿಸ್‌ 19 ಎಸೆತಗಳಿಂದ ಅಜೇಯ 33 ರನ್‌ ಕೊಡುಗೆ ಸಲ್ಲಿಸಿದರು (3 ಬೌಂಡರಿ, 1 ಸಿಕ್ಸರ್‌). 20 ಎಸೆತಗಳಿಂದ 37 ರನ್‌ ಮಾಡಿದ ಕ್ರಿಸ್‌ ಲಿನ್‌ ಆಸೀಸ್‌ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್‌. ನಾಯಕ ಫಿಂಚ್‌ ಗಳಿಕೆ 27 ರನ್‌. ಭಾರತದ ಬೌಲಿಂಗ್‌ ಸರದಿಯಲ್ಲಿ ಕುಲದೀಪ್‌ ಯಾದವ್‌ ಉತ್ತಮ ನಿಯಂತ್ರಣ ಸಾಧಿಸಿ 24ಕ್ಕೆ 2 ವಿಕೆಟ್‌ ಉರುಳಿಸಿದರು. ಕೃಣಾಲ್‌ ಪಾಂಡ್ಯ 6 ಸಿಕ್ಸರ್‌ ಸಹಿತ 55 ರನ್‌ ನೀಡಿ ದುಬಾರಿ ಬೌಲರ್‌ಗಳ ಯಾದಿಗೆ ಸೇರಿದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಶಿಖರ್‌ ಧವನ್‌ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸರ್ವಾಧಿಕ ರನ್‌ ಪೇರಿಸಿದ ದಾಖಲೆ ಸ್ಥಾಪಿಸಿದರು (16 ಪಂದ್ಯಗಳಿಂದ 648 ರನ್‌). ವಿರಾಟ್‌ ಕೊಹ್ಲಿ 2016ರಲ್ಲಿ 15 ಪಂದ್ಯಗಳಿಂದ 641 ರನ್‌ ಗಳಿಸಿದ ದಾಖಲೆ ಪತನಗೊಂಡಿತು.

ಧವನ್‌ ಆಸ್ಟ್ರೇಲಿಯ ವಿರುದ್ಧ ಸರ್ವಾಧಿಕ ವೈಯಕ್ತಿಕ ರನ್‌ ಹೊಡೆದರು (76). 

ಆಸ್ಟ್ರೇಲಿಯ ಸತತ 4 ಸೋಲು ಗಳ ಬಳಿಕ ಮೊದಲ ಟಿ20 ಗೆಲುವು ಸಾಧಿಸಿತು. ಇನ್ನೊಂ ದೆಡೆ ಭಾರತಕ್ಕೆ ಇದು ಆಸ್ಟ್ರೇಲಿಯ ವಿರುದ್ಧ ಎದು ರಾದ ಸತತ 2ನೇ ಸೋಲು. 

ಆಸ್ಟ್ರೇಲಿಯ ತವರಿನಲ್ಲಿ ಆಡಿದ ಕಳೆದ 6 ಟಿ20 ಪಂದ್ಯಗಳಲ್ಲಿ 5ನೇ ಜಯಭೇರಿ ಮೊಳಗಿಸಿತು.

ಆರನ್‌ ಫಿಂಚ್‌ 2018ರ ಟಿ20 ಪಂದ್ಯಗಳಲ್ಲಿ 500 ರನ್‌ ಪೂರ್ತಿಗೊಳಿಸಿದ ಆಸ್ಟ್ರೇಲಿಯದ ಮೊದಲ ಬ್ಯಾಟ್ಸ್‌ಮನ್‌ ಎನಿಸಿದರು.

ಕೃಣಾಲ್‌ ಪಾಂಡ್ಯ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್‌ ನೀಡಿದ ಭಾರತದ 3ನೇ ಬೌಲರ್‌ ಎನಿಸಿದರು (55 ರನ್‌). ಇವರಿಗಿಂತ ಮುಂದಿರುವವರೆಂದರೆ ಯಜುವೇಂದ್ರ ಚಾಹಲ್‌ (64 ರನ್‌) ಮತ್ತು ಜೋಗಿಂದರ್‌ ಶರ್ಮ (57 ರನ್‌).

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ
ಡಿ’ಆರ್ಸಿ ಶಾರ್ಟ್‌    ಸಿ ಕುಲದೀಪ್‌ ಬಿ ಅಹ್ಮದ್‌    7
ಆರನ್‌ ಫಿಂಚ್‌    ಸಿ ಅಹ್ಮದ್‌ ಬಿ ಕುಲದೀಪ್‌    27
ಕ್ರಿಸ್‌ ಲಿನ್‌    ಸಿ ಮತ್ತು ಬಿ ಕುಲದೀಪ್‌    37
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಭುವನೇಶ್ವರ್‌ ಬಿ ಬುಮ್ರಾ    46
ಮಾರ್ಕಸ್‌ ಸ್ಟೋಯಿನಿಸ್‌    ಔಟಾಗದೆ    33
ಬೆನ್‌ ಮೆಕ್‌ಡರ್ಮಟ್‌    ಔಟಾಗದೆ    2

ಇತರ        6
ಒಟ್ಟು  (17 ಓವರ್‌ಗಳಲ್ಲಿ 4 ವಿಕೆಟಿಗೆ)    158
ವಿಕೆಟ್‌ ಪತನ: 1-24, 2-64, 3-75, 4-153.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        3-0-15-0
ಜಸ್‌ಪ್ರೀತ್‌ ಬುಮ್ರಾ        3-0-21-1
ಖಲೀಲ್‌ ಅಹ್ಮದ್‌        3-0-42-1
ಕುಲದೀಪ್‌ ಯಾದವ್‌        4-0-24-2
ಕೃಣಾಲ್‌ ಪಾಂಡ್ಯ        4-0-55-0

ಭಾರತ
(ಗೆಲುವಿನ ಗುರಿ 174 ರನ್‌)
ರೋಹಿತ್‌ ಶರ್ಮ    ಸಿ ಫಿಂಚ್‌ ಬಿ ಬೆಹ್ರ್ಡಾಫ್ì    7
ಶಿಖರ್‌ ಧವನ್‌   ಸಿ ಬೆಹ್ರ್ಡಾಫ್ì ಬಿ ಸ್ಟಾನ್‌ಲೇಕ್‌    76
ಕೆ.ಎಲ್‌. ರಾಹುಲ್‌    ಸ್ಟಂಪ್ಡ್ ಕ್ಯಾರಿ ಬಿ ಝಂಪ    13
ವಿರಾಟ್‌ ಕೊಹ್ಲಿ    ಸಿ ಲಿನ್‌ ಬಿ ಝಂಪ    4
ರಿಷಬ್‌ ಪಂತ್‌    ಸಿ ಬೆಹ್ರ್ಡಾಫ್ ಬಿ ಟೈ    20
ದಿನೇಶ್‌ ಕಾರ್ತಿಕ್‌  ಸಿ ಬೆಹ್ರ್ಡಾಫ್ì ಬಿ ಸ್ಟೋಯಿನಿಸ್‌    30
ಕೃಣಾಲ್‌ ಪಾಂಡ್ಯ   ಸಿ ಮ್ಯಾಕ್ಸ್‌ವೆಲ್‌ ಬಿ ಸ್ಟೋಯಿನಿಸ್‌    2
ಭುವನೇಶ್ವರ್‌ ಕುಮಾರ್‌    ಔಟಾಗದೆ    1
ಕುಲದೀಪ್‌ ಯಾದವ್‌    ಔಟಾಗದೆ    4

ಇತರ        12
ಒಟ್ಟು  (17 ಓವರ್‌ಗಳಲ್ಲಿ 7 ವಿಕೆಟಿಗೆ)    169
ವಿಕೆಟ್‌ ಪತನ: 1-35, 2-81, 3-94, 4-105, 5-156, 6-163, 7-163.

ಬೌಲಿಂಗ್‌:
ಜಾಸನ್‌ ಬೆಹ್ರ್ಡಾಫ್        4-0-43-1
ಬಿಲ್ಲಿ ಸ್ಟಾನ್‌ಲೇಕ್‌        3-0-27-1
ಆ್ಯಂಡ್ರೂ ಟೈ        3-0-47-1
ಆ್ಯಡಂ ಝಂಪ        4-0-22-2
ಮಾರ್ಕಸ್‌ ಸ್ಟೋಯಿನಿಸ್‌        3-0-27-2

ಪಂದ್ಯಶ್ರೇಷ್ಠ: ಆ್ಯಡಂ ಝಂಪ
2ನೇ ಪಂದ್ಯ: ನ. 23 (ಮೆಲ್ಬರ್ನ್)

Advertisement

Udayavani is now on Telegram. Click here to join our channel and stay updated with the latest news.

Next