ವಾಷಿಂಗ್ಟನ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಯುಎಸ್(USA) ವಿದೇಶಾಂಗ ಸಚಿವ ಆ್ಯಂಟೋನಿ ಬ್ಲಿಂಕೆನ್ ಅವರನ್ನು ಮಂಗಳವಾರ (ಅ1)ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಮೂರನೇ ಅವಧಿಯ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಯುಎಸ್ ರಾಜಧಾನಿಗೆ ಜೈಶಂಕರ್ ಅವರ ಮೊದಲ ಭೇಟಿ ಇದಾಗಿದ್ದು, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ನ ಪ್ರಧಾನ ಕಚೇರಿಯಲ್ಲಿ ಬ್ಲಿಂಕನ್ ಅವರನ್ನು ಭೇಟಿಯಾದರು.
ಸಭೆಯ ನಂತರ ಬ್ಲಿಂಕನ್ ಮಾತನಾಡಿ “ಯುಎಸ್ ಮತ್ತು ಭಾರತ ಒಟ್ಟಾಗಿ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಕೆಲಸ ಮಾಡುತ್ತಿವೆ. ಹವಾಮಾನ ಬಿಕ್ಕಟ್ಟಿನ ಕುರಿತು ನಮ್ಮ ನಿರಂತರ ಸಹಕಾರ ಮತ್ತು ಪ್ರಾದೇಶಿಕ ಭದ್ರತೆ ಮತ್ತು ಸಮೃದ್ಧಿಯನ್ನು ನಾವು ಉತ್ತೇಜಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದೇವೆ” ಎಂದರು.
ಇದೇ ವೇಳೆ ಮಾತನಾಡಿದ ಜೈಶಂಕರ್, ಬ್ಲಿಂಕನ್ ಅವರೊಂದಿಗೆ ಮಾತುಕತೆ ನಡೆಸಿದ್ದು ಸಂತೋಷ ತಂದಿದೆ. ನಮ್ಮ ಚರ್ಚೆಗಳು ಆಳವಾದ ದ್ವಿಪಕ್ಷೀಯ ಸಹಕಾರ, ಪಶ್ಚಿಮ ಏಷ್ಯಾದ ಪರಿಸ್ಥಿತಿ, ಭಾರತೀಯ ಉಪಖಂಡ, ಇಂಡೋ-ಪೆಸಿಫಿಕ್ ಮತ್ತು ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಇತ್ತೀಚೆಗೆ ನಡೆಸಿದ ದ್ವಿಪಕ್ಷೀಯ ಸಭೆಯನ್ನು ಉಲ್ಲೇಖಿಸಿದರು.