Advertisement

ಉಗ್ರರನ್ನು ಮಟ್ಟಹಾಕಿ; 2+2 ಸಚಿವರ ಸಭೆಯಲ್ಲಿ ಪಾಕ್‌ಗೆ ಭಾರತ-ಅಮೆರಿಕ ತಾಕೀತು

12:57 AM Apr 13, 2022 | Team Udayavani |

ವಾಷಿಂಗ್ಟನ್‌: “ನಿಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ನೆಲವನ್ನೂ ಭಯೋತ್ಪಾದನೆಗೆ ಬಳಸಲು ಅನುವು ಮಾಡಿ ಕೊಡಬಾರದು. ಉಗ್ರರ ವಿರುದ್ಧ ಕಠಿನ ಕ್ರಮಕೈಗೊಳ್ಳ ಬೇಕು’ ಎಂದು ಪಾಕಿಸ್ಥಾನಕ್ಕೆ ಭಾರತ ಮತ್ತು ಅಮೆರಿಕ ತಾಕೀತು ಮಾಡಿವೆ.

Advertisement

ವಾಷಿಂಗ್ಟನ್‌ನಲ್ಲಿ ಮಂಗಳವಾರ ನಡೆದ ಭಾರತ- ಅಮೆರಿಕ 2+2 ಸಚಿವರ ಸಭೆಯಲ್ಲಿ ಉಭಯ ದೇಶ ಗಳು ಉಗ್ರರಿಗೆ ಸಂಬಂಧಿಸಿ ಪಾಕ್‌ನ ಮೃದು ಧೋರಣೆ  ಯನ್ನು ಕಟು ಪದಗಳಿಂದ ಖಂಡಿಸಿವೆ. ಕೂಡಲೇ ನಿಮ್ಮ ನೆಲದಲ್ಲಾ ಗುತ್ತಿರುವ ಉಗ್ರವಾದಕ್ಕೆ ಕಡಿವಾಣ ಹಾಕಿ. ಮುಂಬಯಿ ದಾಳಿ, ಪಠಾಣ್‌ಕೋಟ್‌ ದಾಳಿಯ ಸಂಚುಕೋರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದೂ ಪಾಕಿಸ್ಥಾನಕ್ಕೆ ಸೂಚಿಸಲಾಗಿದೆ.

2+2 ಮಾತುಕತೆಯಲ್ಲಿ ಭಾರತದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌.ಜೈ  ಶಂಕರ್‌ ಹಾಗೂ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಮತ್ತು ರಕ್ಷಣ ಸಟಿವ ಲಾಯ್ಡ ಆಸ್ಟಿನ್‌ ಭಾಗಿಯಾಗಿದ್ದರು. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನದ ಚಟುವಟಿಕೆಗಳ ಕುರಿತು ಚರ್ಚಿಸಿದ ಸಚಿವರು, ಪ್ರಾದೇಶಿಕ ಸ್ಥಿರತೆ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಬದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಉಕ್ರೇನ್‌ ಯುದ್ಧ, ಅಫ್ಘಾನ್‌ನ ಪರಿಸ್ಥಿತಿ, ಇಂಡೋ- ಪೆಸಿಫಿಕ್‌ನಲ್ಲಿ ಸಹಕಾರ, ಅಭಿವೃದ್ಧಿ ಅಜೆಂಡಾ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಚರ್ಚೆಯಾದ ವಿಷಯಗಳು: ಚೀನ ಸರಕಾರಿ ಪ್ರಾಯೋ ಜಿತ ಹ್ಯಾಕಿಂಗ್‌ ಚಟುವಟಿಕೆಗಳಿಗೆ ತಡೆ, ಉಭಯ ದೇಶ ಗಳ ನಡುವೆ ಸೇನಾ ಸಹಕಾರ ವೃದ್ಧಿ, ವ್ಯೂಹಾತ್ಮಕ ಪಾಲು ದಾರಿಕೆ, ಮೇಕ್‌ ಇನ್‌ ಇಂಡಿಯಾಗೆ ಒತ್ತು ನೀಡುವ ಕುರಿತೂ ಚರ್ಚಿಸಲಾಗಿದೆ. ಬಾಹ್ಯಾಕಾಶ ಸಂಬಂಧಿ ಒಪ್ಪಂದವೊಂದಕ್ಕೆ ಎರಡೂ ದೇಶಗಳು ಸಹಿ ಮಾಡಿವೆ. ಇದೇ ವೇಳೆ, ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಳವಳಕಾರಿ ಯಾಗಿದ್ದು, ಅದರ ಬಗ್ಗೆ ಅಮೆರಿಕ ಗಮನ ವಹಿಸಿದೆ ಎಂದು ಮಾತುಕತೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ವಿದೇಶಾಂಗ ಸಚಿವ ಬ್ಲಿಂಕನ್‌ ಹೇಳಿದ್ದಾರೆ.

ರಷ್ಯಾದಿಂದ ತೈಲ ಖರೀದಿ: ಅಮೆರಿಕಕ್ಕೆ ಟಾಂಗ್‌!
ಉಕ್ರೇನ್‌ ಯುದ್ಧ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ರಷ್ಯಾಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದರೂ ಭಾರತ ಮಾತ್ರ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಿದೆ. ಈ ಬಗ್ಗೆ ಪ್ರಸ್ತಾವಿಸಿದ ಅಮೆರಿಕದ ಸಚಿವರಿಗೆ ವಿದೇಶಾಂಗ ಸಚಿವ ಜೈಶಂಕರ್‌ ತಕ್ಕ ಉತ್ತರವನ್ನು ನೀಡಿ ಬಾಯಿ ಮುಚ್ಚಿಸಿದ್ದಾರೆ. ರಷ್ಯಾದಿಂದ ಹೆಚ್ಚುವರಿ ತೈಲ ಖರೀದಿಸದಂತೆ ನಾವು ಭಾರತಕ್ಕೆ ಮನವಿ ಮಾಡುತ್ತೇವೆ ಎಂದು ಅಮೆರಿಕದ ಸಚಿವ ಬ್ಲಿಂಕನ್‌ ಹೇಳಿದಾಗ, ಪ್ರತಿಕ್ರಿಯಿಸಿದ ಜೈಶಂಕರ್‌, “ತೈಲ ಖರೀದಿ ವಿಚಾರದಲ್ಲಿ ನೀವು ನಮಗಿಂತಲೂ ಮೊದಲು ನಿಮ್ಮ ಮಿತ್ರರಾಷ್ಟ್ರ ಯುರೋಪ್‌ನತ್ತ ಗಮನಹರಿಸಬೇಕು. ಏಕೆಂದರೆ ಭಾರತವು ಒಂದು ತಿಂಗಳಲ್ಲಿ ರಷ್ಯಾದಿಂದ ಖರೀದಿಸುವ ಒಟ್ಟಾರೆ ತೈಲವು, ಯುರೋಪ್‌ ಒಂದು ಮಧ್ಯಾಹ್ನಕ್ಕೆ ತರಿಸುವ ತೈಲಕ್ಕಿಂತಲೂ ಕಡಿಮೆ’ ಎಂದಿದ್ದಾರೆ. ಜೈಶಂಕರ್‌ ಅವರ ಈ ಹೇಳಿಕೆಗೆ ಭಾರತದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು, “ಸೂಪರ್ಬ್’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ರಷ್ಯಾಗೆ ರಫ್ತು ಹೆಚ್ಚಳ?: ಭಾರತವು ರಷ್ಯಾಕ್ಕೆ ಹೆಚ್ಚುವರಿ 2 ಶತಕೋಟಿ ಡಾಲರ್‌ ಮೊತ್ತದ ಉತ್ಪನ್ನಗಳು ರಫ್ತು ಮಾಡಲು ಚಿಂತನೆ ನಡೆಸಿದೆ. ಸ್ಥಳೀಯ ಕರೆನ್ಸಿಗಳಲ್ಲೇ ಪಾವತಿ ವ್ಯವಸ್ಥೆ ಮಾಡಿಕೊಳ್ಳಲೂ ಭಾರತ ಮತ್ತು ಮಾಸ್ಕೋ ನಡುವೆ ಮಾತುಕತೆ ನಡೆಯುತ್ತಿದೆ. ಭಾರತದಲ್ಲಿ ತಯಾರಾದ ಹಲವು ಉತ್ಪನ್ನಗಳಿಗೆ ರಷ್ಯಾದಲ್ಲಿ ಮುಕ್ತ ಮಾರುಕಟ್ಟೆ ಒದಗಿಸಬೇಕು ಎಂಬ ಷರತ್ತನ್ನೂ ಭಾರತ ವಿಧಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next