Advertisement

ಭಾರತಕ್ಕೆ ತುರ್ತಾಗಿ ಬೇಕು 3.8 ಕೋಟಿ ಮಾಸ್ಕ್

03:54 PM Mar 31, 2020 | Suhan S |

ದಿಲ್ಲಿ : ಕೋವಿಡ್ 19  ವೈರಸ್‌ ಪ್ರಕರಣಗಳು ಏರುತ್ತಿದ್ದಂತೆ ಭಾರತಕ್ಕೆ ಸವಾಲುಗಳ ಬೆಟ್ಟವೇ ಎದುರು ಬಂದು ನಿಂತಿದೆ. ಒಂದು ಬದಿಯಲ್ಲಿ ವೈರಸ್‌ ಟೆಸ್ಟಿಂಗ್‌, ಇನ್ನೊಂದು ಬದಿ ಆಸ್ಪತ್ರೆ ವ್ಯವಸ್ಥೆ, ವೆಂಟಿಲೇಟರ್‌, ಮಾಸ್ಕ್, ವೈದ್ಯರ ರಕ್ಷಣೆಗಿರುವ ಮಾಸ್ಕ್, ರಕ್ಷಣಾ ಅಂಗಿ, ಗ್ಲೌಸ್‌ ಹೀಗೆ ಸರಮಾಲೆಯೇ ಇದೆ.

Advertisement

ಈಗಿನ ಪರಿಸ್ಥಿತಿಯಲ್ಲಿ ಒಂದು ಅಂದಾಜಿನ ಪ್ರಕಾರ ಭಾರತಕ್ಕೆ 3.8 ಕೋಟಿ ಮಾಸ್ಕ್ಗಳು ತುರ್ತು ಅಗತ್ಯವಿದೆ. ಹಾಗೆಯೇ 62 ಲಕ್ಷ ರಕ್ಷಣಾ ಅಂಗಿಗಳು ಬೇಕಾಗಿವೆ. ಪ್ರಕರಣಗಳು ಹೆಚ್ಚಾದಂತೆ ಇವುಗಳ ಬೇಡಿಕೆಯೂ ಹೆಚ್ಚಾಗಲಿವೆ. ವರದಿ ಯೊಂದು ಈ ಕುರಿತ ಸಂಕಷ್ಟಗಳನ್ನೆ ಬಿಚ್ಚಿಟ್ಟಿದೆ. ಈಗಾಗಲೇ ಸರಕಾರ ಈ ಸಂಬಂಧ ಕಂಪೆನಿಗಳನ್ನು ಸಂಪರ್ಕಿಸಿದೆ.

ಸುಮಾರು 730 ಕಂಪೆನಿಗಳಿಗೆ ಬೇಡಿಕೆ ಹೋಗಿದ್ದು, ಐಸಿಯು ಮಾನಿಟರ್‌ಗಳು ರಕ್ಷಣಾ ಅಂಗಿಗಳು, ಮಾಸ್ಕ್, ಟೆಸ್ಟಿಂಗ್‌ ಕಿಟ್‌ಗಳು ಇತ್ಯಾದಿ ಪೂರೈಸಲು ಬೇಡಿಕೆ ಇಡಲಾಗಿದೆ. ಇದಕ್ಕೆ ಪೂರಕವಾಗಿ 319 ಕಂಪೆನಿಗಳು ಸರಕಾರದ ಬೇಡಿಕೆಗೆ ಪ್ರತಿಕ್ರಿಯಿಸಿವೆ. ಇದೇ ವೇಳೆ ರೋಗಿಗಳ ಸಂಖ್ಯೆ ಹೆಚ್ಚಿದಂತೆ ವೈದ್ಯಕೀಯ ವ್ಯವಸ್ಥೆಯೇ ಮುರಿದು ಬೀಳುವ ಆತಂಕವೂ ದಟ್ಟವಾಗಿ ಕಾಡಿದೆ. ಸದ್ಯ 91 ಲಕ್ಷ ಮಾಸ್ಕ್ಗಳನ್ನು ಪೂರೈಸುವಷ್ಟರ ಮಟ್ಟಿಗೆ ಭಾರತದ ಕಂಪೆನಿಗಳು ಸಮರ್ಥವಾಗಿವೆ ಎಂದು ಹೇಳಲಾಗಿದೆ.

ಹಾಗೆಯೇ 8 ಲಕ್ಷ ರಕ್ಷಣಾ ಅಂಗಿಗಳನ್ನು ಪೂರೈಸಬಹುದು. ಇದು ಸದ್ಯದ ಸ್ಥಿತಿಗೆ ಸಾಕು. ಆದರೆ ದಿನಗಳು ಕಳೆದಂತೆ, ಪ್ರಕರಣಗಳು ಹೆಚ್ಚಿದಂತೆ ಏನೇನೂ ಸಾಲದು. ಆದರೆ ಸದ್ಯ ಯಾವುದೇ ಕಂಪೆನಿಗಳಿಗೆ ನಿರ್ದಿಷ್ಟ ಸಮಯದೊಳಗೆ ಪೂರೈಸಬೇಕು ಎಂದೇನೂ ಸರಕಾರ ಹೇಳಿಲ್ಲ.

ಸದ್ಯ ಈ ಲೆಕ್ಕಾಚಾರಗಳೆಲ್ಲ ಕೇಂದ್ರ ಸರಕಾರದ್ದಾದರೆ, ರಾಜ್ಯಗಳು ಎಷ್ಟು ಮಾಸ್ಕ್ಗಳು ಮತ್ತು ರಕ್ಷಣಾ ಅಂಗಿಗಳನ್ನು ಬಯಸುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ನೈಜ ಸಂದರ್ಭಗಳಲ್ಲಿ ಇದರ ಬೇಡಿಕೆ ಎರಡರಷ್ಟಾಗಬಹುದು ಎಂದು ಈ ಬಗ್ಗೆ ಅಂದಾಜು ಲೆಕ್ಕ ಹಾಕಿದ ಇನ್ವೆಸ್ಟ್‌ ಇಂಡಿಯಾ ಸಂಸ್ಥೆ ಹೇಳುತ್ತದೆ. ಆದ್ದರಿಂದ ಸದ್ಯ ಚೀನ ಮತ್ತು ದ.ಕೊರಿಯಾದತ್ತ ಸರಕಾರ ಮತ್ತು ಕಂಪೆನಿಗಳು ನೋಡುತ್ತಿವೆ. ಈಗಾಗಲೇ ಕೆಲವು ವೈದ್ಯರು ಸಾಕಷ್ಟು ಸಲಕರಣೆಗಳು ಸಿಗುತ್ತಿಲ್ಲ ಎಂದು ದೂರುತ್ತಿರುವುದು ಕೇಳಿಬರುತ್ತಿದೆ.

Advertisement

ವಿಶ್ವಾದ್ಯಂತ ರೋಗಾಣು ವ್ಯಾಪಕವಾಗಿ ಹಬ್ಬಿರುವುದರಿಂದ ಕಡಿಮೆ ಸಮಯದಲ್ಲಿ ಗರಿಷ್ಠ ಪೂರೈಕೆಯಾಗಬೇಕಾಗಿದೆ. ಅದಾಗದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗಬಹುದು. ರೋಗಿಗಳಿಗೆ ಚಿಕಿತ್ಸೆ ನೀಡುವ ತುರ್ತು ಇರುವುದರಿಂದ ವೈದ್ಯರು ರಕ್ಷಣಾ ವ್ಯವಸ್ಥೆ ಇಲ್ಲದೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯ ಉಂಟಾಗಲಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next