ಬೆಂಗಳೂರು: ಈ ಲೋಕಸಭಾ ಚುನಾವಣೆಯು ಕೋಮುವಾದಿ ಸರ್ವಾಧಿಕಾರ ವರ್ಸಸ್ ಪ್ರಜಾಪ್ರಭುತ್ವದ ನಡುವಿನ ಹೋರಾಟವಾಗಿದೆ. ಇದರ ಉದ್ದೇಶ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಒಟ್ಟಾಗಿ ಎನ್‌ಡಿಎ ಸೋಲಿಸುವುದಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟ ಭಾಗವಾಗಿ ಆಮ್ ಆದ್ಮಿ ಪಕ್ಷ, ಸಿಪಿಐ, ಸಿಪಿಎಂ ಸೇರಿದಂತೆ ಸುಮಾರು ಹತ್ತು ವಿವಿಧ ಪಕ್ಷಗಳ ಅಧ್ಯಕ್ಷರುಗಳೊಂದಿಗೆ ಒಗ್ಗಟ್ಟಿನ ಮಂತ್ರ ಪಠಿಸಿದ ಅವರು, ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾವೆಲ್ಲ ಈ ಹಿಂದೆ ಅನೇಕ ಚುನಾವಣೆಗಳನ್ನು ಬೇರೆ, ಬೇರೆಯಾಗಿ ಎದುರಿಸಿದ್ದೇವೆ. ಆದರೆ ಇಂದು ದೇಶದ ಉಳಿವಿಗೆ ಒಂದಾಗಿದ್ದೇವೆ. ಬೂತ್ ಮಟ್ಟದಿಂದ ಒಟ್ಟಿಗೆ ಕೆಲಸ ಮಾಡುತ್ತೇವೆ. ಜತೆಗೂಡಿ ಕೆಲಸ ಮಾಡಿದರೆ ಯಶಸ್ಸು. ಆದ್ದರಿಂದ ಚಿಕ್ಕ, ದೊಡ್ಡ ಪಕ್ಷ ಎನ್ನದೆ ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಇದಕ್ಕಾಗಿ ಶೀಘ್ರ ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ಪಕ್ಷಗಳದ್ದೇ ಒಂದು ಸಮನ್ವಯ ಸಮಿತಿ ರಚಿಸಲಾಗುವುದು. ಅದರಲ್ಲಿ ಹತ್ತಕ್ಕೂ ಅಧಿಕ ಪಕ್ಷಗಳ ಪದಾಧಿಕಾರಿಗಳು ಇರಲಿದ್ದಾರೆ. ನಾಲ್ಕೈದು ದಿನಕ್ಕೊಂದು ಸಭೆ ನಡೆಸಿ, ಚುನಾವಣೆ ರೂಪುರೇಷೆ, ತಂತ್ರಗಾರಿಕೆಗಳನ್ನು ಈ ಸಮಿತಿಯಲ್ಲಿ ಸಿದ್ಧಪಡಿಸಲಾಗುವುದು ಎಂದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸಚಿವ ಡಾ| ಎಂ.ಸಿ. ಸುಧಾಕರ್, ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಬಸವರಾಜು, ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಇನಾಂದಾರ್, ಸಿಪಿಐ ಎಂಎಲ್ ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್ ರೊಜೆರಿಯೊ, ರಾಷ್ಟ್ರೀಯ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಯಾಕುಬ್ ಗುಲ್ವಾಡಿ, ಫಾರ್ವರ್ಡ್ ಬ್ಲಾಕ್ ರಾಜ್ಯ ಘಟಕದ ಅಧ್ಯಕ್ಷ ಶಿವಶಂಕರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಭುತ್ವದ ಬಂಧನ
ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕೇಂದ್ರ ಸರಕಾರ ಬಂಧಿಸಿದ್ದು ದಿಲ್ಲಿ ಮುಖ್ಯಮಂತ್ರಿಯನ್ನಲ್ಲ; ದೇಶದ ಪ್ರಜಾಪ್ರಭುತ್ವವನ್ನು. ಚುನಾವಣ ಬಾಂಡ್ ಯೋಜನೆಯಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ಬಂದ ದೇಣಿಗೆಗೆ ಮಾತ್ರ ನಿರ್ಬಂಧ ಹೇರಿದೆ. ಈ ಮೂಲಕ ದೇಣಿಗೆ ಫ್ರೀಜ್ ಮಾಡಿಲ್ಲ; ಸಂವಿಧಾನವನ್ನು ನಿರ್ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.