Advertisement

ಸದೃಢ ಆರ್ಥಿಕತೆಯತ್ತ ಭಾರತ: ಮುಂದಿದೆ ಭಾರೀ ಸವಾಲು

10:29 PM Jun 13, 2023 | Team Udayavani |

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ವಿಶ್ವದಲ್ಲಿಯೇ ಅತ್ಯಧಿಕ ಬೆಳವಣಿಗೆ ದಾಖಲಿಸುವ ಮೂಲಕ ಆರ್ಥಿಕ ದಿಗ್ಗಜ ರಾಷ್ಟ್ರಗಳನ್ನು ಹಿಮ್ಮೆಟ್ಟಲಿದೆ. ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಅಮೆರಿಕ, ಬ್ರಿಟನ್‌, ಚೀನಾ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಭಾರತ ಮಾತ್ರ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿದ್ದು, ಇದೇ ಪರಿಸ್ಥಿತಿ ಹಾಲಿ ಹಣಕಾಸು ವರ್ಷಾಂತ್ಯದವರೆಗೂ ಮುಂದುವರಿಯಲಿದೆ ಮತ್ತು ತನ್ನ ಮುಂಚೂಣಿಯನ್ನು ಕಾಯ್ದುಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿರುವ ತನ್ನ ಎಕಾನಮಿಕ್‌ ಔಟ್‌ಲುಕ್‌ ವರದಿಯಲ್ಲಿ ತಿಳಿಸಿದೆ. ಇದು ಭಾರತದ ಪಾಲಿಗೆ ಸಂತಸದ ಮತ್ತು ಆಶಾದಾಯಕ ವರದಿಯಾಗಿದೆ.

Advertisement

ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತ, ರಷ್ಯಾ-ಉಕ್ರೇನ್‌ ಸಮರದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳಿಂದಾಗಿ ಆರ್ಥಿಕವಾಗಿ ಹಿನ್ನಡೆಯಲ್ಲಿವೆ. ಐಎಂಎಫ್ ವರದಿಯ ಪ್ರಕಾರ ಭಾರತದ ಜಿಡಿಪಿ ಪ್ರಸಕ್ತ ಸಾಲಿನಲ್ಲಿ ಶೇ.5.9ರಷ್ಟು ಬೆಳವಣಿಗೆ ಹೊಂದಲಿದೆ. ಇದು ಇಡೀ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಇದೇ ವೇಳೆ ಭಾರತದ ಚಿಲ್ಲರೆ ಹಣದುಬ್ಬರ ದರವು ಕಳೆದ ವರ್ಷದ ಶೇ.6.7ರಿಂದ ಶೇ.4.9ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಏತನ್ಮಧ್ಯೆ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಮೇ ತಿಂಗಳಲ್ಲಿ ಶೇ.4.25ಕ್ಕೆ ಇಳಿಕೆ ಕಂಡಿದೆ. ಇದು ಕಳೆದೆರಡು ವರ್ಷಗಳ ಅವಧಿಯಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣದ ಹಣದುಬ್ಬರವಾಗಿದೆ. ಆಹಾರ ಉತ್ಪನ್ನಗಳು ಮತ್ತು ಇಂಧನ ಬೆಲೆಗಳಲ್ಲಿ ಇಳಿಕೆಯಾಗಿರುವುದೇ ಹಣದುಬ್ಬರ ಕಡಿಮೆಯಾಗಲು ಪ್ರಮುಖ ಕಾರಣ. ಇದೇ ವೇಳೆ ದೇಶದಲ್ಲಿ ಕೈಗಾರಿಕಾ ಉತ್ಪಾದನೆ ಶೇ.4.2ಕ್ಕೆ ಹೆಚ್ಚಳವಾಗಿದೆ. ಈ ಎಲ್ಲ ಬೆಳವಣಿಗೆಗಳು ದೇಶದ ಆರ್ಥಿಕತೆ ಮತ್ತಷ್ಟು ಸದೃಢಗೊಳ್ಳಲು ಪೂರಕವಾಗಿವೆ.

ಸದ್ಯ ಜಾಗತಿಕ ಆರ್ಥಿಕ ವ್ಯವಸ್ಥೆ ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕಿಕೊಂಡು ಹೆಣಗಾಡುತ್ತಿದೆ. ಬಲಾಡ್ಯ ರಾಷ್ಟ್ರಗಳೆಲ್ಲವೂ ಈ ಸಂಕಷ್ಟದಿಂದ ಹೊರಬರಲು ವಿವಿಧ ತೆರನಾದ ಕಸರತ್ತುಗಳನ್ನು ನಡೆಸುತ್ತಿವೆಯಾದರೂ ಅವು ಯಾವುವೂ ನಿರೀಕ್ಷಿತ ಫ‌ಲಿತಾಂಶಗಳನ್ನು ತಂದುಕೊಡುತ್ತಿಲ್ಲ. ಇವೆಲ್ಲದರ ಹೊರತಾಗಿಯೂ ಭಾರತ ಆರ್ಥಿಕವಾಗಿ ಕಠಿಣ ಮತ್ತು ಸುಧಾರಣಾ ನೀತಿಗಳನ್ನು ಅನುಸರಿಸುವ ಮೂಲಕ ಈ ಸಂಕಷ್ಟದಿಂದ ಪಾರಾಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿರಿಸಿದ ಪರಿಣಾಮ ಆರ್ಥಿಕವಾಗಿ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ. ಅಲ್ಲದೆ ಆರ್ಥಿಕವಾಗಿ ಚೇತರಿಕೆ ಕಂಡರೂ ತನ್ನ ಧೋರಣೆಗಳಲ್ಲಿ ಹೆಚ್ಚಿನ ರಾಜಿ ಮಾಡಿಕೊಳ್ಳದಿದ್ದುದರ ಫ‌ಲಿತಾಂಶ ಈಗ ಗೋಚರಿಸಲಾರಂಭಿಸಿದೆ.

ಹಾಗೆಂದು ಭಾರತ ಐಎಂಎಫ್ನ ಈ ವರದಿಯಿಂದ ನಿರಾಳವಾಗುವಂತಿಲ್ಲ. ಭಾರತ ಕೃಷಿ ಬೆಳೆಗಳಿಗೆ ಮುಂಗಾರನ್ನೇ ಅವಲಂಬಿಸಿರುವುದರಿಂದ ಈ ಬಾರಿ ಒಂದಿಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ನಿಗದಿತ ಮುಂಗಾರು ಋತುವಿನಲ್ಲಿ 15 ದಿನಗಳು ಕಳೆದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಮುಂಗಾರು ತೀವ್ರತೆ ಕಂಡುಕೊಳ್ಳಲು ಇನ್ನು ಮೂರ್‍ನಾಲ್ಕು ವಾರಗಳು ಬೇಕಾದೀತು ಎಂದು ಖಾಸಗಿ ಹವಾಮಾನ ಸಂಸ್ಥೆ ತಿಳಿಸಿದ್ದು ರೈತಾಪಿ ವರ್ಗವನ್ನು ಆತಂಕಕ್ಕೀಡು ಮಾಡಿದೆ. ಮಳೆ ಕೊರತೆಯಾದಲ್ಲಿ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದ್ದು ಸಹಜವಾಗಿಯೇ ಇದು ಇತರ ಕ್ಷೇತ್ರಗಳ ಮೇಲೂ ಪ್ರಭಾವವನ್ನು ಬೀರಲಿದೆ. ಇವೆಲ್ಲವೂ ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಮತ್ತು ಆರ್‌ಬಿಐ ಈ ಎಲ್ಲ ಬೆಳವಣಿಗೆಗಳ ಮೇಲೆ ನಿಗಾ ಇರಿಸಿ ರಕ್ಷಣಾತ್ಮಕ ನಡೆಯನ್ನು ಅನುಸರಿಸುವುದು ಅತಿ ಮುಖ್ಯ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next