Advertisement

ಭಾರತದ ಆಸ್ಟ್ರೇಲಿಯ ಕ್ರಿಕೆಟ್‌ ಪ್ರವಾಸ ವೇಳಾಪಟ್ಟಿ ಪ್ರಕಟ

10:40 AM May 01, 2018 | |

ಮೆಲ್ಬರ್ನ್: ವರ್ಷಾಂತ್ಯದ ಭಾರತ-ಆಸ್ಟ್ರೇಲಿಯ ನಡುವಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು “ಕ್ರಿಕೆಟ್‌ ಆಸ್ಟ್ರೇಲಿಯ’ ಸೋಮವಾರ ಪ್ರಕಟಿಸಿದೆ. 2018-19ರ ಋತುವಿನ ಈ ಪ್ರವಾಸದ ವೇಳೆ ಭಾರತ 3 ಟಿ20, 4 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. 

Advertisement

ನ. 21ರಂದು ಬ್ರಿಸ್ಬೇನ್‌ನಲ್ಲಿ ನಡೆಯುವ ಟಿ20 ಪಂದ್ಯದೊಂದಿಗೆ ಈ ಬಹು ನಿರೀಕ್ಷಿತ ಕ್ರಿಕೆಟ್‌ ಸರಣಿ ಆರಂಭವಾಗಲಿದ್ದು, ಬಳಿಕ ಟೆಸ್ಟ್‌ ಸರಣಿ ನಡೆಯಲಿದೆ. ಜ. 18ರ ಮೆಲ್ಬರ್ನ್ ಏಕದಿನ ಪಂದ್ಯದೊಂದಿಗೆ ಸರಣಿ ಕೊನೆಗೊಳ್ಳಲಿದೆ. ಟಿ 20 ಪಂದ್ಯಗಳು ಬ್ರಿಸ್ಬೇನ್‌ (ನ. 21), ಮೆಲ್ಬರ್ನ್ (ನ. 23) ಮತ್ತು ಸಿಡ್ನಿಯಲ್ಲಿ (ನ. 25) ನಡೆಯಲಿವೆ. ಟೆಸ್ಟ್‌ ಸರಣಿಯ ತಾಣಗಳೆಂದರೆ ಅಡಿಲೇಡ್‌ (ಡಿ. 6-10), ಪರ್ತ್‌ (ಡಿ. 14-18), ಮೆಲ್ಬರ್ನ್ (ಡಿ. 26-30) ಮತ್ತು ಸಿಡ್ನಿ (ಜ. 3-7). ಏಕದಿನ ಪಂದ್ಯಗಳು ಸಿಡ್ನಿ (ಜ. 12), ಅಡಿಲೇಡ್‌ (ಜ. 15) ಮತ್ತು ಮೆಲ್ಬರ್ನ್ನಲ್ಲಿ (ಜ. 18) ಸಾಗಲಿವೆ.

ನಡೆದೀತೇ ಡೇ-ನೈಟ್‌ ಟೆಸ್ಟ್‌?
ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಡಿ. 6ರಿಂದ “ಅಡಿಲೇಡ್‌ ಓವಲ್‌’ನಲ್ಲಿ ಆರಂಭವಾಗಲಿದ್ದು, ಇದು ಡೇ-ನೈಟ್‌ ಟೆಸ್ಟ್‌ ಪಂದ್ಯವೋ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಇದು ಹಗಲು-ರಾತ್ರಿ ಪಂದ್ಯವೆಂದು ಸುದ್ದಿಯಾಗಿತ್ತಾದರೂ ಬಿಸಿಸಿಐ ಇದಕ್ಕಿನ್ನೂ ಅಧಿಕೃತ ಮುದ್ರೆ ಒತ್ತಿಲ್ಲ. 

“ಭಾರತದ ವಿರುದ್ಧ ಅಡಿಲೇಡ್‌ನ‌ಲ್ಲಿ ಡೇ-ನೈಟ್‌ ಟೆಸ್ಟ್‌ ಆಡಬೇಕೆಂಬುದು ನಮ್ಮ ಬಯಕೆ. ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಲಭಿಸಲಿದೆ…’ ಎಂದು ಕ್ರಿಕೆಟ್‌ ಆಸ್ಟ್ರೇಲಿಯದ ಸಿಇಒ ಜೇಮ್ಸ್‌ ಸದರ್‌ಲ್ಯಾಂಡ್‌ ಹೇಳಿದ್ದಾರೆ. ಆದರೆ 60 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ಪರ್ತ್‌ನ ನೂತನ ಸ್ಟೇಡಿಯಂ ಉದ್ಘಾಟನಾ ಟೆಸ್ಟ್‌ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಮೆಲ್ಬರ್ನ್ನಲ್ಲಿ ಎಂದಿನಂತೆ “ಬಾಕ್ಸಿಂಗ್‌ ಡೇ ಟೆಸ್ಟ್‌’ ಹಾಗೂ ಸಿಡ್ನಿಯಲ್ಲಿ “ನ್ಯೂ ಇಯರ್‌ ಟೆಸ್ಟ್‌’ ನಡೆಯಲಿದೆ.

ಮೊದಲ ಹಗಲು-ರಾತ್ರಿ ಟೆಸ್ಟ್‌
ಈವರೆಗೆ ಡೇ-ನೈಟ್‌ ಟೆಸ್ಟ್‌  ಪಂದ್ಯ ಆಡದಿರುವ ರಾಷ್ಟ್ರಗಳಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೆ. ಆದರೆ ಅಕ್ಟೋಬರ್‌ನಲ್ಲಿ ನಡೆಯುವ ವೆಸ್ಟ್‌ ಇಂಡೀಸ್‌ ಎದುರಿನ ಸರಣಿ ವೇಳೆ ಭಾರತ ತನ್ನ ಮೊದಲ ಹಗಲು- ರಾತ್ರಿ ಟೆಸ್ಟ್‌ ಆಡುವ ಸಾಧ್ಯತೆಯೊಂದು ಗೋಚರಿಸು ತ್ತಿದೆ. ಇನ್ನೊಂದೆಡೆ ಆಸ್ಟ್ರೇಲಿಯ ಈವರೆಗೆ 4 “ಪಿಂಕ್‌ ಬಾಲ್‌’ ಟೆಸ್ಟ್‌ಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next