Advertisement
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಿಂದಲೇ ದೇಶದ ಎಲ್ಲ ರಾಜ್ಯಪಾಲರು ಮತ್ತು ಶಿಕ್ಷಣ ಸಚಿವರ ಎರಡು ದಿನಗಳ ಆನ್ಲೈನ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಸಂವಾದ ನಡೆಸಿದ ಮೋದಿ, ಶಿಕ್ಷಣ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಹೆಚ್ಚು ಸಹಕಾರಿಯಾಗಲಿದೆ ಎಂದರು.
Related Articles
Advertisement
ಶಿಕ್ಷಣ ನೀತಿ ಓದು, ಬರೆಯುವುದರ ಮೇಲೆ ನಿಂತಿಲ್ಲ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ. ವಿದ್ಯಾರ್ಥಿಗಳ ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತವಾರಬಾರದು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ ಎಂದರು.
ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ಪೂರಕವಾದ ಎಲ್ಲ ಅಂಶಗಳೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವೆ ಹಾಗೂ ದೇಶದ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿಯನ್ನು ನೀತಿ ಹೊಂದಿದೆ ಎಂದು ಹೇಳಿದರು.
ಹೊಸ ದಿಕ್ಸೂಚಿ: ಶಿಕ್ಷಣ ನೀತಿಯೂ ಇಡೀ ದೇಶಕ್ಕೆ ಹೊಸ ದಿಕ್ಸೂಚಿ ನೀಡುವ ಶಕ್ತಿ ಹೊಂದಿದೆ ಎಂದ ಪ್ರಧಾನಿ, ವಿವಿಧ ಕ್ಷೇತ್ರಗಳೂ ಸೇರಿ ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ದೇಶದ ಯುವಜನತೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿ ದಾರಿ ತೋರಿಸುತ್ತದೆ ಎಂದರು.
ದೇಶಾದ್ಯಂತ ಶಿಕ್ಷಣ ನೀತಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಸ್ವಾಗತ ವ್ಯಕ್ತವಾಗಿದೆ ಎಂಬುದನ್ನು ನಾನು ಬಲ್ಲೆ. ಹೀಗಾಗಿ ದೇಶದ ಎಲ್ಲ ನಿರೀಕ್ಷೆಗಳಿಗೆ ಶಿಕ್ಷಣ ನೀತಿಯಲ್ಲಿ ಉತ್ತರವಿದೆ. ಆದ್ದರಿಂದ ಈ ನೀತಿಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ರಚನಾತ್ಮಕವಾಗಿ ಕಟಿಬದ್ಧವಾಗಿ ಎಲ್ಲ ರಾಜ್ಯಗಳು ಜಾರಿ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.