ನೋಯ್ಡಾ: ಬಂಜರು ಭೂಮಿಯನ್ನು ಫಲವತ್ತಾಗಿಸುವ ಗುರಿಯನ್ನು ಭಾರತ ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬಂಜರು ತಡೆಗೆ ವಿಶ್ವಸಂಸ್ಥೆಯ ಸಮಿತಿಯ (ಯುಎನ್‌ಸಿಸಿಡಿ) 14 ದೇಶಗಳ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ಮೋದಿ, ‘ಸದ್ಯ 2.1 ಹೆಕ್ಟೇರ್ ಭೂಮಿಯನ್ನು ಫಲವತ್ತಾಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, 2030ರ ವೇಳೆಗೆ 2.6 ಲಕ್ಷ ಹೆಕ್ಟೇರ್ ಭೂಮಿಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.
ಅಲ್ಲದೆ, ಭೂಮಿ ಬರಡಾಗುವಿಕೆಯನ್ನು ತಡೆಯದಿದ್ದರೆ, ಇನ್ನು ಕೆಲವು ವರ್ಷಗಳಲ್ಲಿ ಭೂಮಿಯನ್ನು ಫಲವತ್ತಾಗಿಸಲು ಸಾಧ್ಯವಾಗದ ಸ್ಥಿತಿ ತಲುಪುತ್ತದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದರ ಜೊತೆಗೆ, ಭೂಮಿಯೂ ಅನುತ್ಪಾದಕವಾಗುತ್ತದೆ. ಕೃಷಿಗೆ ಭೂಮಿಯನ್ನು ಬಳಸಲೂ ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ಲಾಸ್ಟಿಕ್‌ಗೆ ಗುಡ್‌ಬೈ ಹೇಳ್ಳೋಣ: ಇದೇ ವೇಳೆಸ ಬಳಸಿ ಬಿಸಾಡುವ ಪ್ಲಾಸ್ಟಿಕ್‌ಗೆ ವಿಶ್ವವು ಗುಡ್ ಬೈ ಹೇಳುವ ಸಮಯ ಇದು ಎಂದು ಮೋದಿ ಹೇಳಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಇಂಥ ಪ್ಲಾಸ್ಟಿಕ್ ಬಳಕೆಗೆ ಅಂತ್ಯ ಹಾಡಲಿದೆ ಎಂದಿದ್ದಾರೆ. ವಿಶ್ವವೂ ಕೂಡ ಇದೇ ನಡೆಯನ್ನು ಅನುಸರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭಾರತವು ವಿಶ್ವಕ್ಕೇ ದಿಕ್ಕು ತೋರಿಸಿದೆ: ಬಂಜರು ಭೂಮಿಯನ್ನು ಫಲವತ್ತಾಗಿಸುವ ಗುರಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಭಾರತವು ಇಡೀ ವಿಶ್ವಕ್ಕೇ ಹೊಸ ದಿಕ್ಕು ತೋರಿಸಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಪ್ರತಿಯೊಂದು ದೇಶ ಕೂಡ ಇದೇ ರೀತಿ ಟಾರ್ಗೆಟ್ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆಯಿಟ್ಟರೆ, ಇಡೀ ಮನುಕುಲಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಅದೊಂದು ಐತಿಹಾಸಿಕ ಸಾಧನೆಯೂ ಆಗುತ್ತದೆ ಎಂದಿದ್ದಾರೆ ಜಾವಡೇಕರ್.