ಹೊಸದಿಲ್ಲಿ: ಇದೇ ತಿಂಗಳ 16ರಂದು ದಕ್ಷಿಣ ಆಫ್ರಿಕಾ ಪ್ರವಾಸ ಹೊರಡಲಿರುವ ಭಾರತ ಕ್ರಿಕೆಟ್ ತಂಡ, ಅಲ್ಲಿ 44 ದಿನಗಳ ಕಾಲ ಜೈವಿಕ ಸುರಕ್ಷ ವಲಯದಲ್ಲಿ ಕಳೆಯಲಿದೆ.
ಭಾರತದ ಟೆಸ್ಟ್ ತಂಡದ ಸದಸ್ಯರು, ಸಹಾಯಕ ಸಿಬಂದಿಯೆಲ್ಲ ಡಿ. 12 ರಂದು ಮುಂಬಯಿಗೆ ಆಗಮಿಸಿ 4 ದಿನಗಳ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಬಳಿಕ ಡಿ. 16ರಂದು ಜೊಹಾನ್ಸ್ ಬರ್ಗ್‌ಗೆ ವಿಮಾನ ಏರಲಿದ್ದಾರೆ.
ಹೆಚ್ಚುವರಿ ಒಂದು ವಾರ ಬಯೋಬಬಲ್ ವಾಸ ಟೆಸ್ಟ್ ಸರಣಿ ಜ. 15ರ ತನಕ ನಡೆಯಲಿದೆ. ಅಲ್ಲಿಯ ತನಕ ಕ್ರಿಕೆಟಿಗರೆಲ್ಲ ಬಯೋಬಬಲ್‌ನಲ್ಲಿ ಇರಲಿದ್ದಾರೆ. ಏಕದಿನ ಸರಣಿಗೆ ಆಯ್ಕೆಯಾಗುವ ಆಟಗಾರರು ದಕ್ಷಿಣ ಆಫ್ರಿಕಾದಲ್ಲೇ ಉಳಿಯುವ ಕಾರಣ ಅವರು ಹೆಚ್ಚುವರಿಯಾಗಿ ಒಂದು ವಾರ ಬಯೋಬಬಲ್‌ನಲ್ಲಿ ಮುಂದುವರಿಯಬೇಕಾಗುತ್ತದೆ.
ಇದನ್ನೂ ಓದಿ:ತೆರಿಗೆ ಬಾಕಿ ವಿವಾದ: ಮಂತ್ರಿ ಮಾಲ್ ಬೀಗ ತೆರೆಯಲು ಪಾಲಿಕೆಗೆ ಹೈಕೋರ್ಟ್ ಆದೇಶ
ಹಾಗೆಯೇ ಈಗಾಗಲೇ ಭಾರತ “ಎ’ ತಂಡದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಟೆಸ್ಟ್ ತಂಡಕ್ಕೆ ಆಯ್ಕೆಯಾದವರು ಇನ್ನಷ್ಟು ದಿನಗಳ ಕಾಲ ಜೈವಿಕ ಸುರಕ್ಷ ವಲಯದಲ್ಲಿ ಇರಬೇಕಾಗುತ್ತದೆ. ಈ ಸಾಲಿಗೆ ಸೇರುವ ಪ್ರಮುಖ ಆಟಗಾರನೆಂದರೆ ಹನುಮ ವಿಹಾರಿ.
ಟೆಸ್ಟ್ ಸರಣಿಗಾಗಿ ಬುಧವಾರ ಭಾರತದ 18 ಸದಸ್ಯರ ತಂಡವನ್ನು ಪ್ರಕಟಿಸಲಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಭಾರತದ ಏಕದಿನ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಜ. 19, 21 ಮತ್ತು 23ರಂದು ಏಕದಿನ ಪಂದ್ಯಗಳನ್ನು ಆಡಲಾಗುವುದು.