ನವದೆಹಲಿ: ಮುಂದಿನ ವರ್ಷದಿಂದ ಕರ್ನಾಟಕದ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ “ಫ್ಲೀಟ್ ಮೋಡ್’ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಐದು ಮತ್ತು ಆರನೇ ಘಟಕಗಳನ್ನು ಹೊಸ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಇದರ ಜತೆಗೆ ದೇಶದಲ್ಲಿ ಹತ್ತು ಇಂಥ “ಫ್ಲೀಟ್ ಮೋಡ್’ ಅಣು ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಣು ಇಂಧನ ವಿಭಾಗದ ಅಧಿಕಾರಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರಕ್ಕಾಗಿನ ಸಂಸತ್‌ನ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.
ಕೈಗಾ ಮತ್ತು ಗೋರಖ್‌ಪುರದಲ್ಲಿನ ನಿರ್ಮಾಣ ಕಾರ್ಯಕ್ಕಾಗಿ ಎಂಜಿನಿಯರಿಂಗ್, ನಿರ್ಮಾಣ ವಿಭಾಗಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಈಗಾಗಲೇ ಶುರು ಮಾಡಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದ್ದಾರೆ.
ಕರ್ನಾಟಕವಲ್ಲದೆ ಗೋರಖ್‌ಪುರ ಹರ್ಯಾಣ ಅಣು ವಿದ್ಯುತ್ ನಿಗಮದ 3 ಮತ್ತು 4, ಮಹಿ ಬಂಸ್ವರ ರಾಜಸ್ಥಾನ್ ಅಣು ವಿದ್ಯುತ್ ಯೋಜನೆಯ 1ರಿಂದ 4 ವಿದ್ಯುತ್ ಘಟಕಗಳಲ್ಲಿ 2024ರಿಂದ ಫ್ಲೀಟ್ ಮೋಡ್’ ಘಟಕಗಳ ನಿರ್ಮಾಣ ಕಾರ್ಯ ಶುರು ಮಾಡಲಾಗುತ್ತದೆ ಎಂದು ಸ್ಥಾಯಿ ಸಮಿತಿಗೆ ವಿವರಿಸಿದ್ದಾರೆ.
ಇದನ್ನೂ ಓದಿ:ಎರಡು ವರ್ಷಗಳಿಂದ ರದ್ದಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಮತ್ತೆ ಆರಂಭ
ಪ್ರತಿಯೊಂದು ವಿದ್ಯುತ್ ಘಟಕವೂ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರಲಿದೆ. 2017ರ ಜೂನ್‌ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಈ ಯೋಜನೆ ಪೂರ್ತಿಗೊಳ್ಳಲು 1.05 ಲಕ್ಷ ಕೋಟಿ ರೂ. ಬೇಕಾಗುತ್ತದೆ. ದೇಶದಲ್ಲಿ ಸದ್ಯ 22 ರಿಯಾಕ್ಟರ್‌ಗಳು ಇದ್ದು, ಅವುಗಳ ಮೂಲಕ 6,780 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಗುಜರಾತ್‌ನ ಕಾಕ್ರಾಪಾರ್‌ನಲ್ಲಿರುವ 700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಜ.10ರಂದು ಗ್ರಿಡ್‌ಗೆ ಸೇರ್ಪಡೆ ಮಾಡಲಾಗಿದೆ.
“ಫ್ಲೀಟ್ ಮೋಡ್’ ಎಂದರೇನು?
ಪರಮಾಣು ಸ್ಥಾವರದಲ್ಲಿ ಒಂದು ಬಾರಿ ವಿದ್ಯುತ್ ಘಟಕ ನಿರ್ಮಾಣ ಮಾಡಲು ಉದ್ದೇಶಿಸಿದರೆ, ಕಾಂಕ್ರೀಟ್ ಪಾಯ ಹಾಕಿದ ಐದು ವರ್ಷಗಳ ಅವಧಿಯಲ್ಲಿ ಯೋಜನೆ ಮುಕ್ತಾಯಗೊಳಿಸಬೇಕು. ಅದನ್ನು ಫ್ಲೀಟ್ ಮೋಡ್ ಎಂದು ಕರೆಯಲಾಗುತ್ತದೆ.