ನವದೆಹಲಿ:ಕೇಂದ್ರ ಸರ್ಕಾರ ದೇಶಾದ್ಯಂತ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಜಿಪಿಎಸ್ ತಂತ್ರಜ್ಞಾನ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ತರಲಿದ್ದು, ಇನ್ನೆರಡು ವರ್ಷಗಳಲ್ಲಿ ಭಾರತ ಟೋಲ್ ಬೂತ್ ಗಳಿಂದ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಗುರುವಾರ(ಡಿಸೆಂಬರ್ 17, 2020) ಅಸೋಚಾಮ್ ಫೌಂಡೇಶನ್ ವೀಕ್ ನಲ್ಲಿ ಮಾತನಾಡಿದ ಅವರು, ನೂತನ ಟೋಲ್ ಸಂಗ್ರಹ ವ್ಯವಸ್ಥೆಯ ಕುರಿತು ಕೇಂದ್ರ ಅಂತಿಮಗೊಳಿಸಿದೆ. ಇದನ್ನು ರಷ್ಯಾ ಸರ್ಕಾರದ ಜತೆಗೂಡಿ ಜಾರಿಗೊಳಿಸಲಾಗುವುದು ಎಂದರು.
ಇಂದು ಎಲ್ಲಾ ವಾಣಿಜ್ಯ ವಾಹನಗಳಲ್ಲೂ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಇರುತ್ತದೆ. ಹೀಗಾಗಿ ಜಿಪಿಎಸ್ ತಂತ್ರಜ್ಞಾನದ ಮೂಲಕ ವಾಹನದ ಸಂಚಾರ ಮಾರ್ಗ ಪತ್ತೆಹಚ್ಚಿ ಬ್ಯಾಂಕ್ ಖಾತೆಯಿಂದ ನೇರವಾಗಿಯೇ ಟೋಲ್ ಹಣ ಕಡಿತವಾಗುವಂತೆ ಮಾಡಬಹುದು ಎಂದರು.
ಟೋಲ್ ಬೂತ್ ಗಳಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಫಾಸ್ಟ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಿದೆ. ಇನ್ನು ಹಳೆಯ ವಾಹನಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸುವ ಮಾರ್ಗದ ಬಗ್ಗೆ ಕೇಂದ್ರ ಸರ್ಕಾರ ಯೋಜನೆ ಕಂಡುಹಿಡಿಯುತ್ತಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ.
ಸಚಿವರ ಹೇಳಿಕೆ ಪ್ರಕಾರ, ಭಾರತದ ರಾಷ್ಟ್ರೀಯ ಪ್ರಾಧಿಕಾರ(ಎನ್ ಎಚ್ ಎಐ) ದೇಶದಲ್ಲಿ ಜಿಪಿಎಸ್ ಆಧಾರಿತ ವ್ಯವಸ್ಥೆ ಜಾರಿಗೆ ಬಂದ ನಂತರ 5 ವರ್ಷಗಳಲ್ಲಿ 1.34 ಟ್ರಿಲಿಯನ್ ಆದಾಯ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.