ಹೊಸದಿಲ್ಲಿ: ಪುಲ್ವಾಮಾ ದಾಳಿ ನಡೆದ ನಂತರದಲ್ಲಿ ಪಾಕಿಸ್ಥಾನದ ಇಸ್ಲಾಮಾಬಾದ ಹಾಗೂ ಇತರ ನಗರಗಳ ಮೇಲೆ ಕ್ಷಿಪಣಿ ಉಡಾವಣೆ ಮಾಡುವ ಬೆದರಿಕೆಯನ್ನು ಭಾರತ ಒಡ್ಡಿತ್ತು. ಅಷ್ಟೇ ಅಲ್ಲ, ಒಂದು ವೇಳೆ ಭಾರತ ಒಂದು ಕ್ಷಿಪಣಿ ಉಡಾವಣೆ ಮಾಡಿದರೆ ನಾವು ಮೂರು ಕ್ಷಿಪಣಿ ಉಡಾಯಿಸುತ್ತೇವೆ ಎಂದು ಪಾಕಿಸ್ಥಾನ ಹೇಳಿತ್ತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಭಾರತ ಕ್ಷಿಪಣಿ ಉಡಾವಣೆ ಮಾಡುವ ಬೆದರಿಕೆಯನ್ನು ಯಾವ ರೂಪದಲ್ಲಿ ಒಡ್ಡಿತ್ತು ಎಂಬುದು ತಿಳಿದು ಬಂದಿಲ್ಲ. ಭಾರತ ಇಂತಹ ಬೆದರಿಕೆ ಒಡ್ಡಿತ್ತು ಎಂದು ಪಾಕಿಸ್ಥಾನದ ಸಚಿವರೊಬ್ಬರು ಹೇಳಿದ್ದಾರೆ. ಇನ್ನು ದಾಳಿ ನಂತರದಲ್ಲಿ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಅವರು, ಪಾಕಿಸ್ಥಾನದ ಐಎಸ್‌ಎಸ್ ಮುಖ್ಯಸ್ಥ ಅಬ್ದುಲ್ ಮುನೀರ್ ಜೊತೆ ಮಾತನಾಡಿದ್ದು, ಉಗ್ರರ ವಿರುದ್ಧ ಕೈಗೊಳ್ಳುವ ವಿಚಾರದಲ್ಲಿ ಭಾರತ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಆದರೆ ಉಭಯ ದೇಶಗಳ ಮಧ್ಯದ ಉದ್ವಿಗ್ನ ಪರಿಸ್ಥಿತಿ ಕಡಿಮೆಯಾಗಲು ಅಮೆರಿಕ ಹಾಗೂ ಇತರ ದೇಶಗಳ ಮಧ್ಯಸ್ಥಿಕೆ ನೆರವಾಗಿದೆ ಎನ್ನಲಾಗಿದೆ.