ನವದೆಹಲಿ:ಭಾರತ ಸೋಮವಾರ (ಸೆಪ್ಟೆಂಬರ್ 07,2020) ನಡೆಸಿದ್ದ ಹೈಪರ್ ಸಾನಿಕ್ ಟೆಕ್ನಾಲಜಿ ಡೆಮೊನ್ ಸ್ಟ್ರೇಷನ್ ವೆಹಿಕಲ್ (ಎಚ್ ಎಸ್ ಟಿಡಿವಿ) ಪರೀಕ್ಷೆಯನ್ನು ಒಡಿಶಾದ ಕರಾವಳಿ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸಿದ್ದು, ಈ ಮೂಲಕ ದೇಶಿ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ನೆಟ್ಟಂತಾಗಿದೆ.
ಎಚ್ ಎಸ್ ಟಿಡಿವಿ ಹೈಪರ್ ಸಾನಿಕ್ ತಂತ್ರಜ್ಞಾನ ಉಪಯೋಗಿಸಿಕೊಂಡು ನಿರ್ಮಿಸಲಾಗಿತ್ತು. ಇದನ್ನು ಡಿಆರ್ ಡಿಒ(ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗೈನೈಸೇಶನ್) ಅಭಿವೃದ್ಧಿಪಡಿಸಿರುವದಾಗಿ ವರದಿ ತಿಳಿಸಿದೆ.
ಎಚ್ ಎಸ್ ಟಿಡಿವಿ ಯಶಸ್ವಿ ಹಾರಾಟ ನಡೆಸಿದ ನಾಲ್ಕನೇ ದೇಶಗಳ ಸಾಲಿನಲ್ಲಿ ಭಾರತ ಸೇರ್ಪಡೆಯಾಗಿದೆ. ಈ ಮೊದಲು ರಷ್ಯಾ, ಚೀನಾ ಮತ್ತು ಅಮೆರಿಕ ಹೈಪರ್ ಸಾನಿಕ್ ವಾಹನದ ಯಶಸ್ವಿ ಪರೀಕ್ಷೆ ನಡೆಸಿದ್ದವು.
ಹೈಪರ್ ಸಾನಿಕ್ ಕ್ರೂಸ್ ಮಿಸೈಲ್ ಅನ್ನು ಒಂದು ವೇಳೆ ಮತ್ತಷ್ಟು ಅಭಿವೃದ್ದಿಪಡಿಸಿದರೆ ಚೀನಾದ ಯಾವುದೇ ಪ್ರತಿರೋಧಕ ವ್ಯವಸ್ಥೆಯನ್ನು ಸೋಲಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ದೇಶಿ ತಂತ್ರಜ್ಞಾನವು ಶಬ್ದದ ಆರು ಪಟ್ಟು ವೇಗದಲ್ಲಿ (ಮ್ಯಾಕ್ 6)ಹಾರಾಡುವ ಕ್ಷಿಪಣಿಗಳ ಅಭಿವೃದ್ಧಿಗೆ ಪೂರಕವಾಗಬಲ್ಲದಾಗಿದೆ. ಕೇವಲ 20 ಸೆಕೆಂಡುಗಳಲ್ಲಿ 32.5 ಮೀಟರ್ ಎತ್ತರಕ್ಕೆ ನೆಗೆಯಬಲ್ಲ ಸಾಮರ್ಥ್ಯ ಎಚ್ ಎಸ್ ಟಿಡಿವಿ ಹೊಂದಿದೆ ಎಂದು ಹೇಳಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ ಡಿಒ ವಿಜ್ಞಾನಿಗಳನ್ನು ಅಭಿನಂದಿಸಿದ್ದು, ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ “ಆತ್ಮನಿರ್ಭರ್ ಭಾರತ್” ಕನಸು ನನಸಾಗಲು ಇದೊಂದು ಐತಿಹಾಸಿಕ ಸಾಧನೆಯ ಮೈಲಿಗಲ್ಲಾಗಿದ್ದು, ಡಿಆರ್ ಡಿಒ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ನಾನು ವಿಜ್ಞಾನಿಗಳ ಜತೆ ಮಾತನಾಡಿ ಇಡೀ ತಂಡವನ್ನು ಅಭಿನಂದಿಸಿದ್ದೇನೆ. ಇದು ನಮ್ಮ ದೇಶದ ಹೆಮ್ಮೆ ಎಂದು ರಾಜನಾಥ್ ಟ್ವೀಟ್ ಮಾಡಿದ್ದಾರೆ.