Advertisement
ಮುಂಬಯಿಯಲ್ಲಿ ಎಂಎಸ್‌ಕೆ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಗುರುವಾರ ಸಭೆ ಸೇರುತ್ತಿದೆ. ಈ ವೇಳೆ ಉಪನಾಯಕ ರೋಹಿತ್ ಶರ್ಮ ಕೆಲಸದ ಹೊರೆ ನಿರ್ವಹಣೆ, ಶಿಖರ್ ಧವನ್ ಕಳಪೆ ಫಾರ್ಮ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಭಾರತದ ಆತಿಥ್ಯದಲ್ಲಿ ವಿಂಡೀಸ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದಕ್ಕಾಗಿ ತಂಡವನ್ನು ಆಯ್ಕೆ ಮಾಡಲು ಸಭೆ ನಡೆಸಲಾಗುತ್ತಿದೆ. ಡಿ. 6ರಂದು ಮುಂಬಯಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಡಿ. 15ರಿಂದ ಚೆನ್ನೈನಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ.
ಸತತ ಪಂದ್ಯಗಳನ್ನು ಆಡುತ್ತಿರುವ ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ಸಿಗಬಹುದು ಎನ್ನಲಾಗಿದೆ. ರೋಹಿತ್ ಶರ್ಮ ಟಿ20 ಸರಣಿಗೆ ಲಭ್ಯವಿದ್ದು ಆ ಬಳಿಕ ನಡೆಯಲಿರುವ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಉಪನಾಯಕನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಹೇಳಲಾಗಿದೆ. ಪ್ರಸಕ್ತ ವರ್ಷ ರೋಹಿತ್ 25 ಏಕದಿನ ಪಂದ್ಯ, 11 ಟಿ20 ಜತೆಗೆ ಟೆಸ್ಟ್ ಕೂಡ ಆಡಿದ್ದಾರೆ. ನಾಯಕ ಕೊಹ್ಲಿಗಿಂತ ಹೆಚ್ಚು ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಕೊಹ್ಲಿಗೆ ಹಿಂದೆ ಎರಡು ಸಲ ವಿಶ್ರಾಂತಿ ನೀಡಲಾಗಿತ್ತು. ವಿಶ್ರಾಂತಿ ಬಳಿಕ ರೋಹಿತ್ ಅವರು 2020ರಲ್ಲಿ ನ್ಯೂಜಿಲ್ಯಾಂಡ್ ಸರಣಿ ಪ್ರವಾಸಕ್ಕೆ ಲಭ್ಯವಾಗಲಿದ್ದಾರೆ. ಕಿವೀಸ್ ಪ್ರವಾಸಕ್ಕೂ ಮೊದಲು ರೋಹಿತ್ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎನ್ನಲಾಗಿದೆ. ಕಿವೀಸ್ ನೆಲದಲ್ಲಿ ಭಾರತ 5 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಸರಣಿ ಆಡಲಿದೆ. ಧವನ್‌ಗೆ ಪರೀಕ್ಷೆ
ವರ್ಷದ ಆರಂಭಕ್ಕೂ ಮೊದಲು ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಉತ್ತಮ ನಿರ್ವಹಣೆ ನೀಡಲು ವಿಫಲರಾಗಿದ್ದರು. ಮಾತ್ರವಲ್ಲದೇ ದೇಶೀಯ ಪಂದ್ಯಗಳಲ್ಲೂ ಅವರ ನಿರ್ವಹಣೆ ಗಮನಾರ್ಹವಾಗಿಲ್ಲ. ಆದರೆ ಮಯಾಂಕ್ ಅಗರ್ವಾಲ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಅವರೊಂದಿಗೆ ಕರ್ನಾಟಕದ ಕೆ.ಎಲ್.ರಾಹುಲ್ ಕೂಡ ಆರಂಭಿಕ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಧವನ್‌ಗೆ ಸ್ಥಾನ ಸಿಗುವುದು ಕಷ್ಟ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
Related Articles
ಧೋನಿ ಅಲಭ್ಯ ಎನ್ನುವುದು ಸದ್ಯದ ಸುದ್ದಿ. ಆದರೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ರಿಷಭ್ ಪಂತ್ ವಿಫಲವಾದರೆ ಧೋನಿ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಗಾಯದಿಂದ ಬಳಲಿದ್ದ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ತಂಡಕ್ಕೆ ಮತ್ತೆ ಲಭ್ಯವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
Advertisement